×
Ad

ಜಿಲ್ಲಾ ಗಿರಿಜನ ಇಲಾಖೆಯ ಅಧಿಕಾರಿಯನ್ನು ವರ್ಗಾಣೆಗೊಳಿಸಲು ಒತ್ತಾಯ

Update: 2017-07-27 18:16 IST

ಚಿಕ್ಕಮಗಳೂರು, ಜು.27: ಆದಿವಾಸಿಗಳ ವಿಚಾರದಲ್ಲಿ ತಾರತಮ್ಯ ಮತ್ತು ಬೇಜವಾಬ್ದಾರಿತನ ತೋರುತ್ತಿರುವ ಜಿಲ್ಲಾ ಗಿರಿಜನ ಇಲಾಖೆಯ ಅಧಿಕಾರಿಯನ್ನು ವರ್ಗಾಣೆಗೊಳಿಸಬೇಕು ಎಂದು ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಗುರುವಾರ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಜಿಲ್ಲಾ ಗಿರಿಜನ ಇಲಾಖೆಯಿಂದ ಆದಿವಾಸಿಗಳಿಗೆ ಯಾವುದೇ ಅನುಕೂಲವೂ ಆಗುತ್ತಿಲ್ಲ. ಇಲಾಖೆಯ ಯೋಜನಾ ಸಮನ್ವಯಾಧಿಕಾರಿಗಳು ಸರ್ವಾಧಿಕಾರದಿಂದ ಮೆರೆಯುತ್ತಿದ್ದು, ಇಲಾಖೆ ಕಚೇರಿಗೆ ಆದಿವಾಸಿಗಳು ಭೇಟಿ ನೀಡಿದರೆ ಸೌಜನ್ಯದಿಂದ ಮಾತನಾಡುವುದಿಲ್ಲ. ಯಾವುದಾದರೂ ಮಾಹಿತಿ ಕೇಳಿದರೆ ಉಡಾಪೆಯಿಂದ ವರ್ತಿಸುತ್ತಿದ್ದು, ಆದಿವಾಸಿಗಳ ಯಾವುದೇ ಕಾಲೋನಿಗಳಿಗೆ ಭೇಟಿ ನೀಡದೆ ಸರ್ಕಾರಿ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.

ಆದಿವಾಸಿಗಳ ಅನುಕೂಲಕಕ್ಕೆ ಬಿಡುಗಡೆಯಾಗುವ ಅನುದಾನದ ಸಮರ್ಪಕ ಬಳಕೆಯಾಗುತ್ತಿಲ್ಲ. ಅನುದಾನಗಳನ್ನು ಆದಿವಾಸಿಗಳಲ್ಲದವರ ಕೇರಿಗಳಿಗೆ ಬಳಕೆ ಮಾಡುತತಿರುವ ಅಧಿಕಾರಿಗಳು ನಿಜವಾದ ಆದಿವಾಸಿಗಳಿಗೆ ಅನ್ಯಾಯ ಮಾಡುತ್ತಿದ್ದಾರೆ. 2015/16ನೇ ಸಾಲಿನಲ್ಲಿ ಜಿಲ್ಲೆಯ ಆದಿವಾಸಿಗಳ ಅಭಿವೃದ್ಧಿಗಾಗಿ ಸಮಾಜ ಕಲ್ಯಾಣ ಇಲಾಖೆಯಿಂದ 10 ಕೋಟಿ ಅನುದಾನವನ್ನು ವಿದ್ಯಾರ್ಥಿಗಳ ವಿಧ್ಯಭ್ಯಾಸಕ್ಕೆ ಸಹಾಯಧನ, ಮನೆ ದುರಸ್ಥಿ, ಕಾಲೋನಿಗಳ ರಸ್ತೆ, ಕುಡಿಯುವ ನೀರು ಮುಂತಾದವುಗಳಿಗೆ ಮಂಜೂರಾಗಿತ್ತು. ಅದನ್ನು ಅಧಿಕಾರಿಗಳು ನಿರ್ಲಕ್ಷ್ಯದಿಂದ ಯೋಜನೆಯನ್ನು ನಡೆಸಲು ವಿಫಲವಾಗಿದ್ದಾರೆ ಎಂದು ದೂರಿದ್ದಾರೆ.

ಸರ್ಕಾರದ ಆದೇಶದಂತೆ ಜಿಲ್ಲಾ ಗಿರಿಜನ ಇಲಾಖೆ ಅಧಿಕಾರಿಗಳು ತಿಂಗಳಿಗೊಮ್ಮೆ ಆದಿವಾಸಿಗಳ ಹಾಡಿಗಳಲ್ಲಿ ವಾಸ್ತವ್ಯ ಮಾಡಬೇಕು ಎಂದು ಆದೇಶವಿದ್ದು, ಈವರೆಗೂ ಯಾವುದೇ ಆದಿವಾಸಿ ಹಾಡಿಗಳಲ್ಲಿ ವಾಸ್ತವ್ಯ ಮಾಡಿಲ್ಲ. ಜಿಲ್ಲೆಯ ಸಮನ್ವಯಾಧಿಕಾರಿಗಳು ಈ ಜಿಲ್ಲೆಯಲ್ಲಿಲ್ಲ. ಅವರು ಇಲ್ಲಿಗೆ ಬಂದು ನಾಲ್ಕು ವರ್ಷವಾಗಿದೆ. ಇಂತಹ ಅಧಿಕಾರಿಯನ್ನು ತಕ್ಷಣ ವಗಾವಣೆಗೊಳಿಸಿ ಆದಿವಾಸಿಗಳ ಏಳಿಗೆ ಬಯಸುವವರನನು ಜಿಲ್ಲೆಗೆ ನೇಮಕಗೊಳಿಸಲು ಮನವಿ ಮಾಡಿದ್ದಾರೆ.
ಈ ಸಮಯದಲ್ಲಿ ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಪಿ.ರಾಜೇಶ್, ಬಿ.ಎನ್.ಮುತ್ತಪ್ಪ, ಸುಂದರ್ ಕುಮಾರ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News