ಭ್ರಷ್ಟಾಚಾರವನ್ನು ನಾಚಿಸುವ ಅವಕಾಶವಾದ

Update: 2017-07-28 05:01 GMT

ಭಾರತದ ರಾಜಕಾರಣವನ್ನು ನೀತಿ ಮತ್ತು ತತ್ವಗಳಿಗಿಂತ ಅಧಿಕಾರ ಮತ್ತು ಅವಕಾಶವಾದಗಳೇ ನಿಯಂತ್ರಿಸುತ್ತಿವೆಯೆಂಬುದನ್ನು ಬಿಹಾರದಲ್ಲಿ ಬುಧವಾರದಿಂದ ನಡೆದಿರುವ ಬೆಳವಣಿಗೆಗಳು ಸಾಬೀತುಪಡಿಸುತ್ತವೆ. 2015ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್‌ರ ಜೆಡಿಯು ಪಕ್ಷ ತನ್ನ ಪರಮ ವೈರಿಯಾಗಿದ್ದ ಲಾಲು ಪ್ರಸಾದ್ ಯಾದವ್‌ರ ಜೊತೆ ಸೇರಿ ‘ಮಹಾಘಟ್‌ಬಂಧನ್’ ರಚಿಸಿಕೊಂಡು ಬಿಜೆಪಿಯ ವಿರುದ್ಧ ಅಭೂತಪೂರ್ವ ಗೆಲುವು ಸಾಧಿಸಿತು.

ಇದು ಇಡೀ ಭಾರತದ ರಾಜಕಾರಣದಲ್ಲಿ ಮತ್ತು ಶಾಂತಿ ಬಯಸುವ ಜನರಲ್ಲಿ ಹೊಸ ಸಾಧ್ಯತೆಯ ಭರವಸೆಗಳನ್ನು ಹುಟ್ಟಿಹಾಕಿತ್ತು. ಆದರೆ ಭ್ರಷ್ಟಾಚಾರ ವಿರೋಧದ ಹೆಸರಲ್ಲಿ ನಿತೀಶ್ ಕುಮಾರ್‌ರು ಆರ್‌ಜೆಡಿ ಜೊತೆಗೆ ಬಂಧವನ್ನು ಕೊನೆಗೊಳಿಸಿ, ಆರ್ಥಿಕ ಭ್ರಷ್ಟಾಚಾರದಲ್ಲಿ ಯಾವ ಪಕ್ಷಕ್ಕಿಂತಲೂ ಯಾವ ರೀತಿಯಲ್ಲೂ ಭಿನ್ನವಲ್ಲದ ಮತ್ತು ಅದರ ಜೊತೆಗೆ ದುಷ್ಟತನ ಮತ್ತು ತಾತ್ವಿಕ ಭ್ರಷ್ಟಾಚಾರಗಳಲ್ಲಿ ಎಲ್ಲರನ್ನೂ ಮೀರಿಸುವ ಬಿಜೆಪಿಯೊಂದಿಗೆ ಸರಕಾರ ರಚಿಸಿ ಇಡೀ ದೇಶದಲ್ಲೇ ಒಂದು ದೊಡ್ಡ ಭ್ರಮನಿರಸನಕ್ಕೆ ಕಾರಣರಾಗಿದ್ದಾರೆ. ವಾಸ್ತವವೆಂದರೆ 2015ರಲ್ಲಿ ನಿತೀಶ್‌ರು ಆಜೆಡಿಯೊಂದಿಗೆ ಸರಕಾರ ರಚಿಸಿದ ಹೊತ್ತಿನಲ್ಲೂ ಆರ್‌ಜೆಡಿಯ ಮುಖ್ಯಸ್ಥ ಲಾಲು ಯಾದವ್‌ರ ಮೇಲೆ ಭ್ರಷ್ಟಾಚಾರದ ಆರೋಪಗಳಿತ್ತು.

ಮಾತ್ರವಲ್ಲ 2013ರಲ್ಲಿ ಸಿಬಿಐ ಕೋರ್ಟು ಮೇವು ಹಗರಣವೊಂದರಲ್ಲಿ ಯಾದವ್‌ರಿಗೆ 5 ವರ್ಷ ಜೈಲು ಶಿಕ್ಷೆಯನ್ನೂ ವಿಧಿಸಿತ್ತು. ಆದ್ದರಿಂದಲೇ ಅವರು ಸಂಸತ್ ಸದಸ್ಯನ ಸ್ಥಾನವನ್ನ್ನು ಕಳೆದುಕೊಂಡಿದ್ದು ಮಾತ್ರವಲ್ಲದೆ ಮುಂದಿನ 11 ವರ್ಷಗಳವರೆಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅರ್ಹತೆಯನ್ನೂ ಕಳೆದುಕೊಂಡಿದ್ದರು. ಇವೆಲ್ಲವನ್ನೂ ಯಾದವ್ ಅವರು ಉನ್ನತ ನ್ಯಾಯಾಲಯಗಳಲ್ಲಿ ಪ್ರಶ್ನಿಸಿದ್ದಾರೆ. ಅದೇನೇ ಇದ್ದರೂ ಇವೆಲ್ಲವೂ ಜಗತ್ತೇ ಬಲ್ಲ ಸತ್ಯವಾಗಿತ್ತು. ಬಿಹಾರದಲ್ಲಿ ಈ ಘಟ್‌ಬಂಧನ್ ಸರಕಾರ ಅಧಿಕಾರಕ್ಕೆ ಬಂದಮೇಲಂತೂ ಕೇಂದ್ರದ ಮೋದಿ ಸರಕಾರ 2019ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ತನ್ನ ವಿರೋಧಿಗಳನ್ನು, ಅದರಲ್ಲೂ ವಿಶೇಷವಾಗಿ ಆರ್‌ಜೆಡಿ, ಆಮ್ ಆದ್ಮಿ ಮತ್ತು ಕಾಂಗ್ರೆಸ್ ಪಕ್ಷಗಳನ್ನು ಹಲವು ಬಗೆಯಲ್ಲಿ ಹಣಿಯುವ ಜವಾಬ್ದಾರಿಯನ್ನು ಸಿಬಿಐಗೆ ಹೊರಗುತ್ತಿಗೆ ಕೊಟ್ಟಿರುವುದು ರಹಸ್ಯವೇನಲ್ಲ.

ವಿವಿಧ ರಾಜ್ಯಗಳಲ್ಲಿರುವ ಬಿಜೆಪಿ ಮತ್ತು ಅವರ ಮಿತ್ರ ಪಕ್ಷದ ಮಂತ್ರಿ, ಮುಖ್ಯಮಂತ್ರಿಗಳ ಮೇಲೆ ಎಂಥದೇ ಗಂಭೀರ ಭ್ರಷ್ಟಾಚಾರದ ಆರೋಪ ಬಂದರೂ ಅಂಥ ಯಾವ ಪ್ರಕರಣವನ್ನೂ ಸಿಬಿಐ ಗಂಭೀರವಾಗಿ ತೆಗೆದುಕೊಂಡಿಲ್ಲ. ಹೀಗಾಗಿ ಲಾಲು ಪ್ರಸಾದ್‌ರ ಪುತ್ರ ಮತ್ತು ಉಪಮುಖ್ಯಮಂತ್ರಿ ತೇಜಸ್ವಿ ಯಾದವ್‌ರ ಮೇಲೆ ಸಿಬಿಐ ಆರೋಪ ಹೊರಿಸಿದ್ದ ಪ್ರಕರಣ ನಿತೀಶ್ ಕುಮಾರ್‌ರ ‘ಆತ್ಮಸಾಕ್ಷಿಯನ್ನೇ ಕಲಕುವಷ್ಟು’ ಗಂಭೀರವಾಗಿತ್ತು ಎಂಬುದು ನಂಬುವುದು ಕಷ್ಟ. ಹಾಗೆ ನೋಡಿದಲ್ಲಿ ಇದೊಂದು ದಿಢೀರ್ ಬೆಳವಣಿಯೇನೂ ಅಲ್ಲ. ನಿತೀಶ್ ಕುಮಾರ್ ಅವರು ಜಾತ್ಯತೀತ ಸಿದ್ಧಾಂತದ ಜೊತೆಗಾಗಲಿ ಮತ್ತು ಜಾತ್ಯತೀತ ಪಕ್ಷಗಳ ಜೊತೆಗಾಗಲಿ ಯಾವತ್ತಿಗೂ ಅಷ್ಟು ಸ್ನೇಹದಿಂದ ಇರಲೇ ಇಲ್ಲ.

1992ರಲ್ಲಿ ಅವರು ಸಂಘ ಪರಿವಾರ ಬಾಬರಿ ಮಸೀದಿ ಕೆಡವಿದ್ದು ತಪ್ಪು ಎಂಬ ಬಾಯಿ ಮಾತಿನ ಹೇಳಿಕೆಯನ್ನು ಕೊಟ್ಟಿದ್ದರು. ಆದರೆ ಅದೇ ವಿಷಯದ ಮುಂದುವರಿಕೆಯಾಗಿ ಬಿಜೆಪಿಯ ಸಖ್ಯವಿಟ್ಟುಕೊಳ್ಳುವ ವಿಷಯದಲ್ಲಿ ಅಂದಿನ ಜನತಾ ದಳ ವಿಭಜನೆಯಾದಾಗ ನಿತೀಶ್‌ರು ‘ಅಭಿವೃದ್ಧಿ ಮುಖ್ಯ’ ಎಂಬ ನೆಪವೊಡ್ಡಿ ಎನ್‌ಡಿಎ ಮೈತ್ರಿಕೂಟ ಸೇರಿಕೊಂಡು ವಾಜಪೇಯಿ ಸರಕಾರದಲ್ಲಿ ರೈಲ್ವೆ ಮಂತ್ರಿಯಾದರು. ಆನಂತರ 2000ದಲ್ಲಿ ರೈಲು ದುರಂತವೊಂದರ ಬಗ್ಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟರೂ, 2002ರಲ್ಲಿ ಕೃಷಿ ಮಂತ್ರಿಯಾಗಿ ಮತ್ತೆ ಎನ್‌ಡಿಎ ಸರಕಾರವನ್ನು ಸೇರಿಕೊಂಡರು. ಆದರೆ ಆ ಸಮಯದಲ್ಲಿ ಗುಜರಾತ್‌ನಲ್ಲಿ ಬಿಜೆಪಿ ಮತ್ತು ಸಂಘಪರಿವಾರ ನಡೆಸಿದ ನರಮೇಧಗಳು ಮಾತ್ರ ಅವರಲ್ಲಿ ಯಾವ ಬಗೆಯ ನೈತಿಕ ಹೊಣೆಗಾರಿಕೆಯನ್ನು ಉದ್ದೀಪನಗೊಳಿಸಲಿಲ್ಲ. ಅವರ ಅಂತಃಸ್ಸಾಕ್ಷಿಯನ್ನೂ ಕಲಕಲಿಲ್ಲ.

2010ರಲ್ಲಿ ಬಿಜೆಪಿಯ ಜೊತೆಸೇರಿ ಅಧಿಕಾರ ಪಡೆದುಕೊಂಡ ನಿತೀಶ್ ಅವರಿಗೆ ಆಗಿನ್ನೂ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ಜೊತೆ ವೈಯಕ್ತಿಕ ಪೈಪೋಟಿಯಿತ್ತು. ಮೋದಿಯನ್ನು ಎನ್‌ಡಿಎ ತನ್ನ ಪ್ರಧಾನಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದರಿಂದ ಬಿಜೆಪಿಯ ಜೊತೆ ಸಖ್ಯ ಕಳಚಿಕೊಂಡು 2015ರಲ್ಲಿ ಆರ್‌ಜೆಡಿ ಮತ್ತು ಕಾಂಗ್ರೆಸ್ ಜೊತೆ ಮಹಾಘಟ್‌ಬಂಧನ್ ಮಾಡಿಕೊಂಡು ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ಪಡೆದುಕೊಂಡರು. 2014ರ ನಂತರ ಎದುರಾಳಿಯಿಲ್ಲದೆ ಮುನ್ನುಗ್ಗುತ್ತಿದ್ದ ಮೋದಿಯವರ ಹಿಂದುತ್ವ ಯಾತ್ರೆಗೆ ಬಿಹಾರದಲ್ಲಿ ಈ ಘಟ್‌ಬಂಧನ ತಡೆಯೊಡ್ಡಿದ್ದು ದೇಶದಲ್ಲಿ ಹುರುಪನ್ನು ಮತ್ತು ಭರವಸೆಯನ್ನೂ ಹುಟ್ಟ್ಟುಹಾಕಿತ್ತು.

ಲಾಲು ಪ್ರಸಾದ್ ಯಾದವ್‌ರ ನೇರ ರಾಜಕೀಯ ಪ್ರವೇಶ ಕೋರ್ಟು ತೀರ್ಮಾನದಿಂದಾಗಿ ಕಷ್ಟಕರವಾಗಿದ್ದರಿಂದ ಮುಂದಿನ ರಾಷ್ಟ್ರೀಯ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರು ವಿರೋಧ ಪಕ್ಷಗಳ ಒಮ್ಮತ ಪ್ರಧಾನಿ ಅಭ್ಯರ್ಥಿಯಾಗಬಹುದೆಂಬ ಚರ್ಚೆಗಳು ಆ ಸಮಯದಲ್ಲಿ ಗರಿಗೆದರಿದ್ದವು. ಆದರೆ ನಂತರದ ದಿನಗಳಲ್ಲಿ ವಿರೋಧಪಕ್ಷಗಳ ಐಕ್ಯತೆಯ ಸಾಧ್ಯತೆಗಳೇ ವಿರಳವಾಗುತ್ತಾ ಹೋಯಿತು. ಮತ್ತೊಂದೆಡೆ ಈ ಘಟ್‌ಬಂಧನ್ ಅನ್ನು ಒಡೆಯುವ ತಂತ್ರವನ್ನು ಕೇಂದ್ರ ಸರಕಾರ ತೀವ್ರವಾಗಿ ಮುಂದುವರಿಸಿತು ಹಾಗೂ ದಿಲ್ಲಿಯಲ್ಲಿ ಪ್ರಧಾನಿ ಪದವಿಗೆ ಈಗಲೂ ಸಾಕಷ್ಟು ಅಭ್ಯರ್ಥಿಗಳಿರುವುದು ನಿತೀಶ್‌ರ ಗಮನಕ್ಕೂ ಬರತೊಡಗಿತು.

ಹೀಗಾಗಿ ಬಿಜೆಪಿ ವಿರೋಧಿ ಸರಕಾರವೊಂದರ ಮುಖ್ಯಮಂತ್ರಿಯಾಗಿದ್ದರೂ ನಿತೀಶ್ ಕುಮಾರ್ ಅವರು ನಿಧಾನವಾಗಿ ಬಿಜೆಪಿ ಕಡೆಗೇ ವಾಲತೊಡಗಿದ್ದರು. 2016ರಲ್ಲಿ ಬಿಜೆಪಿ ಸರಕಾರ ನಡೆಸಿದ ‘ಸರ್ಜಿಕಲ್ ಸ್ಟ್ರೈಕ್’ ಅನ್ನು ಉಳಿದೆಲ್ಲಾ ವಿರೋಧ ಪಕ್ಷಗಳು ಖಂಡಿಸಿದರೂ ನಿತೀಶ್ ಮೆಚ್ಚಿಕೊಂಡರು. 2016ರ ನವೆಂಬರ್ 8ರಂದು ಮೋದಿ ಸರಕಾರ ಜಾರಿಗೆ ತಂದ ನೋಟು ನಿಷೇಧವನ್ನು ಹಾಡಿ ಹೊಗಳಿದ್ದು ಇವರೊಬ್ಬರೇ. ಆನಂತರ ಅದು ಮಾಡಿದ ಅನಾಹುತಗಳನ್ನು ಹಲವಾರು ಎನ್‌ಡಿಎ ಮಿತ್ರಪಕ್ಷಗಳೇ ವಿಮರ್ಶಿಸಲು ಪ್ರಾರಂಭಿಸಿದರೂ ನಿತೀಶ್‌ರು ಮಾತ್ರ ಮೌನಕ್ಕೆ ಶರಣುಹೋದರು. ಆನಂತರ ಮೋದಿ ಸರಕಾರ ಜಾರಿಗೆ ತಂದ ಜಿಎಸ್‌ಟಿಯನ್ನು ಉಳಿದೆಲ್ಲಾ ವಿರೋಧ ಪಕ್ಷಗಳು ಮತ್ತು ಸಾಕ್ಷಾತ್ ಅವರ ಜೆಡಿಯು ಪಕ್ಷವೇ ವಿಮರ್ಶಿಸಿದರೂ ನಿತೀಶ್ ಮಾತ್ರ ಅದನ್ನು ಹಾಡಿಹೊಗಳಿದರು ಹಾಗೂ ಇತ್ತೀಚಿನ ರಾಷ್ಟ್ರಪತಿ ಚುನಾವಣೆಯಲ್ಲಂತೂ ಎನ್‌ಡಿಎ ಅಭ್ಯರ್ಥಿಯ ಪರವಾಗಿ ಮೊತ್ತ ಮೊದಲ ಹೇಳಿಕೆ ಇತ್ತದ್ದೇ ನಿತೀಶ್ ಕುಮಾರ್ ಅವರು.

ಆದ್ದರಿಂದ ಆತ್ಮ ಸಾಕ್ಷಿಯ ಕರೆಗೆ ಓಗೊಟ್ಟು ರಾಜೀನಾಮೆ ಕೊಟ್ಟೆನೆಂಬ ನಿತೀಶ್‌ರ ಹೇಳಿಕೆಯಲ್ಲಿ ಯಾವ ಸತ್ಯಾಂಶವೂ ಇಲ್ಲ. ನಿನ್ನೆ ಆರ್ಥಿಕ ಭ್ರಷ್ಟಾಚಾರಿಗಳೊಂದಿಗಿನ ಸಖ್ಯಕ್ಕೆ ರಾಜೀನಾಮೆ ಕೊಟ್ಟು; ಇಂದು ಆರ್ಥಿಕ ಭ್ರಷ್ಟಾಚಾರದ ಜೊತೆ, ದುಷ್ಟ ಸೈದ್ಧಾಂತಿಕ ಭ್ರಷ್ಟಾಚಾರಿಗಳ ಜೊತೆ ಸೇರಿ ಅಧಿಕಾರ ಉಳಿಸಿಕೊಳ್ಳುವ ತೀರ್ಮಾನದ ಹಿಂದೆ ಇರುವುದು ಕೇವಲ ಅವಕಾಶವಾದ ವತ್ತು ಸ್ವಾರ್ಥ. ವಿಪರ್ಯಾಸವೆಂದರೆ ನಿನ್ನೆ ನಿತೀಶ್ ಕುಮಾರ್ ಅವರು ಬಿಜೆಪಿಯೊಂದಿಗಿನ ಮೈತ್ರಿಗೆ ಸಹಿಹಾಕುತ್ತಿರುವ ಹೊತ್ತಿನಲ್ಲೇ ಭಾರತದ ಅತೀ ದೊಡ್ಡ ಹಗರಣವಾದ ಮಧ್ಯಪ್ರದೇಶದ ಬಿಜೆಪಿ ಸರಕಾರದ ವ್ಯಾಪಂ ಹಗರಣವನ್ನು ಮುಚ್ಚಿಹಾಕಲು ನಡೆಸುತ್ತಿರುವ ಭಾಗವಾಗಿ ನಡೆದ 45ನೆ ಕೊಲೆಯಲ್ಲಿ ಮತ್ತೊಬ್ಬ ಸಾಕ್ಷಿ ಹತನಾಗಿದ್ದ.

ಅದೇ ಸಮಯದಲ್ಲಿ ಛತ್ತೀಸ್‌ಗಡ ಬಿಜೆಪಿ ಸರಕಾರದ ಮಂತ್ರಿಯೊಬ್ಬರು ತನ್ನ ಪತ್ನಿಯ ಹೆಸರಲ್ಲಿ ಗುಳುಂ ಮಾಡಿರುವ ಕೋಟ್ಯಂತರ ರೂಪಾಯಿ ಹಗರಣ ಬಯಲಿಗೆ ಬಂದಿತ್ತು. ಇನ್ನು ಕರ್ನಾಟಕದ ಬಿಜೆಪಿ ನಾಯಕರ ಮೇಲಿರುವ ಭ್ರಷ್ಟಾಚಾರ ಹಗರಣದ ಬಗ್ಗೆ ಆ ಪಕ್ಷದ ಹೈಕಮಾಂಡ್ ತೋರುತ್ತಿರುವ ಮೌನ ಹಾಗೂ ಕಾನೂನು ಬೆಂಬಲಗಳೂ ದೇಶದ ಮಾಧ್ಯಮಗಳೆಲ್ಲದರಲ್ಲೂ ಬಯಲಾಗಿವೆ. ಆದರೆ ನಿತಿನ್ ಗಡ್ಕರಿಯವರನ್ನೂ ಒಳಗೊಂಡಂತೆ ಕೇಂದ್ರದ ಮಂತ್ರಿಗಳು ಅವರವರ ರಾಜ್ಯಗಳಲ್ಲಿ ನಡೆಸುತ್ತಿರುವ ಭ್ರಷ್ಟಾಚಾರಗಳು ಕಾಂಗ್ರೆಸ್ ಭ್ರಷ್ಟಾಚಾರಗಳಷ್ಟು ಮಾಧ್ಯಮಗಳಲ್ಲಿ ಬಯಲಿಗೆ ಬರುತ್ತಿಲ್ಲ. ಅದಕ್ಕೆ ಮೋದಿ ಸರಕಾರ ಮಾಧ್ಯಮ ಸಂಸ್ಥೆಗಳ ಮಾಲಕ ವರ್ಗಕ್ಕೆ ಹಣಕಾಸು ಮತ್ತಿತರ ಸಂಪನ್ಮೂಲ ಸೇವೆಗಳನ್ನು ಒದಗಿಸಿ ಭ್ರಷ್ಟರನ್ನಾಗಿಸಿರುವುದೇ ಕಾರಣವೇ ಹೊರತು ಮೋದಿ ಸರಕಾರ ಭ್ರಷ್ಟಾಚಾರ ಮುಕ್ತವೇನಲ್ಲ ಎಂಬುದು ಈಗ ಎಲ್ಲರ ಅರಿವಿಗೂ ಬರುತ್ತಿದೆ.

ಈ ಘಟಸ್ಫೋಟ ದೇಶದ ಭವಿಷ್ಯದ ಬಗ್ಗೆ ಹಲವು ಕೆಟ್ಟ ಸೂಚನೆಗಳನ್ನು ನೀಡುತ್ತಿದೆ. 2019ರ ಲೋಕಸಭಾ ಚುನಾವಣೆಯ ಹೊತ್ತಿಗೆ ವಿರೋಧಪಕ್ಷಗಳು ಇನ್ನಷ್ಟು ಬಲಹೀನಗೊಂಡಿರುತ್ತವೆ. ಮತ್ತೊಮ್ಮೆ ಮೋದಿತ್ವವೇ ಕೇಂದ್ರ ಹಾಗೂ ಬಹುಪಾಲು ರಾಜ್ಯಗಳಲ್ಲಿ ಅಧಿಕಾರ ಹಿಡಿದರೆ ಈ ದೇಶದ ಸಂವಿಧಾನಾತ್ಮಕ ಪ್ರಜಾತಂತ್ರದ ಸ್ವರೂಪವೇ ಬದಲಾಗುವ ದೊಡ್ಡ ಅಪಾಯವಂತೂ ಇದ್ದೇ ಇದೆ. ಅದರ ನೇರ ಪರಿಣಾಮ ಈ ದೇಶದ ದುರ್ಬಲರು, ಬಡವರು, ದಲಿತ-ಆದಿವಾಸಿಗಳು, ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಬದುಕು ಮತ್ತು ಭವಿಷ್ಯಗಳ ಮೇಲೆ ಆಗಲಿದೆ.

ಹೀಗಾಗಿ ಬಿಜೆಪಿಯಿಂದ ರಾಜಕೀಯ ದೂರವನ್ನು ಮಾತ್ರ ಅಳೆದು ಜಾತ್ಯತೀತ ರಾಜಕಾರಣ ಅಥವಾ ಮೈತ್ರಿಗಳನ್ನು ಮಾಡಿಕೊಳ್ಳುವುದು ಆತ್ಮವಂಚನೆಯೇ ಆಗಲಿದೆ. ಮನುವಾದ ಮತ್ತು ಬಂಡವಾಳವಾದದ ಮೈತ್ರಿಕೂಟದಂತಿರುವ ಹಿಂದೂತ್ವವಾದದಿಂದ ರಾಜಕೀಯವಾಗಿ ಮಾತ್ರವಲ್ಲದೆ ಸೈದ್ಧಾಂತಿಕವಾಗಿಯೂ ದೂರವಿದ್ದು ಪರ್ಯಾಯವನ್ನು ಕಟ್ಟುವುದರಿಂದ ಮಾತ್ರ ಭಾರತವೆಂಬ ಗಣರಾಜ್ಯವನ್ನು ಉಳಿಸಲು ಸಾಧ್ಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News