ಮಾನವ ಬಂಧುತ್ವ ವೇದಿಕೆಯಿಂದ ಹಾಲು ವಿತರಣಾ ಕಾರ್ಯಕ್ರಮ
ಚಿಕ್ಕಬಳ್ಳಾಪುರ, ಜು.28: ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿ ತರುವ ಮೂಲಕ ಡೊಂಗಿ ಜೋತಿಷಿಗಳಿಂದ ಜನರನ್ನು ಕಾಪಾಡುವ ಜೊತೆಗೆ ಸಮಾಜದಲ್ಲಿನ ಮೌಢ್ಯವನ್ನು ತೊಲಗಿಸಲು ಮುಂದಾಗಬೇಕೆಂದು ವಕೀಲ ಆರ್. ಮಟಮಪ್ಪ ಸರ್ಕಾರವನ್ನು ಒತ್ತಾಯಿಸಿದರು.
ನಗರದ ವಾಪಸಂದ್ರದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿರುವ ಅಂಗನವಾಡಿ ಮಕ್ಕಳಿಗೆ ಬಸವ ಪಂಚಮಿ ಅಂಗವಾಗಿ ಮಾನವ ಬಂಧುತ್ವ ವೇದಿಕೆ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಹಾಲು ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೈಜ್ಞಾನಿಕವಾಗಿ ಮುಂದುವರಿದರೂ ಮೌಢ್ಯಗಳ ಆಚರಣೆ ನಿಲ್ಲುವ ಬದಲು ಹೆಚ್ಚುತ್ತಿರುವುದು ದುರಂತವಾಗಿದೆ. ಅಲ್ಲದೆ ಜನರಲ್ಲಿ ಭಯವನ್ನೇ ಬಂಡವಾಳವನ್ನಾಗಿಸಿಕೊಂಡು ಡೊಂಗಿ ಜೋತಿಷಿಗಳು ಜನರನ್ನು ವಂಚಿಸುವುದನ್ನೇ ದೊಡ್ಡ ದಂಧೆಯನ್ನಾಗಿ ಮಾಡಿಕೊಂಡಿದ್ದಾರೆ ಎಂದರು.
ನಾಗರ ಪಂಚಮಿ ಹಬ್ಬದಲ್ಲಿ ಜನರು ಹಾವಿನ ಹುತ್ತ ಮತ್ತು ನಾಗರ ಕಲ್ಲುಗಳಿಗೆ ಹಾಲು ಎರೆದು ವ್ಯರ್ಥ ಮಾಡುತ್ತಾರೆ. ವಾಸ್ತವದಲ್ಲಿ ಹಾವು ಹಾಲು ಕುಡಿಯುವುದಿಲ್ಲ. ಹುತ್ತಕ್ಕೆ ಹಾಲು ಎರೆಯುವುದರಿಂದ ಹಾವಿಗೆ ತೊಂದರೆಯಾಗುತ್ತದೆ. ಹೀಗೆ ಪೋಲು ಮಾಡುವ ಹಾಲನ್ನೇ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗಾದರೂ ನೀಡಿದರೆ ಹಬ್ಬದ ಆಚರಣೆ ಅರ್ಥಪೂರ್ಣವಾಗಿರುತ್ತದೆ. ಈ ಬಗ್ಗೆ ಮಕ್ಕಳಲ್ಲಿ ಚಿಕ್ಕಂದಿನಲ್ಲಿಯೇ ವೈಜ್ಞಾನಿಕ ಚಿಂತನೆ ಮೂಡಿಸುವ ಅಗತ್ಯವಿದೆಎಂದು ತಿಳಿಸಿದರು.
ವಕೀಲ ಯಾಕೂಬ್ ಷರೀಫ್ ಮಾತನಾಡಿ, ಹಿರಿಯರು ಪಾಲಿಸಿಕೊಂಡು ಬಂದಿದ್ದಾರೆ ಎಂಬ ಏಕೈಕ ಕಾರಣಕ್ಕೆ ಮೌಢ್ಯಾಚರಣೆಗಳನ್ನು ಕಣ್ಮುಚ್ಚಿಕೊಂಡು ಪಾಲಿಸಬಾರದು. ಯಾವುದೇ ಕೆಲಸ ಮಾಡುವ ಮೊದಲು ಅದರ ಬಗ್ಗೆ ವೈಜ್ಞಾನಿಕ ಚಿಂತನೆ ನಡೆಸಿ ನಿರ್ಧಾರಕ್ಕೆ ಬರಬೇಕು. ಇಂದಿಗೂ ಗ್ರಾಮೀಣ ಭಾಗದಲ್ಲಿ ಮೌಢ್ಯ ಹೆಚ್ಚಿನ ಪ್ರಮಾಣದಲ್ಲಿದೆ. ಸಂಘ ಸಂಸ್ಥೆಗಳು ಈ ವಿಚಾರದಲ್ಲಿ ಜಾಗೃತಿ ಮೂಡಿಸುವ ಕೆಲ ಮಾಡಬೇಕು ಎಂದು ಹೇಳಿದರು.
ದಲಿತ ಮುಖಂಡ ಎಂ.ಎ.ಎನ್.ಮೂರ್ತಿ, ದಲಿತ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಸುರೇಶ್ ಬಾಬು, ಪೌರ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಂಜಪ್ಪ, ದಲಿತ ಸೇನೆ ಕಲಾ ಮಂಡಳಿ ಅಧ್ಯಕ್ಷ ಡಿ.ವಿ.ನಾರಾಯಣಸ್ವಾಮಿ, ವಕೀಲ ನರಸಿಂಹಮೂರ್ತಿ ಉಪಸ್ಥಿತರಿದ್ದರು.