×
Ad

ಚಿನ್ನಾಭರಣ, ನಗದು, ರಿವಾಲ್ವರ್ ದೋಚಿದ ಚೋರರು

Update: 2017-07-28 20:57 IST

ಮಡಿಕೇರಿಜು, 28 :ಮನೆ ಮಾಲೀಕರು ಮನೆಯಲ್ಲಿಲ್ಲದ ಸಂದರ್ಭ ಬಾಗಿಲ ಚಿಲಕವನ್ನು ಒಡೆದು ಒಳ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಹಾಗೂ ರಿವಾಲ್ವರ್‌ನ್ನು ದೋಚಿದ ಘಟನೆ ನಗರದಲ್ಲಿ ನಡೆದಿದೆ.

ನಗರದ ಜಯನಗರ ಬಡಾವಣೆಯ ಕಾರ್ಯಪ್ಪ ಎಂಬುವವರು ಕುಟುಂಬ ಸಹಿತ ಚೆನ್ನೈಗೆ ತೆರಳಿದ್ದ ಸಂದರ್ಭವನ್ನು ಬಳಸಿದ ಚೋರರು ಈ ಕೃತ್ಯ ವೆಸಗಿದ್ದಾರೆ.

ಇಂದು ಬೆಳಗ್ಗೆ ಕಾರ್ಯಪ್ಪ ಅವರ ಮನೆಗೆ ಎಂದಿನಂತೆ ಮನೆ ಕೆಲಸದಾಕೆ ಬಂದಾಗ ಮನೆಯ ಚಿಲಕ ಒಡೆದಿರುವುದು ಕಂಡು ಬಂದಿದೆ. ತಕ್ಷಣ ಆಕೆ ಕಾರ್ಯಪ್ಪ ಅವರಿಗೆ ಮಾಹಿತಿ ನೀಡಿದ್ದಾರೆ. ಸಂಜೆ ವೇಳೆಗೆ ಮಡಿಕೇರಿಗೆ ತಲುಪಿದ ಕಾರ್ಯಪ್ಪ ಅವರು ನಗರ ಠಾಣೆಗೆ ದೂರು ನೀಡಿದ ಮೇರೆಗೆ ನಗರ ಪೊಲೀಸರು ಮನೆಗೆ ತೆರಳಿ ಪರಿಶೀಲಿಸಿದಾಗ ಕಳ್ಳರು ಮೊದಲಿಗೆ ಮನೆಯ ಹಿಂಭಾಗದ ಬಾಗಿಲನ್ನು ಒಡೆಯಲು ಪ್ರಯತ್ನಿಸಿ ವಿಫಲಗೊಂಡಿರುವುದು ಕಂಡು ಬಂದಿದೆ.

ನಂತರ ಮನೆಯ ಮುಂಬಾಗಿಲ ಚಿಲಕವನ್ನು ಕಬ್ಬಣದ ರಾಡಿನಿಂದ ಮುರಿದು ಒಳನುಗ್ಗಿ ಸುಮಾರು 6 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 20 ಸಾವಿರ ನಗದು ಹಾಗೂ ರಿವಾಲ್ವರ್‌ನ್ನು ಕಳವು ಮಾಡಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ಡಿವೈಎಸ್‌ಪಿ ಸುಂದರ್ ರಾಜ್, ನಗರ ಠಾಣಾಧಿಕಾರಿ ವೆಂಕಟರಮಣ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ತನಿಖೆ
ನಡೆಸಿದ್ದಾರೆ. ಚೋರರ ಪತ್ತೆಗೆ ಕಾರ್ಯಾಚರಣೆ ಚುರುಕುಗೊಂಡಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News