ಎಚ್‌ಡಿಕೆ ವಿರುದ್ಧದ ಜಂತಕಲ್ ಮೈನಿಂಗ್ ಪ್ರಕರಣ : ಎರಡು ವಾರಗಳ ಕಾಲ ವಿಚಾರಣೆ ಮುಂದೂಡಿದ ಹೈಕೋರ್ಟ್

Update: 2017-07-27 16:36 GMT

ಬೆಂಗಳೂರು, ಜು.27: ಜಂತಕಲ್ ಮೈನಿಂಗ್ ಕಂಪೆನಿಗೆ ಗಣಿ ಪರವಾನಗಿ ನೀಡಲು ಪ್ರಭಾವ ಬೀರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರನ್ನು ಬಂಧಿಸಬಾರದು ಎಂದು ಲೋಕಾಯುಕ್ತ ವಿಶೇಷ ತನಿಖಾ ತಂಡಕ್ಕೆ ಸೂಚಿಸಿ ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಹೈಕೋರ್ಟ್ ಮತ್ತೆ ಎರಡು ವಾರ ವಿಸ್ತರಿಸಿದೆ.

  ಈ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಎಚ್.ಡಿ.ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರತ್ನಕಲಾ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು.

 ಈ ವೇಳೆ ಎಸ್‌ಐಟಿ ಪರ ವಿಶೇಷ ಅಭಿಯೋಜಕ ಪಿ.ಗೋವಿಂದನ್, ಪ್ರಕರಣದ ರದ್ದು ಕೋರಿ ಕುಮಾರಸ್ವಾಮಿ ಅವರು ಸುಪ್ರೀಂ ಕೊರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆ ಹಂತದಲ್ಲಿದ್ದು, ಆ ಕುರಿತು ದಾಖಲೆಗಳನ್ನು ಪಡೆದುಕೊಳ್ಳಲು ಕಾಲಾವಕಾಶ ನೀಡಬೇಕು ಎಂದು ಕೋರಿದರು.

  ಇದರಿಂದ ಸುಪ್ರೀಂ ಕೋರ್ಟ್‌ನಿಂದ ದಾಖಲೆಗಳನ್ನು ಪಡೆಯಲು ಎಸ್‌ಐಟಿ ಪೊಲೀಸರಿಗೆ ಎರಡು ವಾರ ಕಾಲಾವಕಾಶ ನೀಡಿದ ನ್ಯಾಯಮೂರ್ತಿಗಳು, ಮುಂದಿನ ವಿಚಾರಣೆವರೆಗೆ ಕುಮಾರಸ್ವಾಮಿ ಅವರನ್ನು ಬಂಧಿಸದಂತೆ ಜುಲೈ 15ರಂದು ಹೊರಡಿಸಿದ್ದ ಮಧ್ಯಂತರ ಆದೇಶವನ್ನು ವಿಸ್ತರಿಸಿದರು. ಜೊತೆಗೆ, ತನಿಖಾಧಿಕಾರಿಯು ವಿಚಾರಣೆಗೆ ಕರೆದರೆ ಪಕ್ಷದಲ್ಲಿ ಕುಮಾರಸ್ವಾಮಿಯು, ತನಿಖಾಧಿಕಾರಿಗೆ ಮುಂದೆ ಹಾಜರಾಗಿ ತನಿಖೆಗೆ ಸಹಕರಿಸಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ಮುಂದೂಡಿತು.

ಜಂತಕಲ್ ಮೈನಿಂಗ್ ಕಂಪನಿಗೆ ಗಣಿ ಪರವಾನಗಿ ನೀಡುವಂತೆ ಐಎಎಸ್ ಅಧಿಕಾರಿ ಮೇಲೆ ಒತ್ತಡ ಹೇರಿದ ಆರೋಪವನ್ನು ಕುಮಾರಸ್ವಾಮಿ ಹೊಂದಿದ್ದು, ಈಕುರಿತು ಲೋಕಾಯುಕ್ತ ಎಸ್‌ಐಟಿ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News