ಅಂಗನವಾಡಿ, ವಿದ್ಯಾರ್ಥಿ ನಿಲಯ, ಸಮುದಾಯ ಭವನಗಳಿಗೆ ಭೂಮಿ ಒದಗಿಸಲು ಡಿಸಿ ಸೂಚನೆ
ಮಡಿಕೇರಿ, ಜು.27: ತೋಟಗಾರಿಕೆ ಇಲಾಖೆ ಪರಿಹಾರ ತಂತ್ರಾಂಶದಲ್ಲಿ ಬಾಕಿ ಇರುವ ಬೆಳೆಹಾನಿ ವಿವರವನ್ನು ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಕಂದಾಯಾಧಿಕಾರಿಗಳ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಅಂಗನವಾಡಿಗಳಿಗೆ 15 ದಿನದೊಳಗೆ ಸೂಕ್ತ ಜಾಗವನ್ನು ಗುರುತಿಸುವಂತೆ ಸರ್ವೆ ಅಧಿಕಾರಿಯವರೊಂದಿಗೆ ಸಮಲೋಚನೆ ಮಾಡಿ ಕಂದಾಯ ನಿರೀಕ್ಷಕರು ವರದಿ ನೀಡಿ ಜಾಗವನ್ನು ನೀಡುವಂತೆ ಕ್ರಮವಹಿಸಬೇಕು ಎಂದರು. ಅಂಗನವಾಡಿಗಳಿಗೆ ಸಂಬಂಧಿಸಿದಂತೆ ಸರ್ಕಾರಿ ಜಾಗ ಒತ್ತುವರಿಯನ್ನು ಗುರುತಿಸಿ ಮೂರು ತಿಂಗಳೊಳಗೆ ಸರ್ಕಾರದ ಸುಪರ್ದಿಗೆ ಪಡೆದುಕೊಂಡು ಸರ್ವೆ ಕಾರ್ಯವನ್ನು ಪೂರ್ಣಗೊಳಿಸುವಂತೆ ಕಂದಾಯ ನಿರೀಕ್ಷಕರಿಗೆ ಸಲಹೆ ನೀಡಿದರು.
ಅಂಬೇಡ್ಕರ್ ಭವನದ ಬಗ್ಗೆ ಸಭೆಗೆ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಮಾಯಾದೇವಿ ಗಲಗಲಿ ಅವರು ಮಾಹಿತಿ ನೀಡಿ ಶನಿವಾರಸಂತೆ, ಸೋಮವಾರಪೇಟೆ, ಸುಂಟಿಕೊಪ್ಪ, ನಾಪೋಕ್ಲು, ಅಮ್ಮತ್ತಿ, ಹುದಿಕೇರಿ, ಚೆನ್ನಯ್ಯನ ಕೋಟೆ, ಕುಟ್ಟ, ಕದನೂರು, ಕೊಡ್ಲಿಪೇಟೆಯಲ್ಲಿ ಜಾಗ ಬೇಕಿದೆ ಎಂದರು. ಇದಕ್ಕೆ ಜಿಲ್ಲಾಧಿಕಾರಿಯವರು ಒಂದು ವಾರದಲ್ಲಿ ಜಾಗ ಗುರುತಿಸುವಂತೆ ಕಂದಾಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಉಪ ವಿಭಾಗಾಧಿಕಾರಿ ಡಾ.ನಂಜುಂಡೇಗೌಡ, ಜಿ.ಪಂ. ಯೋಜನಾ ನಿರ್ದೇಶಕರಾದ ಸಿದ್ದಲಿಂಗ ಮೂರ್ತಿ, ತಹಶೀಲ್ದಾರರಾದ ಕುಸುಮ, ಮಹೇಶ್, ಆಹಾರ ಇಲಾಖೆ ಉಪ ನಿರ್ದೇಶಕರಾದ ಪುಟ್ಟಸ್ವಾಮಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಗಿರೀಶ್ ಇತರರು ಹಾಜರಿದ್ದರು.