ಖಾಲಿ ಹುದ್ದೆಯಿಂದ ಆಡಳಿತಕ್ಕೆ ಸಂಕಷ್ಟ: ಸದಸ್ಯರ ಕಳವಳ

Update: 2017-07-28 13:30 GMT

ಪುತ್ತೂರು, ಜು.28: ವರ್ಷಕ್ಕೆ 6 ಕೋಟಿ ಆದಾಯ ಹೊಂದಿರುವ ಪುತ್ತೂರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಆಡಳಿತ ವಿಭಾಗದಲ್ಲಿ ಕೆಲಸ ಮಾಡಲು 15 ಹುದ್ದೆಗಳು ಮಂಜೂರುಗೊಂಡಿದ್ದು, ಇದೀಗ ಕೇವಲ 3 ಮಂದಿ ಮಾತ್ರ ಕರ್ತವ್ಯದಲ್ಲಿರುವಾಗ ಎಪಿಎಂಸಿ ಕೆಲಸ ಮಾಡುವ ಬಗೆ ಹೇಗೆ ಎಂಬ ವಿಚಾರದ ಬಗ್ಗೆ ಎಪಿಎಂಸಿ ಸಾಮಾನ್ಯ ಸಭೆಯಲ್ಲಿ ಬಾರೀ ಚರ್ಚೆ ನಡೆಯಿತು.
 
ಶುಕ್ರವಾರ ಎಪಿಎಂಸಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ನಿರ್ದೇಶಕರಾದ ಪುಲಸ್ತ್ಯಾ ರೈ, ದಿನೇಶ್ ಮೆದು, ತೀರ್ಥಾನಂದ ದುಗ್ಗಳ, ತ್ರಿವೇಣಿ ಪೆರ್ವೋಡಿ, ಮಂಜುನಾಥ್ ಎನ್.ಎಸ್., ಕೃಷ್ಣ ಕುಮಾರ್ ರೈ ಕೆದಂಬಾಡಿ ಗುತ್ತು ಮತ್ತಿತರರು ಪುತ್ತೂರು ಎಪಿಎಂಸಿಯಲ್ಲಿ ಪ್ರಭಾರ ನೆಲೆಯಲ್ಲಿದ್ದ ಕಾರ್ಯದರ್ಶಿ ಎಷ್.ಕೆ. ಕೃಷ್ಣ ಮೂರ್ತಿ ಜುಲಾಯಿ 31ಕ್ಕೆ ನಿವೃತ್ತಿ ಹೊಂದಲಿದ್ದು, ನಂತರ ಕೇವಲ ಇಬ್ಬರು ಮಾತ್ರ ಉಳಿಯುತ್ತಾರೆ. ಸರಕಾರ ಈ ಹುದ್ದೆಗಳನ್ನು ಭರ್ತಿ ಮಾಡದೇ ಹೋದರೆ ಇಲ್ಲಿ ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಎಪಿಎಂಸಿಗೆ ಆರೂವರೆ ಕೋಟಿ ಆದಾಯವಿದೆ. ಇದರಲ್ಲಿ ಸರಕಾರದ ಸಂಚಿತ ನಿಧಿಗೆ ತಿಂಗಳಿಗೆ ಸುಮಾರು 10 ಲಕ್ಷದಷ್ಟು ಮೊತ್ತವನ್ನು ಪಾವತಿ ಮಾಡುತ್ತಿದ್ದೇವೆ. ರಾಜ್ಯ ಕೃಷಿ ಮಾರಾಟ ಮಂಡಳಿಗೆ ವಂತಿಗೆ, ಕೃಷಿ ವಿಶ್ವವಿದ್ಯಾನಿಲಯ ವಂತಿಗೆ, ಆವರ್ತ ನಿಧಿಗೆ ಹಣ ಪಾವತಿ ಮಾಡಲಾಗುತ್ತದೆ. ನಮಗೆ ಪೂರ್ಣ ಪ್ರಮಾಣದಲ್ಲಿ ಸಿಬ್ಬಂದಿ ಕೊಡಲು ಸರಕಾರಕ್ಕೇನು ಸಮಸ್ಯೆ ಎಂದು ನಿರ್ದೇಶಕರು ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಮಾತನಾಡಿದ ಎಪಿಎಂಸಿ ಅಧ್ಯಕ್ಷರಾದ ಬೂಡಿಯಾರ್ ರಾಧಾಕೃಷ್ಣ ರೈ, ಇಲಾಖೆಯ ಜಂಟಿ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಸಿಬ್ಬಂದಿ ಸಮಸ್ಯೆ ಬಗ್ಗೆ ಗಮನ ಸೆಳೆಯಲಾಗಿದೆ. ಒಬ್ಬ ಖಾಯಂ ಕಾರ್ಯದರ್ಶಿಯನ್ನು ನೀಡುವಂತೆ ವಿನಂತಿಸಲಾಗಿದೆ. ಸಮಿತಿ ಸಭೆಯ ನಿರ್ಣಯವನ್ನೂ ಕಳುಹಿಸಲಾಗಿದೆ. ಮುಂದಿನ ಎರಡು ತಿಂಗಳಲ್ಲಿ ಖಾಯಂ ಕಾರ್ಯದರ್ಶಿ ಸಿಗುವ ನಿರೀಕ್ಷೆ ಇದೆ ಎಂದರು.

ಪ್ರಭಾರ ಕಾರ್ಯದರ್ಶಿ ಎಚ್.ಕೆ. ಕೃಷ್ಣಮೂರ್ತಿ ಮಾತನಾಡಿ, ರಾಜ್ಯದ ಎಪಿಎಂಸಿಗಳಲ್ಲಿ ಹಿಂದೆ 3500 ಹುದ್ದೆಗಳಿತ್ತು. ಈಗ 6500 ಸಾವಿರಕ್ಕೇರಿದೆ. ಇದರಲ್ಲಿ ಕೇವಲ 1200 ಹುದ್ದೆಗಳನ್ನು ಮಾತ್ರ ಭರ್ತಿಯಾಗಿದೆ. ಉಳಿದೆಲ್ಲ ಹುದ್ದೆಗಳನ್ನು ಆಯಾ ಎಪಿಎಂಸಿಗಳೇ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡಿವೆ. ನಮ್ಮ ಎಪಿಎಂಸಿಗೆ ಎಂಜಿನಿಯರ್ ಕೂಡ ಇಲ್ಲ. ಎಂಟು ಎಪಿಎಂಸಿಗೆ ಒಬ್ಬರು ಎಂಜಿನಿಯರ್ ಇದ್ದು, ಅವರೇ ಇಲ್ಲಿಗೂ ಬಂದು ಹೋಗುತ್ತಿದ್ದಾರೆ ಎಂದರು. ಪುತ್ತೂರು ಎಪಿಎಂಸಿ ಹುದ್ದೆಗಳನ್ನು ಭರ್ತಿ ಮಾಡುವಂತೆ ವಿನಂತಿಸಿ ಇಲಾಖೆಗೆ ಬರೆಯಲು ನಿರ್ಣಯ ಕೈಗೊಳ್ಳಲಾಯಿತು.

ಎಪಿಎಂಸಿ ಉಪಾಧ್ಯಕ್ಷ ಬಾಲಕೃಷ್ಣ ಬಾಣಜಾಲು, ನಿರ್ದೇಶಕರಾರ ಶಕೂರ್ ಹಾಜಿ, ತ್ರಿವೇಣಿ ಕರುಣಾಕರ ಪೆರ್ವೋಡಿ, ಪುಲಸ್ತ್ಯಾ ರೈ, ದಿನೇಶ್ ಮೆದು, ಮೇದಪ್ಪ ಗೌಡ, ಕೊರಗಪ್ಪ, ಕುಶಾಲಪ್ಪ ಗೌಡ ಅನಿಲ, ಕಾರ್ತಿಕ್ ರೈ, ತೀರ್ಥಾನಂದ ದುಗ್ಗಳ, ಕೃಷ್ಣ ಕುಮಾರ್ ರೈ, ಮಂಜುನಾಥ ಎನ್.ಎಸ್., ನಾಮ ನಿರ್ದೇಶಿತರಾದ ಗೀತಾ ದಾಸರಮೂಲೆ, ಶಶಿಕಿರಣ್ ರೈ, ರಾಮಕೃಷ್ಣ ಉಪಸ್ಥಿತರಿದ್ದರು. ಲೆಕ್ಕಪತ್ರ ವಿಭಾಗದ ರಾಮಚಂದ್ರ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News