ಮಾಧ್ಯಮಗಳು ಪಕ್ಷಪಾತ ಧೋರಣೆಯಿಂದ ಹೊರಬಂದು ಸಾಮರಸ್ಯ ಕಾಪಾಡಲಿ: ಶಶಿಧರ್
ಭಟ್ಕಳ ,ಜು.29: ಮಾಧ್ಯಮಗಳು ಜಾತೀಯತೆ, ಪಕ್ಷಪಾತ ಧೋರಣೆಯನ್ನು ಅನುಸರಿಸದೇ ಕೋಮು ಸಾಮರಸ್ಯಕಾಪಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಬೆಂಗಳೂರು ಸುದ್ದಿಟಿವಿ ಪ್ರಧಾನ ಸಂಪಾದಕ ಶಶಿಧರ ಭಟ್ ಹೇಳಿದರು.
ಅವರು ಶನಿವಾರ ಇಲ್ಲಿನ ಕಮಲಾವತಿ ರಾಮನಾಥ ಶಾನುಭಾಗ್ ಸಭಾ ಭವನದಲ್ಲಿ ಭಟ್ಕಳ ಪತ್ರಕರ್ತರ ಸಂಘದಿಂದ ಶನಿವಾರ ನಡೆದ ಪತ್ರಿಕಾ ದಿನಾಚರಣೆ, ಭಟ್ಟಾಕಳಂಕ ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಾಧ್ಯಮಗಳು ಜಾತೀಯತೆ, ಪಕ್ಷಪಾತ ಧೋರಣೆಯನ್ನುಅನುಸರಿಸದೇ ಕೋಮು ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಪತ್ರಕರ್ತರು ಮತ್ತು ಪತ್ರಿಕೆಗಳು ನೈತಿಕತೆಯನ್ನು ಉಳಿಸಿಕೊಳ್ಳುವುದರ ಜತೆಗೆ ಸಾಮಾಜಿಕ ಜವಾಬ್ದಾರಿಯನ್ನು ಅರಿತು ನಡೆದುಕೊಳ್ಳಬೇಕು. ಇಂದು ಹೆಚ್ಚಿನ ಸುದ್ದಿವಾಹಿನಿಗಳು ಕೋಮುವಾದಿಗಳಾಗುತ್ತಿವೆ. ಇದು ಸಮಾಜಕ್ಕೆಅಪಾಯಕಾರಿಯಾಗಿದೆ. ಪತ್ರಕರ್ತರು ರಾಜಕೀಯ ವ್ಯಕ್ತಿಗಳೊಂದಿಗೆ ಸಂಪರ್ಕ ಇಟ್ಟು ಕೊಂಡಿರಬೇಕೆ ಹೊರತು ಸಂಬಂಧ ಹೊಂದಿರಬಾರದು. ಪತ್ರಿಕೆ, ಪತ್ರಕರ್ತರು ಮತ್ತು ವಾಹಿನಿಗಳ ಮೇಲೆ ಜನರು ಇಟ್ಟು ಕೊಂಡಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿಕಾರ್ಯನಿರ್ವಹಿಸಬೇಕು ಎಂದರು.
ಹೊಸದಿಗಂತ ಪತ್ರಿಕೆಯ ಮುಖ್ಯಪ್ರಬಂಧಕ ವಿಠ್ಠಲದಾಸ ಕಾಮತ್ ಹಾಗು 17 ವರ್ಷಗಳಿಂದ ಭಟ್ಕಳದಲ್ಲಿ ಪ್ರಜಾವಾಣಿ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿರುವ ರಾಘವೇಂದ್ರ ಭಟ್‌ಜಾಲಿ ಇವರಿಗೆ ವ್ಯಾಕರಣಕಾರ, ಕವಿ ಭಟ್ಟಾಕಳಂಕನ ಹೆಸರಿನಲ್ಲಿ ಪತ್ರಕರ್ತರ ಸಂಘದಿಂದ ನೀಡಲಾದ 'ಭಟ್ಟಾಕಳಂಕ' ಪ್ರಶಸ್ತಿಯನ್ನು 5ಸಾವಿರ ನಗದು ಹಾಗೂ ಫಲಕದೊಂದಿಗೆ ಶಾಸಕ ಮಂಕಾಳ ವೈದ್ಯ ಪ್ರದಾನ ಮಾಡಿದರು. ನಂತರ ಮಾತನಾಡಿದ ಅವರು, ನಾವು ಮಾಡುವ ಕೆಲಸ ಜನರು ಗುರುತಿಸುವಂತಾಗಬೇಕು. ಪತ್ರಕರ್ತರು ಸಮಾಜದಲ್ಲಿನ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದಾಗ ಅವುಗಳನ್ನು ಪರಿಹರಿಸಲು ಸಾಧ್ಯಎಂದರು.
ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದ ಉಪ ವಿಭಾಗಾಧಿಕಾರಿಎಂ.ಎನ್ ಮಂಜುನಾಥ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ಕಿವುಡಾಗಬಾರದು. ಜನರು ಮೂಕರಾಗಬಾರದು ಎಂದು ಪತ್ರಿಕೆಗಳು ಜಾಗೃತಿ ಮೂಡಿಸುವಕಾರ್ಯ ಮಾಡುತ್ತಿವೆ ಎಂದರು. ತಂಝೀಮ್ ಸಂಸ್ಥೆಯ ಪ್ರದಾನ ಕಾರ್ಯದರ್ಶಿ ಅಲ್ತಾಫ್ ಖರೂರಿ, ಸಿದ್ದಾರ್ಥ ಕಾಲೇಜಿನ ಪ್ರಾಂಶುಪಾಲೆ ಅರ್ಚನಾ ಯು, ಪ್ರಶಸ್ತಿ ಪುರಸ್ಕೃತರ ಪರವಾಗಿ ವಿಠ್ಠಲದಾಸ ಕಾಮತ್ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತರ ಸಂಘದ ಅಧ್ಯಕ್ಷ ವಿಷ್ಣು ದೇವಾಡಿಗ, ಸಂಘ ಸ್ಥಾಪನೆಯಾಗಿ 10 ವರ್ಷಆಗಿದ್ದು, ಮುಂದಿನ ದಿನಗಳಲ್ಲಿ ದಶಮಾನೋತ್ಸವ ಹಾಗೂ ನಾಡಿನ ವಿವಿಧ ಪತ್ರಿಕೆ, ವಾಹಿನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಪತ್ರಕರ್ತರನ್ನು ಗುರುತಿಸಿ, ರಾಜ್ಯಮಟ್ಟದ ಪ್ರಶಸ್ತಿ ನೀಡಲು ಚಿಂತನೆ ನಡೆಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪತ್ರಿಕಾ ಏಜೆಂಟರಾದ ಮಧುಕಾಯ್ಕಿಣಿ, ಭೈರಾ ಮೊಗೇರ್, ಯೋಗಗುರು ಗೋವಿಂದ ದೇವಾಡಿಗ, ಶಿಕ್ಷಕ ಆರ್,ಎಸ್ ನಾಯ್ಕರನ್ನು ಸನ್ಮಾನಿಸಲಾಯಿತು. ಹಾಗೂ ಅಪಘಾತದಲ್ಲಿ ಗಾಯಗೊಂಡುಚಿಕಿತ್ಸೆ ಪಡೆಯುತ್ತಿರುವ ಪತ್ರಕರ್ತ ರಾಮಚಂದ್ರಕಿಣಿಗೆ ಸಂಘದಿಂದ ಕಿರುಧನಸಹಾಯ ನೀಡಲಾಯಿತು.
ನ್ಯೂಇಂಗ್ಲಿಷ್ ಸ್ಕೂಲ್ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ನಾಡಗೀತೆ ಹಾಡಿದರು. ಪತ್ರಕರ್ತ ಸುಭ್ರಮಣ್ಯ ದಾಸನಕುಡಿಗೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕಸಾಪ ಅಧ್ಯಕ್ಷ ಗಂಗಾಧರ ನಾಯ್ಕ, ಶಿಕ್ಷಕ ಶ್ರೀಧರ ಶೇಟ್‌ಕಾರ್ಯಕ್ರಮ ನಿರೂಪಿಸಿದರು. ಸಂಘದ ಪ್ರ.ಕಾ ಮನಮೋಹನ ನಾಯ್ಕ ವಂದಿಸಿದರು.
ಕಾರ್ಯಕ್ರಮಕ್ಕೂ ಪೂರ್ವದಲ್ಲಿಇತ್ತೀಚೆಗೆ ನಿಧನರಾದ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಹಾಗೂ ಉಗ್ರರ ದಾಳಿಯಿಂದ ಮೃತಪಟ್ಟ ಯೋಧರಿಗೆ ಒಂದು ನಿಮಿಷ ಮೌನಾಚರಣೆ ನಡೆಸುವ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು.