ಜಾಬ್ ಕಾರ್ಡ್‌ಗೆ ಆಧಾರ್ ಜೋಡಣೆಗೆ ಮನವಿ
ಮಂಡ್ಯ, ಜು.29: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅಧಾರ್ ಆಧಾರಿತ ಕೂಲಿ ಪಾವತಿ ವ್ಯವಸ್ಥೆ ಜಾರಿಗೆ ತಂದಿದ್ದು, ಯೋಜನೆಯಡಿ ನೋಂದಾಯಿಸಿರುವ ಎಲ್ಲ ಕೂಲಿಕಾರರು ವೈಯಕ್ತಿಕ ಬ್ಯಾಂಕ್ ಖಾತೆ ಸಂಖ್ಯೆಯೊಂದಿಗೆ ಅಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಜೋಡಣೆ ಮಾಡಿಸುವಂತೆ ಜಿಲ್ಲಾ ಪಂಚಾಯತ್ ಸಿಇಒ ಬಿ.ಶರತ್ ಮನವಿ ಮಾಡಿದ್ದಾರೆ.
ಪ್ರಸಕ್ತ ಆರ್ಥಿಕ ವರ್ಷದ ಆಗಸ್ಟ್ 31ರ ಒಳಗೆ ಎಲ್ಲ ಕೂಲಿಕಾರರು ತಮ್ಮ ವೈಯಕ್ತಿಕ ಬ್ಯಾಂಕ್ ಖಾತೆ ಸಂಖ್ಯೆಯೊಂದಿಗೆ ’ಅಧಾರ್’ ಸಂಖ್ಯೆ ಜೋಡಣೆ ಮಾಡಿಸಬೇಕಿದೆ. ಇಲ್ಲದಿದ್ದರೆ, ಅಂತಹ ಕೂಲಿಕಾರರಿಗೆ ಕೂಲಿ ಪಾವತಿಸಲು ತೊಂದರೆ ಆಗಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
’ಆಧಾರ್’ ಸಂಖ್ಯೆ ಒದಗಿಸುವವರೆಗೆ ಅಂತಹ ಕೂಲಿಕಾರ ಖಾತೆದಾರರ ವ್ಯವಹರಣೆ ಸ್ಥಗಿತಗೊಳ್ಳಲಾಗಿದೆ. ಹಾಗಾಗಿ, ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುವ ಕೂಲಿ ಕಾರ್ಮಿಕರು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯತ್‌ಗೆ ಆಧಾರ್ ಮತ್ತು ಬ್ಯಾಕ್ ಪಾಸ್‌ನ ನಕಲು ಪ್ರತಿಯನ್ನು ಸಲ್ಲಿಸುವಂತೆ ಅವರು ತಿಳಿಸಿದ್ದಾರೆ.