ವಿಶೇಷ ಸಭೆಗೆ ಗೈರು: ಎಸ್.ಪಿ. ವಿರುದ್ದ ಗರಂ ಆದ ಸದಸ್ಯರು
ಶಿವಮೊಗ್ಗ, ಜು. 27: ಜಿಲ್ಲೆಯಲ್ಲಿ ತಲೆದೋರಿರುವ ಮರಳು ಅಭಾವಕ್ಕೆ ಸಂಬಂಧಿಸಿದಂತೆ ಗುರುವಾರ ಜಿ.ಪಂ. ಕಚೇರಿಯಲ್ಲಿ ಕರೆಯಲಾದ ವಿಶೇಷ ಸಾಮಾನ್ಯ ಸಭೆಗೆ ಜಿಲ್ಲಾ ಪೊಲೀಸ್ ವರಿಷ್ಠ ಅಭಿನವ್ ಖರೆ ಗೈರು ಹಾಜರಾಗಿದ್ದಕ್ಕೆ ಜಿ.ಪಂ. ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು. ’ಕಳೆದ ಸಾಮಾನ್ಯ ಸಭೆಯಲ್ಲಿಯೇ ಮುಂದಿನ ಸಭೆಗೆ ಎಸ್.ಪಿ.ಯವರನ್ನು ಕರೆಯಿಸಬೇಕು ಎಂದು ನಿರ್ಣಯ ಕೈಗೊಳ್ಳಾಗಿತ್ತು. ಆದರೆ ಇಂದಿನ ಸಭೆಗೆ ಅವರು ಗೈರು ಹಾಜರಾಗಿದ್ದಾರೆ. ಹಾಗಿದ್ದರೆ ಈ ವಿಶೇಷ ಸಭೆ ಕರೆದಿರುವುದರ ಔಚಿತ್ಯವಾದರೂ ಏನು?’ ಎಂದು ಸದಸ್ಯರು ಸಿಡಿಮಿಡಿ ವ್ಯಕ್ತಪಡಿಸಿದರು.
’ಇಂದಿನ ಸಭೆಯಲ್ಲಿ ಎಸ್.ಪಿ.ಯವರೇ ಮುಖ್ಯವಾಗಿರಬೇಕಾಗಿತ್ತು. ಅವರಿಲ್ಲದೇ ಸಭೆ ನಡೆಸುವುದು ಬೇಡ. ಎಸ್.ಪಿ.ಯವರ ಬಂದ ನಂತರವೇ ಸಭೆ ನಡೆಸಬೇಕು’ ಎಂದು ಸದಸ್ಯ ಕೆ.ಇ.ಕಾಂತೇಶ್ ಆಗ್ರಹಿಸಿದರು.
ಸಿಇಓ ಡಾ. ಕೆ. ರಾಕೇಶ್‌ಕುಮಾರ್ ಮಾತನಾಡಿ, ’ಕಾಗಿನೆಲೆಯಲ್ಲಿಂದು ಮುಖ್ಯಮಂತ್ರಿಗಳ ಕಾರ್ಯಕ್ರಮವಿದೆ. ಬಂದೋಬಸ್ತ್ ಕಾರ್ಯಕ್ಕೆ ಎಸ್‌ಪಿಯವರು ತೆರಳಿದ್ದಾರೆ. ಈ ಬಗ್ಗೆ ತಮಗೆ ಮಾಹಿತಿ ನೀಡಿದ್ದಾರೆ’ ಎಂದು ಸಭೆಯ ಗಮನಕ್ಕೆ ತಂದರು. ಆದರೆ ಇದಕ್ಕೆ ಸದಸ್ಯರಾದ ವೀರಭದ್ರಪ್ಪ ಪೂಜಾರ್, ಜೆ.ಪಿ.ಯೋಗೀಶ್ ಇತರೆ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಎಸ್.ಪಿ.ಯವರು ಇಲ್ಲದೆ ಸಭೆ ನಡೆಸುವುದು ಬೇಡ. ಜಿಲ್ಲೆಯಾದ್ಯಂತ ಅಕ್ರಮ ಮರಳು ಸಾಗಾಣಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಇದನ್ನು ತಡೆಯುವ ಕೆಲಸ ಪೊಲೀಸ್ ಇಲಾಖೆಯಿಂದ ನಡೆಯುತ್ತಿಲ್ಲ. ಅಕ್ರಮ ಮರಳು ಸಾಗಾಣಿಕೆಗೆ ಸಂಬಂಧಿಸಿದಂತೆ ಪೊಲೀಸರ ವಿರುದ್ದವೇ ಸಾಕಷ್ಟು ಆರೋಪಗಳಿವೆ. ಈ ಬಗ್ಗೆ ಜಿಲ್ಲಾ ರಕ್ಷಣಾಧಿಕಾರಿಗಳು ಸೂಕ್ತ ಉತ್ತರ ನೀಡಬೇಕಾಗಿದೆ ಎಂದು ಸದಸ್ಯರು ಜಿಲ್ಲಾಧಿಕಾರಿಗೆ ತಿಳಿಸಿದರು.
ವಿಧಾನಪರಿಷತ್ ಸದಸ್ಯ ಭಾನುಪ್ರಕಾಶ್ ಮಾತನಾಡಿ, ಈ ಸಭೆಗೆ ಬರಲು ಸಾಧ್ಯವಿಲ್ಲ ಎಂಬ ಬಗ್ಗೆ ಎಸ್‌ಪಿಯವರು ಲಿಖಿತವಾಗಿ ಮಾಹಿತಿ ಕೊಡಬೇಕಿತ್ತು. ಇದರಿಂದ ಸಭೆಯ ಗೌರವ ಉಳಿಯುತ್ತಿತ್ತು. ಆದರೆ ಸಭೆಗೆ ಯಾವುದೇ ಮಾಹಿತಿ ಕೊಡದೆ ಗೈರುಹಾಜರಾಗಿರುವುದು ಸರಿಯಲ್ಲ ಎಂದರು.
ಇದಕ್ಕೆ ಹಲವು ಸದಸ್ಯರು ಧ್ವನಿಗೂಡಿಸಿದರು. ಈ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಅಂತಿಮವಾಗಿ ಮರಳು ಉಸ್ತುವಾರಿ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ. ಎಂ. ಲೋಕೇಶ್ ಸಭೆಯಲ್ಲಿ ಉಪಸ್ಥಿತರಿದ್ದ ಕಾರಣದಿಂದ ಸಭೆಯನ್ನು ನಡೆಸಲು ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಎಂ. ಲೋಕೇಶ್‌ರವರು, ’ಸದಸ್ಯರ ವ್ಯಕ್ತಪಡಿಸುವ ಅಭಿಪ್ರಾಯಗಳಿಗೆ ಹಾಗೂ ಸಮಸ್ಯೆಗಳನ್ನು ತಾವು ಪೊಲೀಸ್ ಇಲಾಖೆಗೆ ತಿಳಿಸಿ ಸೂಕ್ತ ಪರಿಹಾರ ಕ್ರಮಕೈಗೊಳ್ಳಲು ಪ್ರಾಮಾಣಿಕ ಕ್ರಮಕೈಗೊಳ್ಳುತ್ತೆನೆ’ ಎಂದು ಸದಸ್ಯರಿಗೆ ಭರವಸೆ ನೀಡಿದರು.