ಪೊಲೀಸ್ ವಸತಿ ಗೃಹದಲ್ಲಿ ಪೇದೆಗಳಿಬ್ಬರ ಆತ್ಮಹತ್ಯೆ : ಭಯ ಹೋಗಲಾಡಿಸಲು ಹೋಮ ಹವನ ಮಾಡಿಸಿದ ಇಲಾಖೆ
ಗುಂಡ್ಲುಪೇಟೆ,ಜು.27: ಪೊಲೀಸ್ ವಸತಿ ಗೃಹದಲ್ಲಿ ಕಳೆದ ನಾಲ್ಕು ತಿಂಗಳಿಂದ ಇಬ್ಬರು ಪೇದೆಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ಸಿಬ್ಬಂದಿಗಳಲ್ಲಿ ಭಯ ಹೋಗಲಾಡಿಸಲು ಪೊಲೀಸ್ ಇಲಾಖೆಯಿಂದ ಹೋಮ ಹವನ ಮಾಡಿದ ಘಟನೆ ತಾಲೂಕಿನ ಬೇಗೂರು ಪೊಲೀಸ್ ವಸತಿ ಗೃಹದಲ್ಲಿ ನಡೆದಿದೆ.
ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿದ ಪೋಲೀಸ್ ವಸತಿಗೃಹದಲ್ಲಿ ಪೋಲೀಸ್ ಇಲಾಖೆಯ ಅಧಿಕಾರಿಗಳು ವಸತಿಗೃಹಕ್ಕೆ ಹೊಸದಾಗಿ ಹೋಮಪೂಜೆ ಮಾಡಿಸಿ ಅನ್ನ ಸಂತರ್ಪನೆ ಮಾಡಿಸಿದರು. ಬೇಗೂರು ಗ್ರಾಮದಲ್ಲಿ ಪೋಲೀಸ್‌ಠಾಣೆ ಇದ್ದು ಇಲ್ಲಿನ ಸಿಬ್ಬಂದಿಗಳ ಅನುಕೂಲಕ್ಕಾಗಿ ಗ್ರಾಮದಲ್ಲಿ 24 ಕೊಠಡಿಗಳುಳ್ಳ ಸುಸಜ್ಜಿತ ಕಟ್ಟಡ ನಿರ್ಮಾಣಮಾಡಿ ನೀರು, ವಿದ್ಯುತ್ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು, ಈ ಹಿಂದೆ ಕಟ್ಟಡವನ್ನು ಹಾಗೆಯೇ ಉದ್ಘಾಟನೆ ಮಾಡಿ ಹೋಮ-ಪೂಜೆಗಳನ್ನು ನೆರವೇರಿಸಿರಲಿಲ್ಲ ನಂತರ ಈ ವಸತಿಗೃಹದಲ್ಲಿ ಅನೇಕ ಪೋಲೀಸ್ ಸಿಬ್ಬಂದಿಗಳು ವಾಸ್ತವ್ಯ ಹೂಡಿದ್ದರು.
ಆದರೆ ಈ ವಸತಿಗೃಹದ ಒಂದು ಕೊಠಡಿಯಲ್ಲಿ ಕಳೆದ ಒಂದು ವರ್ಷದ ಹಿಂದೆ ಬೇಗೂರು ಪೋಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಬ್ಬಹಳ್ಳಿ ಗ್ರಾಮದ ಮಹೇಶ್ ಎಂಬುವವರು ನೇಣುಬಿಗಿದ ಸ್ಥಿತಿಯಲ್ಲಿ ಸಾವಿಗೀಡಾಗಿದ್ದರು ನಂತರ ಈಗ್ಗೆ ಕೆಲವು ತಿಂಗಳಿನ ಹಿಂದೆ ಮತ್ತೊಬ್ಬ ಪೋಲೀಸ್ ಸಿಬ್ಬಂದಿ ಅನಿಲ್ ಸಹ ನೇಣು ಬಿಗಿದ ಸ್ಥಿತಿಯಲ್ಲಿಯೇ ಸಾವಿಗೀಡಾಗಿದ್ದರು ಇದನ್ನು ಕಂಡ ಇನ್ನಿತರ ಸಿಬ್ಬಂದಿಗಳು ಇಲ್ಲಿ ವಾಸಮಾಡಲು ಹಿಂಜರಿಯುತ್ತಿದ್ದರು, ಹಾಗೂ ಅವರ ಕುಟುಂಬದವರು ಸಹ ಈ ವಸತಿಗೃಹದಲ್ಲಿ ಉಳಿದುಕೊಳ್ಳಲು ಹಿಂದೇಟುಹಾಕುತ್ತಿದ್ದ ಪರಿಣಾಮವಾಗಿ ಈ ವಸತಿಗೃಹವು ಪಾಳುಬೀಳುವ ಸಂಭವ ತಲುಪಿತ್ತು.
ಇದನ್ನು ಗಮನಿಸಿದ ಪೋಲೀಸ್ ಠಾಣೆಯ ಸಿಬ್ಬಂದಿಗಳು ಲಕ್ಷಾಂತರೂ ವೆಚ್ಚದಲ್ಲಿ ನಿರ್ಮಿಸಿರುವ ಕಟ್ಟಡ ಪಾಳುಬೀಳುತ್ತಿರುವುದನ್ನು ತಪ್ಪಿಸಬೇಕೆಂದು ಹಾಗೂ ಈ ಹಿಂದೆ ಹೋಮ ಪೂಜೆ ನೆರವೇರಿಸಿಲ್ಲದ ಕಾರಣ ಕಹಿ ಘಟಣೆಗಳು ನಡೆಯುತ್ತಿರಬಹುದೆಂದು ಮನಗಂಡು ಈಗ ಈ ವಸತಿಗೃಹದಲ್ಲಿ ಹೋಮಮಾಡಿಸಿ ಗ್ರಾಮದ ಹಾಗೂ ನೆರೆಹೊರೆಯ ಗ್ರಾಮಗಳ ಮುಖಂಡರನ್ನು ಕರೆಯಿಸಿ ಅನ್ನಸಂತರ್ಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪೋಲೀಸ್‌ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್, ಡಿವೈಎಸ್‌ಪಿ ಗಂಗಾಧರಸ್ವಾಮಿ, ಸರ್ಕಲ್‌ಇನ್ಸ್‌ಪೆಕ್ಟರ್ ಕೃಷ್ಣಪ್ಪ, ಎಎಸ್‌ಐ ದೊರೆರಾಜು, ಬೇಗೂರು ಪಿಎಸ್‌ಐ ಕಿರಣ್‌ಕುಮಾರ್, ಜಿ.ಪಂ ಮಾಜಿ ಅಧ್ಯಕ್ಷ ದೊಡ್ಡಹುಂಡಿನಾಗೇಂದ್ರ ಸೇರಿದಂತೆ ಪೋಲೀಸ್ ಇಲಾಖೆಯ ಸಿಬ್ಬಂದಿಗಳು ಮತ್ತು ನೆರೆಹೊರೆಯ ಗ್ರಾಮಗಳ ಮುಖಂಡರುಗಳು ಇದ್ದರು.