ಸರಕಾರದ ಸೌಲಭ್ಯ ಸಕಾಲದಲ್ಲಿ ತಲುಪಿಸಲು ಜಿಲ್ಲಾಧಿಕಾರಿ ಸೂಚನೆ
ಮಡಿಕೇರಿ, ಜು.26: ಸರ್ಕಾರ ಪರಿಶಿಷ್ಟ ಪಂಗಡದವರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳನ್ನು ತಲುಪಿಸುವಲ್ಲಿ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಬೇಕಿದೆ ಎಂದು ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಮೂಲ ನಿವಾಸಿ ಜೇನು ಕುರುಬ ಜನಾಂಗದವರ ಅಭಿವೃದ್ಧಿ ಯೋಜನೆಯ ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಾತಿ ಪ್ರಮಾಣ ಪತ್ರ ಇಲ್ಲದೆ ಜಿಲ್ಲೆಯ ಆದಿವಾಸಿ ಜನರು ಸಂಕಷ್ಟ ಪಡುತ್ತಿರುವ ಬಗ್ಗೆ ಹಲವು ಸಭೆಗಳಲ್ಲಿ ಕೇಳಿಬರುತ್ತಿದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಜಿಲ್ಲೆಯ ಆದಿವಾಸಿಗಳು ಯಾವ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಎಂಬ ಬಗ್ಗೆ ಬಿಳಿ ಹಾಳೆಯಲ್ಲಿ ನಾಡ ಕಚೇರಿಗೆ ಅರ್ಜಿ ಸಲ್ಲಿಸಿ ಕಾಲಮಿತಿಯೊಳಗೆ ಜಾತಿ ಪ್ರಮಾಣ ಪತ್ರ ಪಡೆಯುವಂತಾಗಬೇಕು ಎಂದರು.
ಐಟಿಡಿಪಿ ಇಲಾಖೆ ಕಾರ್ಯಕ್ರಮಗಳ ಜೊತೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹೀಗೆ ನಾನಾ ಇಲಾಖೆಗಳಲ್ಲಿ ಪರಿಶಿಷ್ಟರಿಗಾಗಿ ಮೀಸಲಿರುವ ಅನುದಾನ ಬಳಕೆಯಲ್ಲಿ ಪ್ರಗತಿ ಕುಂಠಿತಗೊಂಡಿದ್ದು, ಈ ಸಂಬಂಧ ಪ್ರತಿಯೊಂದು ಕುಟುಂಬಕ್ಕೂ ಜಾತಿ ಪ್ರಮಾಣ ಪತ್ರ ಪಡೆಯುವಂತಾಗಲು ಅಗತ್ಯ ಮಾಹಿತಿ ನೀಡಬೇಕಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಜಿಲ್ಲೆಯಲ್ಲಿ ವಸತಿ ಯೋಜನೆಗೆ ಸಂಬಂಧಿಸಿದಂತೆ 192 ಮನೆಗಳ ನಿರ್ಮಾಣ ಕಾರ್ಯ ಬಾಕಿ ಇದ್ದು, ಎರಡು ತಿಂಗಳೊಳಗೆ ಮನೆಗಳ ಕಾಮಗಾರಿ ಪೂರ್ಣಗೊಳಿಸಬೇಕು. ಈ ಸಂಬಂಧ ಸ್ಥಳೀಯ ಗುತ್ತಿಗೆದಾರರನ್ನು ಸಂಪರ್ಕಿಸಿ ಮನೆ ಪೂರ್ಣಗೊಳಿಸಬೇಕು. ವಸತಿ ಕಾಮಗಾರಿ ಪ್ರಗತಿ ಸಾಧಿಸದಿದ್ದಲ್ಲಿ ರದ್ದುಪಡಿಸಬೇಕಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅವರು ಎಚ್ಚರಿಕೆ ನೀಡಿದರು. ಅರ್ಹರಿಗೆ ಸರ್ಕಾರದ ಸೌಲಭ್ಯಗಳು ತಲುಪಬೇಕು. ಆದರೆ ಸೌಲಭ್ಯವನ್ನು ನೀಡಿದವರಿಗೆ ಪದೇ ಪದೇ ನೀಡುವುದು ಬೇಡ. ಸರ್ಕಾರದ ಸೌಲಭ್ಯಗಳು ಪ್ರತಿಯೊಬ್ಬರಿಗೂ ತಲುಪಿದಾಗ ಮಾತ್ರ ಪ್ರತಿಯೊಬ್ಬರೂ ಆರ್ಥಿಕವಾಗಿ ಸಬಲರಾಗಲು ಸಾಧ್ಯ. ಆ ನಿಟ್ಟಿನಲ್ಲಿ ಗಮನಹರಿಸುವಂತೆ ಐಟಿಡಿಪಿ ಇಲಾಖೆ ಅಧಿಕಾರಿಗೆ ನಿರ್ದೇಶನ ನೀಡಿದರು. ಆದಿವಾಸಿಗಳಿಗೆ ಅನುಕೂಲವಾಗುವ ಮತ್ತು ಫಲಾನುಭವಿಗಳು ಲಭ್ಯವಾಗುವ ಕ್ರಿಯಾಯೋಜನೆ ತಯಾರಿಸಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಸಮಿತಿ ಸದಸ್ಯರಾದ ಜೆ.ಕೆ.ರಾಮು, ಜೆ.ಪಿ.ರಾಜು, ಇಂದಿರಾ, ಸೋಮಯ್ಯ ಅವರು ಹಲವು ಮಾಹಿತಿ ನೀಡಿದರು. ಐಟಿಡಿಪಿ ಇಲಾಖೆ ಅಧಿಕಾರಿ ಪ್ರಕಾಶ್, ಜಿ.ಪಂ.ಎಂಜಿನಿಯರ್ ರಾಜ್‌ಕುಮಾರ್ ರೆಡ್ಡಿ, ಪಶುಪಾಲನೆ ಇಲಾಖೆ ಉಪ ನಿರ್ದೇಶಕರಾದ ಆನಂದ್, ವಿರಾಜಪೇಟೆ ತಾಲ್ಲೂಕು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪಡ್ನೇಕರ್, ಐಟಿಡಿಪಿ ಇಲಾಖೆ ಅಧಿಕಾರಿ ಚಂದ್ರಶೇಖರ್, ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕರಾದ ಸಚಿನ್, ಲೋಹಿತ್, ರಂಗಸ್ವಾಮಿ ಇತರರು ಹಾಜರಿದ್ದರು.