×
Ad

ಚಿಕ್ಕಬಳ್ಳಾಪುರ: ಕುಂದು ಕೊರೆತೆ, ಪ್ರಗತಿ ಪರಿಶೀಲನಾ ಸಭೆ

Update: 2017-07-29 21:47 IST

ಚಿಕ್ಕಬಳ್ಳಾಪುರ, ಜು.29: ಸಫಾಯಿ ಕರ್ಮಚಾರಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರು ಸುರಕ್ಷತಾ ಪರಿಕರ ಧರಿಸಿ ಕರ್ತವ್ಯ ನಿರ್ವಹಿಸುವಂತೆ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜದೀಶ್ ಹಿರೇಮಣಿ ಸಲಹೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಫಾಯಿ ಕರ್ಮಚಾರಿ ಕಾರ್ಯಕ್ರಮ ಅನುಷ್ಠಾನ ಮತ್ತು ಕುಂದು ಕೊರೆತೆ ಹಾಗೂ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತಾಡಿದ ಅವರು, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಶೇ.90 ರಷ್ಟು ಮಂದಿ ಪೌರಕಾರ್ಮಿಕರು ನಿವೃತ್ತಿಗೆ ಮೊದಲೇ ಅಕಾಲಿಕ ಮರಣಕ್ಕೆ ತುತ್ತಾಗುತ್ತಿದ್ದಾರೆ. ಸ್ವಚ್ಚತೆ ಮಾಡುವಾಗ ಸುರಕ್ಷತಾ ಪರಿಕರಗಳಾದ ಗ್ಲೌಸ್, ಬೂಟ್, ಮಾಸ್ಕ್, ಟೋಪಿ ಮುಂತಾದುವುಗಳನ್ನು ಧರಿಸದೇ ಕೆಲಸ ನಿರ್ವಹಿಸುತ್ತಿರುವುದೇ ಇದಕ್ಕೆ ಕಾರಣ ಎಂದು ಅಭಿಪ್ರಾಯಪಟ್ಟರು.

ಪೌರಕಾರ್ಮಿಕರು ಕಡ್ಡಾಯವಾಗಿ ಪರಿಕರದೊಂದಿಗೆ ಕೆಲಸ ನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದು ಪೌರಕಾರ್ಮಿಕರಿಗೆ ಸೂಚಿಸಿದರು. ಜಿಲ್ಲೆಯ ಸ್ಥಳೀಯ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಪೌರಕಾರ್ಮಿಕರಿಗೆ ವೇತನ ಮತ್ತು ಇಎಸ್‌ಐ ಮತ್ತು ಪಿಎಫ್ ಅನ್ನು ಸಕಾಲಕ್ಕೆ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರಲ್ಲದೇ, ಜಿಲ್ಲೆಯಲ್ಲಿ ಮ್ಯಾನ್ಯುಯಲ್ ಸ್ಕಾವೆಂಜರ್ಸ್‌ ಯಾರು ಇರುವುದಿಲ್ಲ. ಸಕ್ಕಿಂಗ್ ಯಂತ್ರದ ಮೂಲಕ ಶೌಚಾಲಯ ಗುಂಡಿಗಳನ್ನು ಸ್ವಚ್ಛ ಪಡಿಸಲಾಗುತ್ತಿದೆ ಎಂದು ಪೌರಾಯುಕ್ತ ಉಮಾಕಾಂತ್ ಸಭೆಗೆ ತಿಳಿಸಿದರು.

ಚಿಕ್ಕಬಳ್ಳಾಪುರ ನಗರ ವ್ಯಾಪ್ತಿಯಲ್ಲಿ 264 ಇನ್ ಸ್ಯಾನಿಟರಿ ಲೇಟ್ರಿನ್‌ಗಳು ಇದ್ದು ಇದುವರೆಗೂ 56 ಕುಟುಂಬಗಳಿಗೆ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿಯಲ್ಲಿ ಯುಜಿಸಿ ಸಂಪರ್ಕ ಕಲ್ಪಿಸಲಾಗಿದ್ದು, ಉಳಿದ 208 ಇನ್‌ಸ್ಯಾನಿಟರಿ ಲೇಟ್ರಿನ್‌ಗಳಾಗಿ ಪರಿವರ್ತಿಸುವ ಹಂತದಲ್ಲಿದೆ ಎಂದು ಪೌರಾಯುಕ್ತರು ಮಾಹಿತಿ ನೀಡಿದರು. ಪೌರಕಾರ್ಮಿಕರಿಗೆ ಆರೋಗ್ಯದ ಬಗ್ಗೆ ಶಿಬಿರಗಳನ್ನು ಏರ್ಪಡಿಸಿ ಮೊದಲ ಹಂತದ ಹೆಪಟೈಟಸ್-ಬಿ ಲಸಿಕೆಯನ್ನು ತಿಂಗಳಲ್ಲಿ ಒಂದು ದಿನ, ತದನಂತರ ತಿಂಗಳು ಕಳೆದ ಮೇಲೆ 2ನೇ ಹಂತದ ಲಸಿಕೆ ಹಾಗೂ 5ನೆ ತಿಂಗಳು ಕಳೆದ ನಂತರ 3ನೇ ಹಂತದ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರಲ್ಲದೇ, ಜಿಲ್ಲೆಯ ಸ್ಥಳೀಯ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರಿಗೆ ಕಡ್ಡಾಯವಾಗಿ ಬೆಳಗಿನ ಉಪಹಾರವನ್ನು ನೀಡಬೇಕೆಂದರು. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪೌರ ಕಾರ್ಮಿಕರಿಗೆ ಮುಂದಿನ ತಿಂಗಳು ಶಿಕ್ಷಣ ವಸತಿ ಮತ್ತು ಆರೋಗ್ಯದ ಬಗ್ಗೆ ತರಬೇತಿಯನ್ನು ನೀಡಬೇಕೆಂದರಲ್ಲದೇ ಇಲಾಖೆಯಿಂದ ಸಿಗುವ ಸವಲತ್ತುಗಳನ್ನು ಪೌರಕಾರ್ಮಿಕರ ಮಕ್ಕಳಿಗೆ ತಲುಪಿಸುವಂತೆ ಸಮಾಜ ಕಲ್ಯಾಣಾಧಿಕಾರಿಗೆ ಸೂಚಿಸಿದರು.

ಪೌರ ಕಾರ್ಮಿಕರು ಬೆಳಿಗ್ಗೆ ಕೆಲಸ ಮಾಡುವಾಗ ಅಧಿಕಾರಿಗಳು ಸರ್ವೆ ಮಾಡಬೇಕೆಂದರು. ಗುತ್ತಿಗೆಯಾಧಾರದ ಮೇಲೆ ಕೆಲಸ ನಿರ್ವಹಿಸುವವರನು ಖಾಯಂ ಮಾಡುವುದಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಈಗಾಗಲೇ ರಾಜ್ಯ ಸರ್ಕಾರ 11 ಸಾವಿರ ಜನರನ್ನು ಖಾಯಂ ಮಾಡಿದ್ದು, ಉಳಿದವರನ್ನು ಮಾಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಲಾಗುವುದೆಂದರು. ನಂತರ ಸದಸ್ಯ ಜಗದೀಶ್ ಹಿರೇಮಣಿ
 
ನಗರದ ಜಿಲ್ಲಾಸ್ಪತ್ರೆ ಮತ್ತು ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿದರು. ಜಿಲ್ಲಾಧಿಕಾರಿ ದೀಪ್ತಿ ಆದಿತ್ಯ ಕಾನಡೆ, ಎಸ್ಪಿ ಕಾರ್ತಿಕ್‌ರೆಡ್ಡಿ, ಸಮಾಜ ಕಲ್ಯಾಣಾಧಿಕಾರಿ ತೇಜು ಆನಂದ್‌ರೆಡ್ಡಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಡಾ.ಎನ್.ಭಾಸ್ಕರ್ ಹಾಗೂ ಜಿಲ್ಲೆಯ ನಗರಸಭೆ, ಪುರಸಭೆ ಮತ್ತು ಪಪಂ ಪೌರಾಯುಕ್ತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News