ಮೂಢನಂಬಿಕೆ ನಿಷೇಧ ಕಾಯ್ದೆ ಜಾರಿಗೆ ಶ್ರೀ ಬಸವಪ್ರಭು ಸ್ವಾಮೀಜಿ ಆಗ್ರಹ

Update: 2017-07-28 13:52 GMT

ದಾವಣಗೆರೆ, ಜು.28: ಸಮಾಜದಲ್ಲಿರುವ ಕಂದಾಚಾರ ಮತ್ತು ಮೂಢನಂಬಿಕೆ ತೊಲಗಿಸಲು ಸರಕಾರ ಕೂಡಲೇ ಮೂಢನಂಬಿಕೆ ನಿಷೇಧ ಕಾಯ್ದೆ ಜಾರಿಗೆ ತರಬೇಕು ಎಂದು ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ರಾಜ್ಯ ಸರಕಾರವನ್ನು ಆಗ್ರಹಿಸಿದರು.

ಶುಕ್ರವಾರ ನಗರದ ವಿರಕ್ತಮಠದಲ್ಲಿ ಬಸವಕೇಂದ್ರದಿಂದ ನಾಗರ ಪಂಚಮಿ ಅಂಗವಾಗಿ ಏರ್ಪಡಿಸಿದ್ದ ಮಕ್ಕಳಿಗೆ ಹಾಲು ಕುಡಿಸುವ ಹಬ್ಬ ಕಾರ್ಯಕ್ರಮದಲ್ಲಿ ಹಾಲು ವಿತರಿಸಿ ಅವರು ಮಾತನಾಡಿದರು.

ಗಣಪತಿ ಹಾಲು ಕುಡಿದ ಎಂಬುದು ಸೇರಿದಂತೆ ಹಲವಾರು ಮೌಢ್ಯ, ಕಂದಾಚಾರ, ಅನಿಷ್ಠ ಪದ್ದತಿಗಳು ಇನ್ನು ಜೀವಂತವಾಗಿವೆ. ಅಲ್ಲದೇ ವಾಹಿನಿಗಳಲ್ಲಿ ಇಂತಹ ವಿಷಯಗಳನ್ನು ವೈಭವಿಕರಿಣ ಮಾಡುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸಗಳನ್ನು ಮಾಧ್ಯಮಗಳ ಮೂಲಕ ನಡೆಯಬೇಕಿದೆ. ಮೂಢನಂಬಿಕೆಗಳ ಪಾಲನೆಯಿಂದ ಭಾರತ ದೇಶ ಹಿಂದೆ ಉಳಿದಿದೆ. ಇದರಿಂದ ಹೊರಬರಬೇಕು. ಈ ಹಿನ್ನಲೆಯಲ್ಲಿ ಮೂಢನಂಬಿಕೆ ನಿಷೇಧ ಕಾಯ್ದೆ ಜಾರಿಗೆ ತರಬೇಕಾಗಿದೆ. ಮುಖ್ಯಮಂತ್ರಿಗಳು ಆಸಕ್ತಿ ವಹಿಸಿ ಕೂಡಲೇ ಇದನ್ನು ಜಾರಿಗೆ ತರಬೇಕೆಂದು ಆಗ್ರಹಿಸಿದರು. ಅಮೃತ ಸಮವಾದ ಹಾಲನ್ನು ಮಣ್ಣುಪಾಲು ಮಾಡಬೇಡಿ. ಮಕ್ಕಳು ದೇವರ ಸಮಾನ. ಅವರ ಹೃದಯದಲ್ಲಿ ದೇವರು ಇರುತ್ತಾನೆ. ಅವರಿಗೆ ಹಾಲು ಕುಡಿಸುವ ಮೂಲಕ ದೇವರಿಗೆ ಸಂತೃಪ್ತಿ ಪಡಿಸಬೇಕೆಂದರು.

ಗದಗದ ಟಿ.ಎಂ.ಪಂಚಾಕ್ಷರಿ ಶಾಸ್ತ್ರಿಗಳು ಮಾತನಾಡಿ, ನಾಗರ ಪಂಚಮಿ ಹಬ್ಬದಂದು ನಾಗರ ಕಲ್ಲಿನ ಮೂರ್ತಿಗೆ, ಹುತ್ತಕ್ಕೆ ಹಾಲು ಹಾಕುತ್ತಾ ಪೌಷ್ಟಿಕಾಂಶವುಳ್ಳ ಹಾಲನ್ನು ಮಣ್ಣು ಪಾಲು ಮಾಡಲಾಗುತ್ತಿದೆ. ಇದರಿಂದ ಯಾವುದೇ ಪ್ರಯೋಜನವಿಲ್ಲ ಎಂದರು.

ಜಿಲ್ಲಾ ಬಸವಕೇಂದ್ರದ ಅಧ್ಯಕ್ಷ ಎಂ.ಜಯಕುಮಾರ್, ಬಸವಾನಂದ ಸ್ವಾಮಿಗಳು, ಜಯದೇವ ಪ್ರಸಾದ ನಿಲಯದ ಐನಳ್ಳಿ ನಾಗರಾಜ್, ಶಿವಯೋಗಿ ಮಂದಿರದ ಕಾರ್ಯದರ್ಶಿ ಪಲ್ಲಾಗಟ್ಟಿ ಕೊಟ್ಟೇಶಪ್ಪ, ಉಪನ್ಯಾಸಕ ಎಂ.ಕೆ.ಬಕ್ಕಪ್ಪ, ವಿರಕ್ತಮಠದ ಧರ್ಮದರ್ಶಿ ಸಮಿತಿ ಉಪಾಧ್ಯಕ್ಷ ಹಾಸಬಾವಿ ಕರಿಬಸಪ್ಪ, ತಿಪ್ಪಣ್ಣ, ಮುಖ್ಯೋಪಾಧ್ಯಾಯನಿ ಲತಾ ಮೊದಲಾದವರು ಇದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News