×
Ad

ಕೆರೆಗಳ ಡಿನೋಟಿಫಿಕೇಷನ್ ವಿರೋಧಿಸಿ ಬಯಲುಸೀಮೆ ನಾಗರಿಕರ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ

Update: 2017-07-28 21:06 IST

ಚಿಕ್ಕಬಳ್ಳಾಪುರ, ಜು.28: ಕೆರೆಗಳ ಡಿನೋಟಿಫಿಕೇಷನ್ ಎಂಬ ಜನವಿರೋಧ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ತನ್ನ ರಾಜಕೀಯ ಘೋರಿಯನ್ನು ತಾನೇ ನಿರ್ಮಿಸಿಕೊಳ್ಳುತ್ತಿದೆ ಎಂದು ಸಮಾಜ ಪರಿವರ್ತನಾ ಸಮುದಾಯ ಅಧ್ಯಕ್ಷ ಎಸ್.ಆರ್. ಹಿರೇಮಠ್ ಅಭಿಪ್ರಾಯಪಟ್ಟರು.

ನಗರದಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿಯು ಕೆರೆಗಳ ಡಿನೋಟಿಫಿಕೇಷನ್ ವಿರೋಧಿಸಿ ಹಮ್ಮಿಕೊಂಡಿದ್ದ ಬಯಲುಸೀಮೆ ನಾಗರೀಕರ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ಮಳೆಯ ಕೊರತೆಯಿಂದಾಗಿ ನೀರಿನ ಕೊರತೆ ಎದ್ದು ಕಾಣುತ್ತಿದ್ದು, ಇಂತಹ ಸಂದರ್ಭದಲ್ಲಿ ಬೀಳುವ ಮಳೆಯನ್ನು ಶೇಖರಿಸುವ ಕೆರೆ ಕುಂಟೆ ಹಾಗೂ ಇತರೆ ಜಲಮೂಲಗಳನ್ನು ರಕ್ಷಿಸುವ ಬದಲು ನಾಶ ಮಾಡಲು ಹೊರಟಿರುವುದು ವಿಪರ್ಯಾಸವಾಗಿದೆ ಎಂದರು.

ಚುನಾವಣಾ ಪೂರ್ವದಲ್ಲಿ ಪಾರದರ್ಶಕ, ದಕ್ಷ ಹಾಗೂ ಭ್ರಷ್ಟಾಚಾರ ಮುಕ್ತ ಆಡಳಿ ನಡೆಸುವುದಾಗಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದ್ದು, ಮುಂಬರುವ ವಿಧಾನಸಭಾ ಚುನಾವಣೆಗೆ ಹಣಹೊಂದಿಸಲು ಡಿನೋಟಿಫಿಕೇಷನ್ ಎಂಬ ಅಸ್ತ್ರವನ್ನು ಬಳಸಿಕೊಳ್ಳುತ್ತಿದೆ ಎಂಬ ಗಂಭೀರ ಆರೋಪ ಮಾಡಿದ ಅವರು, ಕೆರೆಗಳನ್ನು ಡಿನೋಟಿಫಿಕೇಷನ್ ಮಾಡುವ ಮೂಲಕ ಭೂಕಳ್ಳರು, ಭ್ರಷ್ಟರಿಗೆ ಬೆಂಬಲ ನೀಡಲು ಹೊರಟಿದೆ ಎಂದರು.

ನಾಡಿನ ಭವಿಷ್ಯಕ್ಕಾಗಿ ಪೂರ್ವಜರಿಂದ ಬಳುವಳಿಯಾಗಿ ಬಂದಿರುವ ಕೆರೆ ಕಾಲುವೆಗಳನ್ನು ಮುಂದಿನ ಪೀಳಿಗೆಗೆ ನೀಡುವ ಸರ್ಕಾರ ಸೇರಿದಂತೆ ಪ್ರತಿಯೊಬ್ಬರ ಆದ್ಯ ಕರ್ತವಾಗಿದೆ. ಅಲ್ಲದೆ ಕೆರೆ ಹಾಗೂ ಜೀವರಾಶಿಗಳಿಗೆ ಅವಿನಾಭಾವ ಸಂಬಂಧವಿದ್ದು, ಕೆರೆಗಳನ್ನೇ ಕೆಲ ಜೀವರಾಶಿಗಳು ಅವಲಂಭಿಸಿವೆ. ಆದ್ದರಿಂದ ರಾಜ್ಯ ಸರ್ಕಾರವು ಕೆರೆಗಳ ಡಿನೋಟಿಫಿಕೇಷನ್ ಎಂಬ ಜನವಿರೋಧಿ ನೀತಿಯನ್ನು ಈ ಕೂಡಲೇ ಕೈಬಿಡಬೇಕೆಂದು ಆಗ್ರಹಿಸಿದರು.

ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್. ಆಂಜನೇಯರೆಡ್ಡಿ ಮಾತನಾಡಿ, ನೀರಿನ ಅಭದ್ರತೆಯ ನಡುವೆ ಬಯಲುಸೀಮೆ ಭಾಗದ ಜನರು ಅಂತರ್ಜಲವನ್ನೇ ನಂಬಿ ಜೀವಿಸುತ್ತಿದ್ದಾರೆ. ಇಂತಹ ದುಸ್ಥಿತಿಯಲ್ಲಿ ಜಲಮೂಲಗಳನ್ನು ಮರು ಪೂರಣಗೊಳಿಸಿ ಅಂತರ್ಜಲ ವೃದ್ಧಿಸುವ ಬದಲು ಇರುವ ಕೆರೆಗಳನ್ನು ಒತ್ತುವರಿ ಮಾಡಿಕೊಳ್ಳಲು ಹೊರಟಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಕಳೆದ 20 ವರ್ಷಗಳ ಹಿಂದೆ ಬಯಲುಸೀಮೆಯ ಅಂತರ್ಜಲ ವೃದ್ಧಿಗೊಳಿಸಬೇಕೆಂದು ಪ್ರತಿಷ್ಟಿತ ಇಸ್ರೋ ಸಂಸ್ಥೆಯು ನೀಡಿದ ವರದಿಯು ಪರಿಗಣನೆಗೆ ತೆಗೆದುಕೊಳ್ಳದ ಸರ್ಕಾರ ಈ ಭಾಗವನ್ನು ಮರುಭೂಮಿಯನ್ನಾಗಿ ಪರಿವರ್ತಿಸಲು ಹೊರಟಿದೆ ಎಂದು ಆಕ್ರೋಷ ವ್ಯಕ್ತಪಡಿಸಿದ ಅವರು, ಕೆರೆಗಳ ಡಿನೋಟಿಫಿಕೇಷನ್ ವಿರೋಧಿಸಿ ಬಯಲುಸೀಮೆ ಭಾಗದ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ ಹಾಗೂ ಚಿತ್ರದುರ್ಗ ಜಿಲ್ಲೆಗಳ ಸಾರ್ವಜನಿಕರಿಂದ ಸಹಿ ಸಂಗ್ರಹಿಸಿ ರಾಜ್ಯಪಾಲರಿಗೆ ಸಲ್ಲಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ರವಿಕೃಷ್ಣಾರೆಡ್ಡಿ, ಮಳ್ಳೂರು ಹರೀಶ್, ಚಲಪತಿ, ಕಾಂ. ಲಕ್ಷ್ಮಯ್ಯ, ರಾಮೇಗೌಡ, ನಾರಾಯಣಸ್ವಾಮಿ, ಸುಷ್ಮಾಶ್ರೀನಿವಾಸ್, ಉಷಾರೆಡ್ಡಿ, ಪ್ರಭಾ ನಾರಾಯಣಗೌಡ, ಪುರುಷೋತ್ತಮ್ ಸೇರಿದಂತೆ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News