ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಆಗ್ರಹಿಸಿ ಪ್ರತಿಭಟನೆ
ನಾಗಮಂಗಲ, ಜು.29: ರಾಜಕೀಯ ಕಾರಣಕ್ಕಾಗಿಯೇ ಪ್ರತಿ ಚುನಾವಣಾ ವರ್ಷದಲ್ಲಿ ಅರ್ಹರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟು, ತಮಗೆ ಬೇಕಾದವರನ್ನು ಸೇರ್ಪಡೆ ಮಾಡುವ ಅಕ್ರಮ ನಡೆಯುತ್ತಿದ್ದು, ದೂರು ನೀಡಿದರು ಪ್ರಯೋಜನವಾಗುತ್ತಿಲ್ಲ ಎಂದು ಆರೋಪಿಸಿ ನಾಗಮಂಗಲ ವಿಧಾನಸಭಾ ಕ್ಷೇತ್ರದ ಕೊಪ್ಪ ಹೋಬಳಿಯ ಹರಳಕೆರೆ ಮತ್ತು ಚನ್ನಮ್ಮನಕೊಪ್ಪಲು ಗ್ರಾಮಸ್ಥರು ತಾಲೂಕು ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ಮದ್ದೂರು ತಾಲೂಕಿನ ಕೊಪ್ಪ ಹೋಬಳಿ ನಾಗಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುತ್ತದೆ. 193 ಮತಗಟ್ಟೆ ಸಂಖ್ಯೆಯ ಹರಳಕೆರೆ ಮತ್ತು ಚನ್ನಮ್ಮನಕೊಪ್ಪಲು ಬೂತ್ ಅತ್ಯಂತ ಸೂಕ್ಷ್ಮ ಮತಗಟ್ಟೆಯಾಗಿದ್ದು, ಚುನಾವಣೆಗಾಗಿಯೇ ಅನೇಕ ಬಾರಿ ಗಲಾಟೆಗಳು ನಡೆದು ವ್ಯಾಜ್ಯ ಕೋರ್ಟ್ ಮೇಟ್ಟಿಲೇರಿದೆ. ಕಳೆದ ಮೂರು ಚುನಾವಣಾ ವರ್ಷದಿಂದಲೂ ಮತದಾರರ ಪಟ್ಟಿಯಿಂದ ತಮ್ಮನ್ನು ರಾಜಕೀಯ ಕಾರಣಕ್ಕಾಗಿಯೇ ಕೈಬಿಡಲಾಗುತ್ತಿದೆ. ಮತ್ತೆ ಹೆಸರು ನೋಂದಣಿ ಮಾಡಿಸಿದರೂ ಗ್ರಾಮದಲ್ಲಿ ವಾಸವಿಲ್ಲ ಎಂದು ಸುಳ್ಳು ವರದಿ ನೀಡಿ ನೂರಾರು ಮಂದಿಯನ್ನ ಮತದಾನದಿಂದ ವಂಚಿಸಲಾಗುತ್ತಿದೆ. ಅರ್ಹರಲ್ಲದವರನ್ನ ಪಟ್ಟಿಗೆ ಸೇರಿಸಿ ಅಕ್ರಮ ನಡೆಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ತಾವೆಲ್ಲರೂ ಗ್ರಾಮದಲ್ಲೆ ವಾಸವಿರುವವರಾಗಿರುವುದನ್ನು ಸಾಬೀತುಪಡಿಸಿದರೂ ಪ್ರಯೋಜನವಾಗಿಲ್ಲ. ಹೀಗೆ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲೂ ಈ ಅಕ್ರಮ ನಡೆಯುತ್ತಿದ್ದ ಜನರ ದೂರಿಗೆ ಯಾರು ಸ್ಪಂದಿಸುತ್ತಿಲ್ಲ. ಕೂಡಲೇ ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ತಹಸೀಲ್ದಾರ್ ಶಿವಣ್ಣ, ಸ್ಥಳೀಯ ಬಿಎಲ್‌ಓಗಳ ಮೇಲೆ ಪಟ್ಟಭದ್ರ ಹಿತಾಸಕ್ತಿಗಳು ಒತ್ತಡಹಾಕಿ, ತಮಗೆ ಬೇಡದವರ ಹೆಸರು ಕೈಬಿಟ್ಟು ಅನರ್ಹರ ಹೆಸರು ಸೇರಿಸುವ ಕೆಲಸ ಮಾಡುತ್ತಿದ್ದಾರೆಂಬ ಮಾಹಿತಿಗಳು ಕೇಳಿಬಂದಿದ್ದು, ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ನಾಗಮಂಗಲ ಕ್ಷೇತ್ರದಲ್ಲಿ ಮಾತ್ರ ಅಂಕಿ ಅಂಶಗಳಿಗಿಂತಲೂ ಹೆಚ್ಚು ಮತದಾರರು ಇರುವುದು ಗಮನಕ್ಕೆ ಬಂದಿದ್ದು, ಈ ಬಗ್ಗೆ ಮತಪಟ್ಟಿ ಪರಿಶೀಲನೆ ನಡೆಯುತ್ತದೆ. ಅರ್ಹರಿರುವವರ ಸೇರ್ಪಡೆಗೆ ಕ್ರಮವಹಿಸಲಾಗುವುದು. ಸಂಬಂಧಪಟ್ಟ ನಮೂನೆಯಲ್ಲಿ ಅರ್ಜಿಸಲ್ಲಿಸಬೇಕು ಎಂದು ಭರವಸೆ ನೀಡಿದರು.
ಗ್ರಾಪಂ ಅಧ್ಯಕ್ಷ ಯೋಗೇಶ್, ಸದಸ್ಯ ಚಂದ್ರಶೇಖರ್, ವರದರಾಜು, ಚನ್ನಕೇಶವ, ಸತೀಶ, ಕೃಷ್ಣಪ್ಪ, ಸುಂದರರಾಜು, ಕೃಷ್ಣೇಗೌಡ, ಪುಟ್ಟಸ್ವಾಮಿ, ನಾಗಣ್ಣ, ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.