ವಿವಿಧ ಬೇಡಿಕೆಗೆ ಆಗ್ರಹಿಸಿ ಮಂಡ್ಯದಲ್ಲಿ ಸರಣಿ ಪ್ರತಿಭಟನೆ

Update: 2017-07-28 14:27 GMT

ಮಂಡ್ಯ, ಜು.28: ನಾಲೆಗೆ ನೀರು ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ವಿವಿಧ ಸಂಘಟನೆಗಳು ನಗರದಲ್ಲಿ ಶುಕ್ರವಾರ ಸರಣಿ ಪ್ರತಿಭಟನೆ ನಡೆಸಿದವು. ನಾಲೆಗೆ ನೀರು ಬಿಡುಗಡೆಗೆ ಕರವೇ ಕಾರ್ಯಕರ್ತರು, ಶಾಸನ ಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ಜನವಾದಿ, ತಹಸೀಲ್ದಾರ್ ಶಂಕರಯ್ಯ ಆತ್ಮಹತ್ಯೆ ಪ್ರಕರಣ ಸಿಬಿಐಗೆ ವಹಿಸಲು ಆಗ್ರಹಿಸಿ ದಸಂಸ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪ್ರಧಾನಿ ಪ್ರತಿಕೃತಿ ದಹನ: ಹಿಂದಿ ಹೇರಿಕೆ ವಿರೋಧಿಸಿ ಹಾಗೂ ನಾಲೆಗಳಿಗೆ ನೀರು ಹರಿಸಲು ಒತ್ತಾಯಿಸಿ ನಗರದ ಮಹಾವೀರ ವೃತ್ತದಲ್ಲಿ ಕರವೇ ಕಾರ್ಯಕರ್ತರು ಕೇಂದ್ರ ಸರಕಾರದ ಪ್ರತಿಕೃತಿ ದಹನ ಮಾಡಿದರು.

ಕೇಂದ್ರ ಸರಕಾರ ಹಿಂದಿ ಭಾಷೆಯನ್ನು ಹಿಂದಿಯೇತರ ಭಾಷಿಕರ ಮೇಲೆ ಹೇರಿಕೆ ಮಾಡುತ್ತಿದೆ. ಬೆಂಗಳೂರು ಮೆಟ್ರೋ, ಬ್ಯಾಂಕ್, ರೈಲ್ವೆ ನಿಲ್ದಾಣ, ಅಂಚೆ ಮತ್ತು ಕೇಂದ್ರ ಸರಕಾರದ ಕಚೇರಿಗಳಲ್ಲಿ ಹಿಂದಿ ಹೇರಿಕೆ ಮಾಡಲಾಗಿದೆ ಎಂದು ಅವರು ಕಿಡಿಕಾರಿದರು. ಹಿಂದಿಯೂ ಇತರ ಭಾಷೆಗಳಂತೆ ಒಂದು ಭಾಷೆಯಾಗಿದೆಯೇ ಹೊರತು ಅದೊಂದೇ ರಾಷ್ಟ್ರೀಯ ಭಾಷೆಯಲ್ಲ. ಕನ್ನಡವೂ ರಾಷ್ಟ್ರೀಯ ಭಾಷೆಯಾಗಿದೆ. ಸ್ಥಳೀಯರ ಜನರ ವ್ಯವಹಾರಿಕ ಭಾಷೆಯಾದ ಕನ್ನಡವನ್ನು ರೈಲ್ವೆ, ಅಂಚೆ ಕಚೇರಿ, ಬ್ಯಾಂಕ್ ಮತ್ತು ಕೇಂದ್ರ ಸರಕಾರದ ಕಚೇರಿಗಳಲ್ಲಿ ಬಳಸಬೇಕು ಎಂದು ಅವರು ಒತ್ತಾಯಿಸಿದರು.

ಕೇಂದ್ರ ಸರಕಾರದ ರೈಲ್ವೆ, ಇತರ ಕಚೇರಿಗಳು, ಬ್ಯಾಂಕ್‌ಗಳಿಗೆ ನೇಮಕ ಮಾಡುವ ಸಂದರ್ಭದಲ್ಲಿ ಸ್ಥಳೀಯ ಉದ್ಯೋಗಾಕಾಂಕ್ಷಿಗಳಿಗೆ ನೆರವಾಗಲು, ತಾಂತ್ರಿಕ ಮಾಹಿತಿ ಒದಗಿಸಲು, ನೇಮಕಾತಿ ಸಮಿತಿಗಳಿಂದ ಕನ್ನಡಿಗರಿಗೆ ಆಗಿರುವ ಅನ್ಯಾಯ ಸರಿಪಡಿಸಲು ರಾಜ್ಯ ಸರಕಾರ ಕಾವಲು ಸಮಿತಿ ರಚಿಸಬೇಕು ಎಂದು ಅವರತು ತಾಕೀತು ಮಾಡಿದರು.

ಕಾವೇರಿ ಅಚ್ಚುಕಟ್ಟು ಪ್ರದೇಶದ ಜಲಾಶಯಗಳಿಗೆ ಅಲ್ಪಸ್ವಲ್ಪ ನೀರು ಬಂದಿದ್ದು, ಕೂಡಲೇ ನಾಲೆಗಳಿಗೆ ಹರಿಸಿ ಕೆರೆಕಟ್ಟೆಗಳನ್ನು ಭರ್ತಿಮಾಡುವ ಮೂಲಕ ಜನಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದವರು ಆಗ್ರಹಿಸಿದರು.
ವೇದಿಕೆ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಮು, ಪಿ.ಎ.ಜೋಸೆಫ್, ಸಿ.ಬಿ.ಕೆಂಪೇಗೌಡ, ಟಿ.ಕೆ.ಸೋಮಶೇಖರ್, ಕಲಾವಿದ ಪ್ರಕಾಶ್, ಸೂನಗಹಳ್ಳಿ ಮಹೇಶ, ಮುದ್ದೇಗೌಡ, ಕಿರಣಕುಮಾರ್, ಡಿ.ಮಹೇಶ್, ಅರುಣ್, ಶಶಿಧರ್, ಬಿ.ಕೆ.ಚೇತನ, ವೆಂಕಟೇಶ, ರಾಮು, ಇತರರು ಭಾಗವಹಿಸಿದ್ದರು.

ಜನವಾದಿ ಸಂಘಟನೆ: ಲೋಕಸಭಾ ಮುಂಗಾರು ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿ ಜಾರಿಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ಜನವಾದಿ ಮಹಿಳಾ ಸಂಘಟನೆ ಕಾರ್ಯಕರ್ತರು, ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

1996ರಲ್ಲಿ ದೇವೇಗೌಡರ ನೇತೃತ್ವದ ಸಂಯುಕ್ತ ರಂಗ ಸರಕಾರ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿತು. ಆದರೆ, ಪುರಷ ಪ್ರಧಾನ ಮನಸ್ಥಿತಿಯ ಪಕ್ಷಗಳ ರಾಜಕೀಯ ಇಚ್ಚಾಸಕ್ತಿಯ ಕೊರತೆಯಿಂದಾಗಿ ಮಸೂದೆ ಇದುವರೆಗೂ ನೆನೆಗುದಿಗೆ ಬಿದ್ದಿದೆ ಎಂದು ಅವರು ಕಿಡಿಕಾರಿದರು.
ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ನೂರು ದಿನದೊಳಗೆ ಮಸೂದೆ ಜಾರಿಗೊಳಿಸುವುದಾಗಿ ಭರವಸೆ ನೀಡಿತಷ್ಟೆ, ಯಾವುದೇ ಅಗತ್ಯ ಕ್ರಮ ಕೈಗೊಳ್ಳಲಿಲ್ಲ ಎಂದು ಅವರು ವಿಷಾದಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ತನ್ನ ಪಕ್ಷದ ಚುನಾವಣಾ ಭರವಸೆಯಾದ ಶೇ.33ರಷ್ಟು ಮಹಿಳಾ ಮೀಸಲಾತಿಯ ಪ್ರಶ್ನೆ ಕುರಿತು ತಳೆದಿರುವ ಜಾಣಮೌನ ಪುರುಷ ಪ್ರಧಾನ ವ್ಯವಸ್ಥೆಯ ಪರವಾಗಿಯೇ ಇದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ಭೇಟಿ ಬಚಾವ್ ಭೇಟೀ ಪಡಾವ್, ಇತ್ಯಾದಿ ಆಕರ್ಷಕ ಘೋಷಣೆಗಳನ್ನು ನೀಡುವ ನರೇಂದ್ರಮೋದಿ ತನ್ನ ಪಕ್ಷದ ಚುನಾವಣಾ ಭರವಸೆ ಈಡೇರಿಸುವುದು ಪ್ರಜಾಸತ್ತಾತ್ಮಕ ಕರ್ವವ್ಯವಾಗಿದ್ದು, ಪ್ರಸಕ್ತ ಮಳೆಗಾಲದ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಬೇಕು ಎಂದು ಅವರು ಆಗ್ರಹಿಸಿದರು.

ಸಂಘಟನೆಯ ಜಿಲ್ಲಾಧ್ಯಕ್ಷೆ ದೇವಿ, ಕಾರ್ಯದರ್ಶಿ ಸುನಿತಾ, ಸಹ ಕಾರ್ಯದರ್ಶಿ ಮಂಜುಳ, ಉಪಾಧ್ಯಕ್ಷೆ ಡಿ.ಕೆ.ಲತಾ, ಖಜಾಂಚಿ ಶೋಭ, ಇತರರು ಪಾಲ್ಗೊಂಡಿದ್ದರು.

ದಲಿತ ಸಂಘರ್ಷ ಸಮಿತಿ: ತಿ.ನರಸೀಪುರ ತಹಸೀಲ್ದಾರ್ ಶಂಕರಯ್ಯ ಅವರ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಯಿತು.

ಶಂಕರಯ್ಯ ಅವರ ಡೆತ್‌ನೋಟ್‌ನಲ್ಲಿ ತನಗೆ ಆಡಳಿತಾತ್ಮಕ ಒತ್ತಡವಿದೆಯೆಂದು ಬರೆಯಲಾಗಿದೆ ಎನ್ನಲಾಗಿದ್ದು, ಇದನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಬೇಕಿತ್ತು. ಆದರೆ, ಪರಿಗಣಿಸಿಲ್ಲ ಎಂದು ಅವರು ಆರೋಪಿಸಿದರು.

ತಿ.ನರಸೀಪುರದಲ್ಲಿ ಪ್ರಭಾವಿ ವ್ಯಕ್ತಿಗಳು ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದು, ಈ ಹಿನ್ನೆಲೆಯಲ್ಲು ಶಂಕರಯ್ಯ ಅವರನ್ನು ಕೊಲೆ ಮಾಡಿರುವ ಶಂಕೆಯಿದೆ. ಆದ್ದರಿಂದ ಈ ಬಗ್ಗೆ ಸಿಬಿಐ ತನಿಖೆ ನಡೆಸಿ ಸತ್ಯ ಹೊರತರಬೇಕು ಎಂದು ಅವರು ಒತ್ತಾಯಿಸದಿರು.
ಸಮಿತಿ ರಾಜ್ಯ ಸಂಘಟನಾ ಸಂಚಾಲಕ ವೆಂಕಟಗಿರಿಯಯ್ಯ, ಅಂದಾನಿ ಸೋಮನಹಳ್ಳೀ, ಅಣ್ಣೂರು ರಾಜಣ್ಣ, ಬಿ.ಎಂ.ಸತ್ಯ, ಡಿ.ಕೆ.ಅಂಕಯ್ಯ, ಹರಿಕುಮಾರ್, ಕಿಟ್ಟಪ್ಪ (ಬೆಂಜಮಿನ್), ಪಾರ್ವತಿ, ನಂಜುಡಪ್ಪ, ಇತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News