ನಾಲೆಗೆ ನೀರುಹರಿಸಲು ಆಗ್ರಹಿಸಿ ರೈತಸಂಘ, ಜಯಕರ್ನಾಟಕ ಸಂಘಟನೆಯಿಂದ ರಸ್ತೆತಡೆ
ಮಂಡ್ಯ, ಜು.26: ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ಹರಿಸುತ್ತಿರುವ ನೀರು ಸ್ಥಗಿತಗೊಳಿಸಿ, ನಾಲೆಗಳಿಗೆ ಹರಿಸುವಂತೆ ಒತ್ತಾಯಿಸಿ ರೈತಸಂಘ ಹಾಗು ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಬುಧವಾರ ರಸ್ತೆತಡೆ ನಡೆಸಿದರು.
ಕಾವೇರಿವನದ ಎದುರಿನ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ರಸ್ತೆತಡೆ ನಡೆಸಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ ಪ್ರತಿಭಟನಾಕಾರರು, ನಂತರ, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿ ಧರಣಿ ಕೈಗೊಂಡರು.
ಕಳೆದ ವರ್ಷದ ನವೆಂಬರ್‌ನಲ್ಲಿ ನಾಲೆಗೆ ನೀರು ನಿಲ್ಲಿಸಿದ್ದು, ಇದುವರೆಗೂ ನಾಲೆಗೆ ನೀರು ಹರಿಸದೆ ರೈತರನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಲಾಗಿದೆ. ಜಲಾಶಯಕ್ಕೆ ಅಲ್ಪಸ್ವಲ್ಪ ಬರುತ್ತಿರುವ ನೀರಿನಲ್ಲೂ ತಮಿಳುನಾಡಿಗೆ ಹರಿಸಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸತತ ಮೂರು ವರ್ಷದಿಂದ ಜಿಲ್ಲೆಯಲ್ಲಿ ಬರಗಾಲವಿದ್ದು, ರಾಜ್ಯದಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಕ್ಷಾಂತರ ಕೂಲಿಕಾರ್ಮಿಕರು ಗುಳೇ ಹೋಗಿದ್ದಾರೆ. ಇದಕ್ಕೆಲ್ಲಾ ಸರಕಾರದ ಧೋರಣೆ ಕಾರಣ ಎಂದು ಅವರು ಆರೋಪಿಸಿದರು.
ಕೂಡಲೇ ಕಾವೇರಿ ಕಣಿವೆಯ ಎಲ್ಲ ನಾಲೆಗಳಿಗೆ ನೀರುಹರಿಸಬೇಕು. ತಮಿಳುನಾಡಿಗೆ ಹೋಗುತ್ತಿರುವ ನೀರನ್ನು ಸ್ಥಗಿತಗೊಳಿಸಬೇಕು. ಸಮರ್ಪಕವಾಗಿ ಬೆಳೆನಷ್ಟ ಪರಿಹಾರ ವಿತರಿಸಬೇಕು. ಸಾಲ ವಸೂಲಾತಿ ನಿಲ್ಲಿಸಿ ರೈತರಿಗೆ ಹೊಸದಾಗಿ ಸಾಲ ವಿತರಿಸಬೇಕು. ಪ್ರಸಕ್ತ ಸಾಲಿನ ಕಬ್ಬಿಗೆ ಕನಿಷ್ಠ 3,500 ರೂ. ನಿಗದಿಪಡಿಸಬೇಕು ಎಂದು ಅವರು ಆಗ್ರಹಿಸಿದರು.
ರೈತಸಂಘದ ಜಿಲ್ಲಾಧ್ಯಕ್ಷ ಶಂಭೂನಹಳ್ಳಿ ಸುರೇಶ್, ಲಿಂಗಪ್ಪಾಜಿ, ಬಿ.ಬೊಮ್ಮೇಗೌಡ, ಇಂಡುವಾಳು ಸಿದ್ದೇಗೌಡ, ಜಿಪಂ ಮಾಜಿ ಸದಸ್ಯ ಕೆ.ಟಿ.ಗೋವಿಂದೇಗೌಡ, ಶಿವಳ್ಳಿ ಚಂದ್ರು, ಹನಿಯಂಬಾಡಿ ನಾಗರಾಜು, ಪಿ.ಕೆ.ನಾಗಣ್ಣ, ಅರುಣ ಜ್ಯೋತಿ, ಕೀಲಾರ ಸೋಮಶೇಖರ್, ಹೆಮ್ಮಿಗೆ ಮಧು, ನಾಗರಾಜು, ಲತಾ ಶಂಕರ್, ದೇವರಾಜು, ಜಯ ಕನಾಟಕ ಜಿಲ್ಲಾಧ್ಯಕ್ಷ ಯೋಗಣ್ಣ, ರಾಜ್ಯ ಉಪಾಧ್ಯಕ್ಷ ಎಸ್.ನಾರಾಯಣ್, ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.