ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ
Update: 2017-07-29 19:42 IST
ನಾಗಮಂಗಲ. ಜು.29: ಸಾಲಬಾಧೆ ತಾಳಲಾರದೆ ರೈತನೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕೊಣನೂರು ಗ್ರಾಮದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.
ಜೋಗಿಗೌಡರ ಮಗ ಕೆ.ಜೆ.ಕುಮಾರ(52) ಆತ್ಮಹತ್ಯೆ ಮಾಡಿಕೊಂಡ ರೈತ. ಇವರು ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪುತ್ರ ಯೋಗೇಶ್ ಪೊಲೀಸರಿಗೆ ದೂರು ನೀಡಿದ್ದಾರೆ.
ಈಚೆಗೆ ಜಮೀನಿನಲ್ಲಿ ಎರಡು ಕೊಳವೆಬಾವಿ ತೋಡಿಸಿದ್ದು, ವಿಫಲಗೊಂಡಿದ್ದವು. ಬಾವಿ ತೋಡಿಸಲು ಮತ್ತು ಕೃಷಿ ಚಟುವಟಿಕೆಗೆ ಬ್ಯಾಂಕ್, ಸ್ವ ಸಹಾಯ ಸಂಘಗಳು ಹಾಗೂ ಕೈಸಾಲ ಸೇರಿದಂತೆ ಸುಮಾರು 5 ಲಕ್ಷ ರೂ. ಸಾಲಮಾಡಿಕೊಂಡಿದ್ದರು ಎನ್ನಲಾಗಿದೆ.
ವಿಷಯ ತಿಳಿದು ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಈ ಸಂಬಂಧ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.