×
Ad

ದೇಶದಲ್ಲಿ ರಾಜ್ಯಾಂಗ, ಕಾರ್ಯಾಂಗ, ನ್ಯಾಯಾಂಗ ಆರ್.ಎಸ್.ಎಸ್ ಕಪಿಮುಷ್ಠಿಯಲ್ಲಿದೆ: ಜಿ.ವಿ.ಶ್ರೀರಾಮರೆಡ್ಡಿ

Update: 2017-07-29 17:45 IST

ಬಾಗೇಪಲ್ಲಿ, ಜು.29: ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ರಾಜ್ಯಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಆರ್.ಎಸ್.ಎಸ್ ಕಪಿಮುಷ್ಠಿಯಲ್ಲಿರುವುದು ಅತ್ಯಂತ ಅಪಾಯಕಾರಿಯಾಗಿದೆ ಎಂದು ರಾಜ್ಯ ಸಿಪಿಐ(ಎಂ) ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ವಿಷಾದ ವ್ಯಕ್ತಪಡಿಸಿದರು.
        
ಪಟ್ಟಣದ ಎಸ್‌ಬಿಎಂ ರಸ್ತೆಯಲ್ಲಿ ಸಿಐಟಿಯು ತಾಲ್ಲೂಕು ಸಮಿತಿ ವತಿಯಿಂದ ಏರ್ಪಡಿಸಿದ್ದ ಜನ ಜಾಗೃತಿ ಜಾಥಾ ಮತ್ತು ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದು ದೇಶದಲ್ಲಿ ಆರ್ ಎಸ್ ಎಸ್ ಸಂಘಟನೆಯಲ್ಲಿ ಗುರುತಿಸಿಸಿಕೊಂಡಿರುವ ರಾಷ್ಟ್ರಪತಿ, ಪ್ರಧಾನ ಮಂತ್ರಿ ಸೇರಿದಂತೆ ಇನ್ನಿತರೆ ಜನಪ್ರತಿನಿಧಿಗಳು ಈ ಸಂಘಟನೆಯಲ್ಲಿರುವುದರಿಂದ ದೇಶದಲ್ಲಿ ಜಾತ್ಯಾತೀತ ಮನೋಭಾವನೆಯನ್ನು ಬೆಳಸಲು ಅಸಾಧ್ಯವಾಗುತ್ತೆ. ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಆಕ್ರಮಣಕಾರಿ ಆಡಳಿತ ನಡೆಸುತ್ತಿದ್ದು, ಹಿಟ್ಲರ್ ಸಿದ್ದಾಂತವನ್ನು ಜನಸಾಮಾನ್ಯರ ಮೇಲೆ ಪ್ರಯೋಗ ಮಾಡುತ್ತಿರುವುದು ಅತ್ಯಂತ ಶೋಚನೀಯವೆಂದರು.

 ದೇಶಕ್ಕೆ ಸ್ವಾತಂತ್ರ ಬಂದು 70 ವರ್ಷಗಳ ನಂತರವೂ ದುಡಿಯುವ ಕಾರ್ಮಿಕರ ಬದುಕು ಹಸನು ಮಾಡುವಲ್ಲಿ ನಮ್ಮನ್ನಾಳುವ ಎಲ್ಲಾ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿವೆ. ಚುನಾವಣಾ ಸಮಯದಲ್ಲಿ 2ಲಕ್ಷ ಕೋಟಿ ಉದ್ಯೋಗಗಳನ್ನು ಸೃಷ್ಠಿಮಾಡುವುದಾಗಿ ಭರವಸೆ ನೀಡಿದ್ದ ಮೋದಿ ಈಗಾಗಲೇ 1ಲಕ್ಷ ಕೋಟಿ ಉದ್ಯೋಗಿಗಳನ್ನು ರದ್ದು ಮಾಡಿರುವುವ ನಿಟ್ಟಿನಲ್ಲಿ ಕೋಟ್ಯಾಂತರ ಕಾರ್ಮಿಕರು ಉದ್ಯೋಗಗಳನ್ನು ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಮೋದಿ ಸರ್ಕಾರ ಸುಳ್ಳು ಸುದ್ದಿಗಳನ್ನು ಸೃಷ್ಠಿ ಮಾಡಿ ಕಾರ್ಮಿಕರಿಗೆ ಕನಿಷ್ಠ ವೇತನ 18ಸಾವಿರ ಗಳನ್ನು ಕೊಡುತ್ತೇನೆ ಎಂದು ಪತ್ರಿಕೆಗಳಲ್ಲಿ ಪ್ರಕಟಿಸಿ ದೇಶದ ಜನರನ್ನು ದಿಕ್ಕುತಪ್ಪಿಸುವಂತಹ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಮೋದಿ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.

ತಾಲ್ಲೂಕಿನ ಕಾಶಾಪುರ ಗ್ರಾಮದಿಂದ ರಾಜ್ಯ ಸಿಐಟಿಯು ಜಾಗೃತಿ ಜಾಥವನ್ನು ತಾಲ್ಲೂಕು ಸಮಿತಿ ಬರಮಾಡಿಕೊಂಡು ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಬಂದು ನಂತರ ಬಹಿರಂಗ ಸಭೆಯಲ್ಲಿ ಭಾಗವಹಿಸಿದರು. ನಂತರ ಸಿಐಟಿಯು ಯುವ ಕಲಾತಂಡದ ಕಲಾವಿದರು ಸಿಐಟಿಯು ಸಂಘಟನೆ ಬಗ್ಗೆ ಏಳೀ ಎದ್ದೇಳೀ ನಿದ್ದೆಯಿಂದ ಏದ್ದೇಳೀ ಎಂಬ ನಾಟಕದ ಮೂಲಕ ಜನರಿಗೆ ಅರಿವು ಮೂಡಿಸಿದರು.

ಈ ಸಂದರ್ಭದಲ್ಲಿ ಸಿಐಟಿಯು ರಾಜ್ಯ ಉಪಾಧ್ಯಕ್ಷ ವಿ.ಜೆ.ಕೆ ನಾಯರ್, ರಾಜ್ಯ ಬಿಸಿಯೂಟ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೇಸ್ತಾ, ಕಾರ್ಯದರ್ಶಿ ಉಮೇಶ್, ರಾಜ್ಯ ಅಂಗನವಾಡಿ ಪ್ರಧಾನ ಕಾರ್ಯದರ್ಶಿ ಸುನಂದ, ಸಿಐಟಿಯು ಜಿಲ್ಲಾಧ್ಯಕ್ಷೆ ಲಕ್ಷ್ಮೀದೇವಮ್ಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಗಂಗಪ್ಪ, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮುನಿವೆಂಕಟಪ್ಪ, ತಾಲ್ಲೂಕು ಅಧ್ಯಕ್ಷ ರಘುರಾಮರೆಡ್ಡಿ, ತಾಲ್ಲೂಕು ಅಧ್ಯಕ್ಷ ಬಿ.ಅಂಜನೇಯರೆಡ್ಡಿ, ಕಾರ್ಯದರ್ಶಿ ಮುಸ್ತಾಫಾ, ಕೆಪಿಆರ್ ಎಸ್ ತಾಲ್ಲೂಕು ಅಧ್ಯಕ್ಷ ಎ.ಎನ್.ಶ್ರೀರಾಮಪ್ಪ, ಪ್ರಧಾನ ಕಾರ್ಯದರ್ಶಿ ಜೆಸಿಬಿ ಮಂಜುನಾಥರೆಡ್ಡಿ, ಜಿಲ್ಲಾ ಕಾರ್ಯದರ್ಶಿ ಚನ್ನರಾಯಪ್ಪ,ಡಿವೈಎಫ್‌ಐ ತಾಲ್ಲೂಕು ಅಧ್ಯಕ್ಷ ಹೇಮಚಂದ್ರ, ಮುಖಂಡರಾಧ ಅಶ್ವಥಪ್ಪ, ಮತ್ತಿತರರು ಉಪಸ್ಥಿತರಿದ್ದರು.


    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News