ನಕಲಿ ಪರ್ಮಿಟ್ ಸೃಷ್ಟಿಸಿ ಮರಳು ಸಾಗಾಣೆ: ಏಳು ಮಂದಿಯ ಸೆರೆ

Update: 2017-07-29 11:59 GMT

ಶಿವಮೊಗ್ಗ, ಜು. 28: ಮರಳು ಸಾಗಾಣಿಕೆಯ ನಕಲಿ ಪರ್ಮಿಟ್ ಸೃಷ್ಟಿಸಿ ಕಾನೂನು ಬಾಹಿರವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಠಾಣೆ ಪೊಲೀಸರು ಏಳು ಜನರನ್ನು ಬಂಧಿಸಿದ ಘಟನೆ ವರದಿಯಾಗಿದೆ.

ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಗ್ರಾಮ ನಿವಾಸಿ ಫಯಾಜ್ (28), ಆರಗ ಗ್ರಾಮದ ಉಪೇಂದ್ರ (30), ಕವಿರಾಜ (32), ಸಂತೋಷ (28), ಮಂಗಳೂರಿನ ಬಜಪೆಯ ನಿವಾಸಿ ಶಾಹೀನ್ ಇಕ್ಬಾಲ್ (26), ಬಂಟ್ವಾಳದ ನವೀನ್ (33) ಹಾಗೂ ತೀರ್ಥಹಳ್ಳಿಯ ಸುದೀಪ್ (26) ಬಂಧಿತ ಆರೋಪಿಗಳಾಗಿದ್ದಾರೆ. ಇವರಿಂದ ನಕಲಿ ಪರ್ಮಿಟ್ ಸೃಷ್ಟಿಗೆ ಬಳಸುತ್ತಿದ್ದ ಕಂಪ್ಯೂಟರ್, ಪ್ರಿಂಟರ್, 5 ಮೊಬೈಲ್ ಪೋನ್‌ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ಹಿನ್ನೆಲೆ: ಇತ್ತೀಚೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ನಕಲಿ ಪರ್ಮಿಟ್ ಬಳಕೆ ಮಾಡಿ ಕಾನೂನುಬಾಹಿರವಾಗಿ ಮರಳು ಸಾಗಾಣಿಕೆ ನಡೆಸಿ ಸರ್ಕಾರಕ್ಕೆ ರಾಜಧನ ವಂಚಿಸುತ್ತಿರುವ ಆರೋಪಕ್ಕೆ ಸಂಬಂಧಿಸಿದಂತೆ ದೂರುಗಳು ಪೊಲೀಸ್ ಇಲಾಖೆಗೆ ಬಂದಿದ್ದವು.
ಈ ಕುರಿತಂತೆ ತನಿಖೆ ನಡೆಸಲು ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿತ್ತು. ಈ ತಂಡವು ತಾಲೂಕಿನ ತ್ಯಾವರೆಕೊಪ್ಪ ಗ್ರಾಮದ ಸಾಗರ ರಸ್ತೆಯ ಬಳಿ ಮರಳು ಕೊಂಡೊಯ್ಯುತ್ತಿದ್ದ ಲಾರಿಯನ್ನು ತಪಾಸಣೆಗೊಳಪಡಿಸಿದ್ದರು. ಈ ವೇಳೆ ನಕಲಿ ಪರ್ಮಿಟ್ ಬಳಸಿ ಮರಳು ಸಾಗಾಣೆ ಮಾಡುತ್ತಿದ್ದುದು ಬೆಳಕಿಗೆ ಬಂದಿತ್ತು. ಚಾಲಕ ಫಯಾಜ್‌ನನ್ನು ಪೊಲೀಸರು ವಶ್ಕೆ ಪಡೆದು ವಿಚಾರಣೆ ನಡೆಸಿದ್ದರು.

ವಿಚಾರಣೆಯ ವೇಳೆ ಆರೋಪಿ ನೀಡಿದ ಮಾಹಿತಿಯನುಸಾರ ತೀರ್ಥಹಳ್ಳಿ, ಮಂಗಳೂರು, ಕೈಕಂಬ, ಬಂಟ್ವಾಳ, ಬಿ.ಸಿ.ರೋಡ್‌ಗಳಲ್ಲಿ ಇತರೆ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News