×
Ad

ಸೂಕ್ತ ಚಿಕಿತ್ಸೆಗೆ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಸೂಚನೆ

Update: 2017-07-26 20:08 IST

ಮಡಿಕೇರಿ, ಜು.26: ಜಿಲ್ಲೆಯಲ್ಲಿ 6 ರಿಂದ 21 ವರ್ಷದೊಳಗಿನ ಹಾಡಿಯ ಮಕ್ಕಳು ಸಿಕಲ್ ಸೆಲ್ ಅನಾಮಿಯಾ ರಕ್ತ ಹೀನತೆಯಿಂದ ಬಳಲುತ್ತಿರುವ ಬಗ್ಗೆ ಸ್ಕ್ರೀನಿಂಗ್ ಪರೀಕ್ಷೆ ಮಾಡಬೇಕಿದ್ದು, ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ನಿರ್ದೇಶನ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆದಿವಾಸಿಗಳಿಗೆ ಸಿಕಲ್ ಸೆಲ್ ಅನಾಮಿಯಾ ರಕ್ತ ಹೀನತೆಯಿಂದ ಬಳಲುತ್ತಿರುವ ಬಗ್ಗೆ ಸ್ಕ್ರೀನಿಂಗ್ ಪರೀಕ್ಷೆ ಪ್ರಗತಿ ಬಗ್ಗೆ ಮಾಹಿತಿ ಪಡೆದು ಅವರು ಮಾತನಾಡಿದರು. ಸಿಕಲ್ ಸೆಲ್ ಅನಾಮಿಯಾ ರಕ್ತ ಹೀನತೆಯಿಂದ ಬಳಲುತ್ತಿರುವ ಬಗ್ಗೆ ಸ್ಕ್ರೀನಿಂಗ್ ಪರೀಕ್ಷೆಯ ಯಂತ್ರೋಪಕರಣಗಳನ್ನು ತರಿಸಿ ಪರೀಕ್ಷೆ ಮಾಡಿ ಆರೋಗ್ಯ ಸೇವೆ ಒದಗಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗೆ ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು. ಇದಕ್ಕೆ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಒ.ಆರ್.ಶ್ರೀರಂಗಪ್ಪ ಅವರು ಜಿಲ್ಲೆಯಲ್ಲಿ 6 ರಿಂದ 21 ವರ್ಷದೊಳಗಿನ ಸುಮಾರು 9,931 ಮಂದಿ ಯುವ ಜನರಿದ್ದು, ಇವರಿಗೆ ಸ್ಕ್ರೀನಿಂಗ್ ಪರೀಕ್ಷೆ ಮಾಡಲು ಮಾರ್ಗಸೂಚಿ ಮಾಡಲಾಗಿದೆ. ಈ ಸಂಬಂಧ ಕೊಡಗು, ಮೈಸೂರು, ಚಾಮರಾಜನಗರ, ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳು ಸೇರಿ ವಿಭಾಗ ಮಟ್ಟದಲ್ಲಿ ಸ್ಕ್ರೀನಿಂಗ್ ಟೆಸ್ಟ್ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ಸಮಿತಿ ಸದಸ್ಯರಾದ ಎಸ್.ಎನ್.ರಾಜಾರಾವ್ ಅವರು 6 ರಿಂದ 21 ವರ್ಷದೊಳಗಿನ ಯುವಜನರನ್ನು ಹೇಗೆ ಅಂದಾಜು ಮಾಡಿದ್ದೀರಿ, ನಮ್ಮ ಗಮನಕ್ಕೆ ಬರದೆ ಹಾಡಿಗಳಿಗೆ ಎಎನ್‌ಎಂ.ಗಳು ಮತ್ತು ಆಶಾ ಕಾರ್ಯಕರ್ತೆಯರು ಯಾವಾಗ ಭೇಟಿ ನೀಡಿದ್ದಾರೆ. ಈ ಅಂಕಿ ಅಂಶ ಸಮರ್ಪಕವಾಗಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಹಾಡಿಗಳಿಗೆ ಭೇಟಿ ನೀಡುವಾಗ ಸಮಿತಿ ಸದಸ್ಯರ ಗಮನಕ್ಕೆ ತಂದಿದ್ದರೆ ಇನ್ನಷ್ಟು ಯುವ ಜನರನ್ನು ಗುರುತಿಸಬಹುದಾಗಿತ್ತು, ಆದರೆ ಈ ಕಾರ್ಯವಾಗಿಲ್ಲ ಎಂದು ಎಸ್.ಎನ್.ರಾಜಾರಾವ್ ಹೇಳಿದರು.

ಇದಕ್ಕೆ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರು ಐಟಿಡಿಪಿ ಇಲಾಖೆಯಿಂದ ಹಾಡಿಗಳ ಪಟ್ಟಿ ಪಡೆದು ಸಮೀಕ್ಷೆ ಮಾಡಲಾಗಿದೆ ಎಂದು ಅವರು ತಿಳಿಸಿದರು. ಇದಕ್ಕೆ ಅಸಮಾದಾನ ವ್ಯಕ್ತಪಡಿಸಿದ ಸಮಿತಿ ಸದಸ್ಯರಾದ ಕುಮಾರ್ ಅವರು 6 ರಿಂದ 21 ವರ್ಷದೊಳಗಿನ ಯುವ ಜನರನ್ನು ಸರಿಯಾಗಿ ಸರ್ವೆ ಮಾಡಿಲ್ಲ ಎಂದರು. ಜಿಲ್ಲೆಯಲ್ಲಿ 60 ಸಾವಿರಕ್ಕೂ ಹೆಚ್ಚು ಬುಡಕಟ್ಟು ಜನಾಂಗದವರಿದ್ದು, ಇವರಿಗೆ ಸರ್ಕಾರ ಹಲವು ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಿದೆ. ಅವುಗಳನ್ನು ತಲುಪಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. 6 ರಿಂದ 21 ವರ್ಷದೊಳಗಿನ ಮಕ್ಕಳನ್ನು ಗುರುತಿಸುವ ಸಂಬಂಧ ಸೋಮವಾರಪೇಟೆ ತಾಲ್ಲೂಕಿಗೆ ಎಸ್.ಎನ್.ರಾಜಾರಾವ್, ವಿರಾಜಪೇಟೆ ತಾಲ್ಲೂಕಿಗೆ ಜೆ.ಕೆ.ರಾಮು, ಮಡಿಕೇರಿ ತಾಲ್ಲೂಕಿಗೆ ಕುಮಾರ್ ಅವರನ್ನು ನಿಯೋಜಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಸಂದರ್ಭ ಮಧ್ಯ ಪ್ರವೇಶಿಸಿ ಮಾತನಾಡಿದ ಎಸ್.ಎನ್.ರಾಜಾರಾವ್ ಅವರು ಜಿಲ್ಲೆಯ ಬಸವನಹಳ್ಳಿ, ಬ್ಯಾಡಗೊಟ್ಟ, ಸೂಳೆಬಾವಿ, ಸಜ್ಜಳ್ಳಿ ಮತ್ತಿತರ ಹಾಡಿಗಳಲ್ಲಿ ಸಾಂಕ್ರಾಮಿಕ ರೋಗಗಳು ಉಲ್ಬಣವಾಗುತ್ತಿದೆ. ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದು ಅವರು ಸಲಹೆ ನೀಡಿದರು.

ದಿಡ್ಡಳ್ಳಿಯ ಗಿರಿಜನರಿಗೆ ಪುನರ್ ವಸತಿ ಕಲ್ಪಿಸಲಾಗಿರುವ ಬಸವನಹಳ್ಳಿ ಹಾಗೂ ಬ್ಯಾಡಗೊಟ್ಟ ಗ್ರಾಮಗಳಿಗೆ ಜು.28 ರಂದು ಭೇಟಿ ನೀಡಿ ಪರಿಶೀಲಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಐಟಿಡಿಪಿ ಇಲಾಖಾ ಅಧಿಕಾರಿ ಪ್ರಕಾಶ್ ಅವರು ಸಿಕಲ್ ಸೆಲ್ ಅನಾಮಿಯಾ ರಕ್ತ ಹೀನತೆ ಖಾಯಿಲೆಯಿಂದ ಬಳಲುತ್ತಿರುವ ಬಗ್ಗೆ ಸ್ಕ್ರೀನಿಂಗ್ ಪರೀಕ್ಷೆ ಮಾಡುವ ಸಂಬಂಧ ಹಲವು ಮಾಹಿತಿ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News