ದಾವಣಗೆರೆ: ನೀರು, ನೈರ್ಮಲ್ಯ ಸಮಿತಿಯ ಮೊದಲನೇ ತ್ರೈಮಾಸಿಕ ಸಭೆ

Update: 2017-07-28 13:48 GMT

ದಾವಣಗೆರೆ, ಜು.28: ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ ಮಾಡುವ ನಿಟ್ಟಿನಲ್ಲಿ ಜಿ.ಪಂ ವತಿಯಿಂದ ವಿವಿಧ ಪರಿಣಾಮಕಾರಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿ.ಪಂ ಸಿಇಒ ಎಸ್ ಅಶ್ವತಿ ಹೇಳಿದರು. 

ಶುಕ್ರವಾರ ನಗರದ ಜಿ.ಪಂ ಸಭಾಂಗಣದಲ್ಲಿ 2017-18 ನೇ ಸಾಲಿನ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಜಿಲ್ಲೆಯ ನೀರು ಮತ್ತು ನೈರ್ಮಲ್ಯ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಜಿ.ಪಂ ಅಧ್ಯಕ್ಷೆ ಉಮಾ ರಮೇಶ್ ನೇತೃತ್ವದಲ್ಲಿ ರಚಿಸಲಾಗಿರುವ ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿಯ ಮೊದಲನೇ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿದರು.

ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಜಿಲ್ಲೆಯ ನಾಲ್ಕು ತಾಲ್ಲೂಕುಗಳಾದ ಹೊನ್ನಾಳಿ, ದಾವಣಗೆರೆ, ಹರಿಹರ ಮತ್ತು ಚನ್ನಗಿರಿಯನ್ನು ಬಯಲು ಬಹಿರ್ದೆಸೆ ಮುಕ್ತವೆಂದು ಘೋಷಣೆ ಮಾಡಲಾಗುವುದು. ಹರಪನಳ್ಳಿ ಮತ್ತು ಜಗಳೂರು ತಾಲ್ಲೂಕುಗಳನ್ನು ಡಿಸೆಂಬರ್ ಮಾಹೆಯಲ್ಲಿ ಘೋಷಿಸಲಾಗುವುದು. ಈ ನಿಟ್ಟಿನಲ್ಲಿ ಶೌಚಾಲಯ ಕಟ್ಟಿಸುವ ಕಾರ್ಯ ಚುರುಕುಗೊಳಿಸುವ ಉದ್ದೇಶದಿಂದ ಜಿಲ್ಲೆಯ 24 ಹೋಬಳಿಗಳಿಗೆ ಜಿಲ್ಲಾ ಮಟ್ಟದ ಮತ್ತು ಗ್ರಾಮ ಮಟ್ಟದಲ್ಲಿ ತಾಲ್ಲೂಕು ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನಿಯುಕ್ತಿಗೊಳಿಸಿ ತಮಗೆ ನಿಯುಕ್ತಿಗೊಳಿಸಿದ ಹೋಬಳಿಗಳಿಗೆ ನಿಯಮಿತವಾಗಿ ಭೇಟಿ ನೀಡಿ ಮನವೊಲಿಸುವ, ಇತರೆ ಸಮಸ್ಯೆಗಳನ್ನು ನಿರ್ವಹಿಸುವ ಕೆಲಸ ವಹಿಸಲಾಗಿದೆ ಎಂದು ತಿಳಿಸಿದರು.

ಪಿಡಿಓಗಳು ಮತ್ತು ಗ್ರಾ ಪಂ ಸಿಬ್ಬಂದಿಗಳು ನಿಯೋಜಿತ ನೋಡಲ್ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಶೌಚಾಲಯ ಕಟ್ಟಲು ಮುಂದೆ ಬಾರದ ಜನರ ಮನವೊಲಿಕೆ ಮತ್ತು ಸ್ಥಳೀಯವಾಗಿ ಇರುವ ಸಮಸ್ಯೆ ನಿವಾರಿಸುವಂತೆ ಸೂಚಿಸಿದರು. ಹೊನ್ನಾಳಿಯಲ್ಲಿ ಶೇ. 98 ಪ್ರಗತಿ ಸಾಧಿಸಲಾಗಿದ್ದು, ಆಗಸ್ಟ್ ಅಂತ್ಯದೊಳಗೆ ತಾಲ್ಲೂಕನ್ನು ಬಯಲು ಬಹಿರ್ದೆಸೆಮುಕ್ತ ತಾಲ್ಲೂಕನ್ನಾಗಿ ಘೋಷಿಸಲಾಗುವುದು. ಶೌಚಾಲಯ ಕಟ್ಟಿಸುವ ಕುರಿತು ಶಾಲಾ ಮಕ್ಕಳಲ್ಲಿ ಪರಿಣಾಮಕಾರಿಯಾಗಿ ಅರಿವು ಮೂಡಿಸುವ ಹಾಗೂ ಜಿ ಪಂ ವತಿಯಿಂದ ನೀಡಲಾಗಿರುವ ಅರ್ಜಿಗಳನ್ನು ಶೌಚಾಲಯ ಇಲ್ಲದ ಮಕ್ಕಳಿಂದ ಭರ್ತಿ ಮಾಡಿಸಿ ಶಾಲೆಯ ಮುಖ್ಯೋಪಾಧ್ಯಾರಿಗೆ ಡಿಡಿಪಿಐ ಸೂಚನೆ ನೀಡಬೇಕು. ಕೆಲವೆಡೆ ಉತ್ತಮವಾಗಿ ಈ ಕಾರ್ಯ ನಡೆಯುತ್ತಿದ್ದು, ಮತ್ತೆ ಕೆಲವೆಡೆ ನಡೆಯುತ್ತಿಲ್ಲ. ಈ ಬಗ್ಗೆ ಡಿಡಿಪಿಐ ಗಮನ ಹರಿಸಬೇಕೆಂದು ಸೂಚಿಸಿದರು.

ಶೌಚಾಲಯ ಕಟ್ಟಿಸಿಕೊಳ್ಳಲು ಒಪ್ಪಿದರೆ ಸಾಕು ಜಿ.ಪಂ ವತಿಯಿಂದ ನಾವೇ ಕಟ್ಟಿಸಿಕೊಡುತ್ತೇವೆ. ಸಿದ್ದ ಶೌಚಾಲಯಗಳನ್ನು ಮಾಡಿಸಿಕೊಡಲಾಗುವುದು. ತಾಲ್ಲೂಕು ಮಟ್ಟದ ಮತ್ತು ಜಿಲ್ಲಾ ಮಟ್ಟದ ನಿಯೋಜಿತ ನೋಡಲ್ ಅಧಿಕಾರಿಗಳು ಪರಸ್ಪರ ಸಹಕಾರದೊಂದಿಗೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು ಎಂದರು.

ಗರ್ಭಿಣಿ ಸ್ತ್ರೀಯರ ಮನೆಯಲ್ಲಿ ಗುಂಡಿ ತೋಡಬಾರದೆಂಬ ಸಂಪ್ರದಾಯವಿದ್ದರೂ ಮನವೊಲಿಕೆಯ ನಂತರ ಶೌಚಾಲಯ ಕಟ್ಟಿಸಿಕೊಳ್ಳಲು ಒಪ್ಪಿರುವ ಘಟನೆಗಳೂ ಇವೆ. ಗರ್ಭಿಣಿ ಮತ್ತು ಬಾಣಂತಿಯರಿಗೆ ಶೌಚಾಲಯ ಅತ್ಯಗತ್ಯವಾಗಿದೆ. ಮನೆಗಳಲ್ಲಿ ಶೌಚಾಲಯ ಕಟ್ಟಿಸಿಕೊಳ್ಳಲು ಮನವೊಲಿಸಬೇಕಾಗಿದೆ ಇದಕ್ಕೆ ಜನಪ್ರತಿನಿಧಿಗಳೂ ಸಹಕರಿಸುತ್ತಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳು ತಮ್ಮ ವ್ಯಾಪ್ತಿಯಲ್ಲಿ ಶೌಚಾಲಯ ಇಲ್ಲದಿರುವವರ ಮಾಹಿತಿ ನೀಡಿ ಅಧಿಕಾರಿಗಳೊಂದಿಗೆ ಸಹಕರಿಸಿದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಪ್ರಗತಿ ಸಾಧಿಸಬಹುದು ಎಂದು ತಿಳಿಸಿದರು.

ಜಿ ಪಂ ಅಧ್ಯಕ್ಷೆ ಉಮಾರಮೇಶ್ ಮಾತನಾಡಿ, ಹೊನ್ನಾಳಿ, ಚನ್ನಗಿರಿ ಸೇರಿದಂತೆ ಜಿಲ್ಲೆಯ ಗ್ರಾಮಗಳಲ್ಲಿ ಮನವೊಲಿಸುವ ಕಾರ್ಯದಲ್ಲಿ ತೊಡಗಿದ್ದು, ಅಧಿಕಾರಿಗಳು ಇದಕ್ಕೆ ಸಹಕಾರ ನೀಡಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News