ಸರಕಾರದ ಸಾಧನೆಯನ್ನು ಜನರಿಗೆ ಮನವರಿಕೆ ಮಾಡಿ: ಕೆ.ಪಿ.ಚಂದ್ರಕಲಾ ಕರೆ
ಮಡಿಕೇರಿ, ಜು.27: ರಾಜ್ಯ ಸರಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಕಳೆದ ನಾಲ್ಕು ವರ್ಷಗಳ ಸಾಧನೆಯನ್ನು ಜನರಿಗೆ ಮನವರಿಕೆ ಮಾಡುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕೆಂದು ಕಾಂಗ್ರೆಸ್ ಮುಖಂಡರೂ ಹಾಗೂ ಜಿ.ಪಂ ಸದಸ್ಯರಾದ ಕೆ.ಪಿ.ಚಂದ್ರಕಲಾ ಕರೆ ನೀಡಿದ್ದಾರೆ.
ನಗರದ ಕೂರ್ಗ್ ಕಮ್ಯುನಿಟಿ ಹಾಲ್‌ನಲ್ಲಿ ನಡೆದ ಅಖಿಲ ಕರ್ನಾಟಕ ಡಿ.ಕೆ.ಶಿವಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾ ಘಟಕದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜ್ಯ ಸರಕಾರ ಜನಸಾಮಾನ್ಯರ ಸರಕಾರವಾಗಿ ಕಳೆದ ವರ್ಷಗಳ ಕಾಲ ಎಲ್ಲಾ ಕ್ಷೇತ್ರಗಳಲ್ಲೂ ಯಶಸ್ಸನ್ನು ಸಾಧಿಸಿ ಜನಪ್ರಿಯವಾಗಿದೆ. ಬರಪರಿಸ್ಥಿತಿ ಇದ್ದರೂ ಅದನ್ನು ಯಶಸ್ವಿಯಾಗಿ ನಿಭಾಯಿಸಿದ ಹೆಗ್ಗಳಿಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ. ಮಳೆಯ ಕೊರತೆಯ ನಡುವೆಯೂ ಸಾಕಷ್ಟು ವಿದ್ಯುತ್ ಪೂರೈಕೆಯಾಗಲು ಅಗತ್ಯ ಕ್ರಮಗಳನ್ನು ಕೈಗೊಂಡ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಒಬ್ಬ ಸಮರ್ಥ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಕೆ.ಪಿ.ಚಂದ್ರಕಲಾ ಶ್ಲಾಘಿಸಿದರು. ಸರಕಾರದ ಸಾಧನೆಯನ್ನು ಜನರ ಬಳಿಗೆ ಕೊಂಡೊಯ್ಯಿರಿ ಎಂದು ಅವರು ಕಾರ್ಯಕರ್ತರಿಗೆ ಕರೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಮಿಕ ಘಟಕದ ಅಧ್ಯಕ್ಷರಾದ ವಿ.ಪಿ.ಶಶಿಧರ್ ಮಾತನಾಡಿ, ಹಸಿವು ಮುಕ್ತ ಕರ್ನಾಟಕವನ್ನು ರೂಪಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಶಸ್ವಿಯಾಗಿದ್ದಾರೆ. ಅಲ್ಲದೆ ಸಾಮಾಜಿಕ ನ್ಯಾಯವನ್ನು ಒದಗಿಸಿದ್ದಾರೆ ಎಂದು ಬಣ್ಣಿಸಿದರು. ಸಚಿವ ಡಿ.ಕೆ.ಶಿವಕುಮಾರ್ ಅವರ ಕಾರ್ಯ ವೈಖರಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಿ.ಕೆ.ಶಿವಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷರಾದ ಎಂ.ಎ.ನವೀದ್ ಖಾನ್, ಜಿಲ್ಲೆಯಲ್ಲಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲಾಗುವುದೆಂದರು. ಸಭೆಯಲ್ಲಿ ನೂತನ ಪದಾಧಿಕಾರಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿ ನಂತರದ ದಿನಗಳಲ್ಲಿ ಉಳಿದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದೆಂದು ಅವರು ತಿಳಿಸಿದರು.
ಸಭೆಯಲ್ಲಿ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು.
ನೂತನ ಪದಾಧಿಕಾರಿಗಳು: ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಹೊಸತೋಟ ಕೆ.ಪಿ.ದಿನೇಶ್, ಉಪಾಧ್ಯಕ್ಷರಾಗಿ ಗಾಯತ್ರಿ ನರಸಿಂಹ, ಖಜಾಂಚಿಯಾಗಿ ಕೆ.ಪಿ.ಸಿದ್ದಿಕ್, ಸಮಿತಿ ಸದಸ್ಯರುಗಳಾಗಿ ಹನೀಫ್ ಸಂಪಾಜೆ, ಎಂ.ಎನ್.ಅಶೋಕ್ ಯಡವಾರೆ, ಪಿ.ಎ.ಶಾಫಿ ಕೊಟ್ಟಮುಡಿ, ಅಬ್ದುಲ್ ರಜಾಕ್, ಕೆ.ಪಿ.ಚೇಕ್, ಚಂದನ್ ಕುಮಾರ್, ಗುರುರಾಜ್, ರಜಿತ್ ಕುಮಾರ್ ಆಯ್ಕೆಯಾಗಿದ್ದಾರೆ.
ಮಡಿಕೇರಿ ತಾಲ್ಲೂಕು ಅಧ್ಯಕ್ಷರಾಗಿ ಕೆ.ಆರ್.ರಿಜ್ವನ್, ಕಾರ್ಯದರ್ಶಿಯಾಗಿ ಕೆ.ಎಲ್.ರಾಘವೇಂದ್ರ, ಉಪಾಧ್ಯಕ್ಷರಾಗಿ ಎಂ.ಆರ್.ಶಮೀಮ್, ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷರಾಗಿ ಜೆ.ಕೆ.ತೇಜ್‌ಕುಮಾರ್, ಕಾರ್ಯದರ್ಶಿಯಾಗಿ ಅಬ್ದುಲ್ ಬಾಸೀದ್, ವಿರಾಜಪೇಟೆ ತಾಲ್ಲೂಕು ಅಧ್ಯಕ್ಷರಾಗಿ ಡಿ.ಎಲ್.ಸುಬ್ಬಯ್ಯ, ಉಪಾಧ್ಯಕ್ಷರಾಗಿ ಎನ್.ಎಂ.ಯೂಸುಫ್, ಕಾರ್ಯದರ್ಶಿಗಳಾಗಿ ಅಶ್ರಫ್ ಪಳ್ಳಕೆರೆ, ಕೆ.ಅಂದು ಹಾಗೂ ಪಿ.ಎಂ.ಬಷೀರ್ ಆಯ್ಕೆಯಾಗಿದ್ದಾರೆ.