ಅಲ್ಪ ಸಂಖ್ಯಾತ ಜನಾಂಗದ ಕಾನೂನು ಪದವೀಧರರಿಗೆ ತರಬೇತಿ/ಭತ್ಯೆಗೆ ಅರ್ಜಿ ಆಹ್ವಾನ
ದಾವಣಗೆರೆ, ಜು.26: ಪ್ರಸಕ್ತ ಸಾಲಿನ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬುದ್ಧ, ಪಾರ್ಸಿ, ಸಿಖ್ ಅಲ್ಪಸಂಖ್ಯಾತರ ಜನಾಂಗಕ್ಕೆ ಸೇರಿದ ದಾವಣಗೆರೆ ಜಿಲ್ಲೆಯ ಇಬ್ಬರು ನಿರುದ್ಯೋಗಿ ಕಾನೂನು ಪದವೀಧರರಿಗೆ ಆಡಳಿತ ನ್ಯಾಯಾಧಿಕರಣದಲ್ಲಿ ತರಬೇತಿ/ಭತ್ಯೆ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕೊಠಡಿ ಸಂಖ್ಯೆ: 44, ಎರಡನೇ ಮಹಡಿ, ಜಿಲ್ಲಾಡಳಿತ ಭವನ, ದಾವಣಗೆರೆ ಇಲ್ಲಿ ಕಛೇರಿ ವೇಳೆಯಲ್ಲಿ ಅರ್ಜಿಗಳನ್ನು ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಅವಶ್ಯಕ ದಾಖಲೆಗಳೊಂದಿಗೆ ಆಗಸ್ಟ್ 15 ರೊಳಗಾಗಿ ಈ ಕಛೇರಿಗೆ ಸಲ್ಲಿಸಬಹುದಾಗಿದೆ.
ಅಭ್ಯರ್ಥಿಗಳು ಮತೀಯ ಅಲ್ಪಸಂಖ್ಯಾತರ ಸಮುದಾಯ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬುದ್ಧ, ಪಾರ್ಸಿ, ಹಾಗೂ ಸಿಖ್ ಜನಾಂಗಕ್ಕೆ ಸೇರಿದವರಾಗಿದ್ದು, ಕುಟುಂಬ ವಾರ್ಷಿಕ ಆದಾಯ ರೂ. 3.50 ಲಕ್ಷಗಳನ್ನು ಮೀರಿರಬಾರದು. (ಜಾತಿ ಮತ್ತು ಆದಾಯ ದೃಢೀಕರಣ ಪತ್ರ ಲಗತ್ತಿಸಬೇಕು) ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ (ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ) 30 ವರ್ಷಗಳು ಮೀರಿರಬಾರದು. (ಜನ್ಮ ದಿನಾಂಕ ದೃಢೀಕರಣ ಪತ್ರ ಲಗತ್ತಿಸಬೇಕು). ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ್ಕೆ ಕಾನೂನು ಪದವಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ 2 ವರ್ಷಗಳ ಅವಧಿಯೊಳಗಿನ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಅಭ್ಯರ್ಥಿಗಳು ನಿರುದ್ಯೋಗಿಗಳಾಗಿದ್ದು, ಯಾವುದೇ ಇಲಾಖೆಯಲ್ಲಿ ತರಬೇತಿ/ಭತ್ಯೆ ಪಡೆಯುತ್ತಿರಬಾರದು. ತರಬೇತಿ ಅವಧಿ 4 ವರ್ಷಗಳಾಗಿದ್ದು, ಮಾಸಿಕ ದಿನಚರಿಯನ್ನಾಧರಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಶಿಷ್ಯವೇತನ ನೀಡಲಾಗುವುದು. ಅಭ್ಯರ್ಥಿಗಳು ತಮ್ಮ ಹೆಸರನ್ನು ಜಿಲ್ಲೆಯ ಹಾಗೂ ರಾಜ್ಯದ ಬಾರ್ ಕೌನ್ಸಿಲ್‌ನಲ್ಲಿ ನೊಂದಾಯಿಸಿರಬೇಕು. ಆಯ್ಕೆಯಾದ ಅಭ್ಯರ್ಥಿಗಳನ್ನು ಜಿಲ್ಲಾ ಸರ್ಕಾರಿ ವಕೀಲರು ಅಥವಾ 20 ವರ್ಷಗಳ ಅನುಭವವುಳ್ಳ ಯಾವುದೇ ವಕೀಲರ ಅಧೀನದಲ್ಲಿ ತರಬೇತಿಗೆ ನಿಯೋಜಿಸಲಾಗುವುದು. ಅಗತ್ಯ ದಾಖಲಾತಿಗಳು, ಲಗತ್ತುಗಳಿಲ್ಲದ, ನಿಗದಿತ ದಿನಾಂಕದ ನಂತರ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.