ವಕೀಲರ ಸಂಘದ ವತಿಯಿಂದ ಅಧಿಕಾರಿಗಳಿಗೆ ಮನವಿ

Update: 2017-07-28 13:03 GMT

ಸಾಗರ, ಜು.28: ರಾಜ್ಯ ಸರ್ಕಾರ ವಿಶೇಷ ನ್ಯಾಯಾಲಯಕ್ಕೆ ಭೂಕಬಳಿಕೆ ಸಂಬಂಧದ ಮೊಕದ್ದಮೆಗಳನ್ನು ವರ್ಗಾಯಿಸಿರುವುದನ್ನು ಖಂಡಿಸಿ ಶುಕ್ರವಾರ ವಕೀಲರ ಸಂಘದ ವತಿಯಿಂದ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಕರ್ನಾಟಕ ಭೂ ಕಬಳಿಕೆ ನಿಷೇದ ಅಧಿನಿಯಮ 2011ರ ಕಲಂ 7ರ ಅಡಿಯಲ್ಲಿ ರಚಿಸಲಾದ ವಿಶೇಷ ನ್ಯಾಯಾಲಯಕ್ಕೆ ಭೂ ಕಬಳಿಕೆ ಸಂಬಂಧ ಮೊಕದ್ದಮೆಗಳನ್ನು ವರ್ಗಾಯಿಸುವ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿರುವುದು ಸರಿಯಲ್ಲ. ಇದರಿಂದ ಸಾರ್ವಜನಿಕರಿಗೆ ಹೆಚ್ಚಿನ ಅನಾನುಕೂಲವಾಗುತ್ತದೆ ಎಂದು ಮನವಿಯಲ್ಲಿ ದೂರಲಾಗಿದೆ. ಈ ಆದೇಶದ ಪ್ರಕಾರ ಭೂಕಬಳಿಕೆ ಸಂಬಂಧದ ಎಲ್ಲ ಪ್ರಕರಣಗಳು ಬೆಂಗಳೂರಿನಲ್ಲಿ ವಿಚಾರಣೆಗೆ ಒಳಪಡುತ್ತದೆ. ಸ್ಥಳೀಯವಾಗಿ ತೀರ್ಮಾನವಾಗುವ ಇಂತಹ ಪ್ರಕರಣಗಳನ್ನು ಬಗೆಹರಿಸಿಕೊಳ್ಳಲು ಜನರು ಬೆಂಗಳೂರಿಗೆ ಹಾಜರಾಗಬೇಕಾಗುತ್ತದೆ. ಇದರಿಂದ ಜನಸಾಮಾನ್ಯರ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಮತ್ತು ಅನಗತ್ಯ ತಿರುಗಾಟ ಮಾಡಿಸುವ ಉದ್ದೇಶ ಸರ್ಕಾರದ ಈ ಆದೇಶದಲ್ಲಿ ಇದೆ ಎಂದು ಮನವಿಯಲ್ಲಿ ಹೇಳಲಾಗಿದೆ.

ಬೆಂಗಳೂರಿನ ಕಂದಾಯ ಭವನದಲ್ಲಿ ಪ್ರಕರಣ ಸಂಬಂಧ ಸಾರ್ವಜನಿಕರು ಹಾಜರಾಗಬೇಕಾಗುತ್ತದೆ. ರಾಜ್ಯದ ಮೂಲೆಮೂಲೆಗಳಿಂದ ಜನರು ಒಂದು ಪ್ರಕರಣಕ್ಕಾಗಿ ಇಲ್ಲಿಗೆ ಹೋಗಲು ನೂರಾರು ಮೈಲಿ ಪ್ರಯಾಣ ಬೆಳೆಸುವ ಜೊತೆಗೆ ನ್ಯಾಯವಾದಿಗಳ ಶುಲ್ಕ, ಪ್ರಯಾಣ ವೆಚ್ಚವನ್ನು ಭರಿಸಲು ಬಡಜನರಿಂದ ಸಾಧ್ಯವಾಗುವುದಿಲ್ಲ. ಆಗಾಗ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಹಾಜರಾಗಬೇಕಾಗಿರುವುದರಿಂದ ಜನರು ತೀವ್ರ ಸಂಕಷ್ಟ ಎದುರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸದರಿ ಪ್ರಕರಣದಲ್ಲಿ ಮಾಡಿರುವ ಆದೇಶವನ್ನು ಹಿಂದಕ್ಕೆ ಪಡೆದು, ಹಿಂದಿನಂತೆಯೆ ಕೆಳಗಿನ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸುವಂತೆ ಪುನರ್ ಆದೇಶ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ವಿ.ಶಂಕರ್, ನ್ಯಾಯವಾದಿಗಳಾದ ಎಂ.ರಾಘವೇಂದ್ರ, ಎಚ್.ಬಿ.ರಾಘವೇಂದ್ರ, ಷಣ್ಮುಖ, ಆರೀಫ್ ಆಲಿಖಾನ್, ಜಾವೀದ್ ಅಹ್ಮದ್, ಸಿ.ಎಲ್.ವೆಂಕಟಗಿರಿ, ರಾಜಪ್ಪ, ಎಸ್.ಕೆ.ಗಣಪತಿ, ಚಂದ್ರಶೇಖರ್ ಇನ್ನಿತರರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News