ಗ್ರಾ.ಪಂ. ಅನುದಾನ ದುರ್ಬಳಕೆ ಹಗರಣ ತನಿಖೆಗೆ ಆಗ್ರಹ

Update: 2017-07-28 12:55 GMT

ಶಿವಮೊಗ್ಗ, ಜು. 28: ಜಿಲ್ಲೆಯ ಗ್ರಾಪಂ ಅನುದಾನದಲ್ಲಿ ನಡೆದ ಭಾರೀ ಭ್ರಷ್ಟಾಚಾರ ಮತ್ತು ಹಗರಣದ ತನಿಖೆ ನಡೆಸಲು ಜಿಲ್ಲಾ ಪಂಚಾಯತ್ ಸಿಇಓ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಬಹುಜನ ಸಮಾಜ ಪಾರ್ಟಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಡಿ.ಶಿವಪ್ಪ ಆರೋಪಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಭದ್ರಾವತಿ ತಾಲ್ಲೂಕು ಕೂಡ್ಲಿಗೆರೆ ಹೋಬಳಿ ವೀರಾಪುರ ಗ್ರಾಮ ಪಂಚಾಯ್ತಿಯಲ್ಲಿ 2014-15 ಮತ್ತು 2015-16 ನೇ ಸಾಲಿನ ಎಸ್ಸಿ, ಎಸ್ಟಿ ಕಲ್ಯಾಣಕ್ಕಾಗಿ ರಾಜಸ್ವ ವಸೂಲಾತಿಯ ಶೇ.25 ರಷ್ಟು ಹಣ ಹಾಗೂ ಗ್ರಾಪಂಗಳಿಗೆ ಸರ್ಕಾರದಿಂದ ಬಿಡುಗಡೆಯಾದ ವಿವಿಧ ರೀತಿಯ ಅನುದಾನದ ಹಣವನ್ನು ಬಡವರ ಕಲ್ಯಾಣ ಕಾರ್ಯಕ್ರಮಗಳಿಗೆ ವಿನಿಯೋಗಿಸದೆ ಗ್ರಾಪಂನ ಅಭಿವೃದ್ಧಿ ಅಧಿಕಾರಿ ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ಪ್ರಗತಿ ಸಾಧಿಸದೆ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯವಹಿಸಿದ್ದಾರೆ ಎಂದು ದೂರಿದ್ದಾರೆ. ತನಿಖೆಯಲ್ಲಿ ಭ್ರಷ್ಟಾಚಾರ ಸಾಬೀತಾಗಿದ್ದರೂ ಕೂಡ ಅಭಿವೃದ್ಧಿ ಅಧಿಕಾರಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಅಮಾನತು ಮಾಡದೆ ಕಾಲಹರಣ ಮಾಡಲಾಗುತ್ತಿದೆ ಎಂದು ದೂರಿದರು.

ಸರ್ಕಾರದಿಂದ ಬಂದ ವಿವಿಧ ರೀತಿಯ ಅನುದಾನದ ಮೊತ್ತವನ್ನು ಡ್ರಾ ಮಾಡುವಾಗ ಯಾವುದೇ ಆರ್ಥಿಕ ಸಂಹಿತೆಯ ಮಾನದಂಡಗಳನ್ನು ಪಾಲಿಸದೆ ಹಣವನ್ನು ಡ್ರಾ ಮಾಡಿ ವೆಚ್ಚ ಮಾಡದೆ ಉಳಿಸಿಕೊಂಡಿರುವುದು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ನಡೆದಿದೆ. ಈ ಬಗ್ಗೆ ಜಿಪಂ ಸಿಇಓ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದರೂ ಸಹ ಕೇವಲ ಹಾರಿಕೆಯ ಉತ್ತರವನ್ನು ನೀಡುತ್ತಾ, ಭ್ರಷ್ಟಾಚಾರ ಎಸಗಿದ್ದವರ ಮೇಲೆ ಯಾವುದೇ ದೃಢವಾದ ಶಿಸ್ತುಕ್ರಮ ಜರುಗಿಸಿಲ್ಲ ಎಂದು ಆರೋಪಿಸಿದರು.

ಎಸ್ಸಿ, ಎಸ್ಟಿ ಯವರ ಅನುದಾನದ ಹಣ ಸಂಪೂರ್ಣವಾಗಿ ಖರ್ಚು ಮಾಡಬೇಕು. ಖರ್ಚು ಮಾಡದೆ ಇರುವ ಅಧಿಕಾರಿಗಳನ್ನು ಶಿಕ್ಷಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಒಂದು ತಿಂಗಳೊಳಗಾಗಿ ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಮರಣಾಂತ ಧರಣಿ ಸತ್ಯಾಗ್ರಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಘೇರಾವ್ ಹಾಕಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News