ಬಿಜೆಪಿ ಬೆಳೆದಿದ್ದರೆ ಅದು ಜೆಡಿಎಸ್ ಬಿತ್ತಿರುವ ವಿಷ ಬೀಜ: ಮಾಜಿ ಸಚಿವೆ ಮೋಟಮ್ಮ
ಹಾಸನ, ಜು.30: ರಾಜಕೀಯದಲ್ಲಿ ಬಿಜೆಪಿ ಬೆಳೆದಿದೆ ಎಂದರೇ ಅದು ಜೆಡಿಎಸ್ ಪಕ್ಷ ಬಿತ್ತಿರುವ ವಿಷ ಬೀಜ ಎಂದು ಮಾಜಿ ಸಚಿವೆ ಹಾಗೂ ಕೆಪಿಸಿಸಿ ಉಪಾಧ್ಯಕ್ಷೆ ಮೋಟಮ್ಮ ತಿಳಿಸಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಭಾನುವಾರ ಬೆಳಿಗ್ಗೆ ಕರೆಯಲಾಗಿದ್ದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಅಧಿಕಾರ ಅನುಭವಿಸಬೇಕಾದರೆ ಜೆಡಿಎಸ್ ಪಕ್ಷ ಬಿತ್ತಿದ ವಿಷ ಬೀಜ ಎಂದು ಕಿಡಿಕಾರಿದರು.
ಅತಿ ಭ್ರಷ್ಟಚಾರ ಮಾಡಿ ಖನಿಜ ಸಂಪತ್ತನ್ನು ಲೂಟಿ ಮಾಡಿ ಜೈಲು ಸೇರಿದ ಬಿಜೆಪಿ ಪಕ್ಷದಂತೆ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಯಾವ ಕಪ್ಪು ಚುಕ್ಕಿ ಇರುವುದಿಲ್ಲ. ಕಾಂಗ್ರೆಸ್ ಪಕ್ಷವನ್ನು ದೂರಿ ಅಧಿಕಾರ ನಡೆಸಿದರು. ಆದರೇ ಈಗ ಕಾಂಗ್ರೆಸ್ ಮುಕ್ತ ಭಾರತ ಮಾಡಲು ಮುಂದಾಗಿದ್ದಾರೆ. ಅದು ಖಂಡಿತ ಸಾಧ್ಯವಾಗುವುದಿಲ್ಲ. ಬಿಜೆಪಿಯ ಕೂಮುವಾದಿಯ ಪಿತೂರಿಯನ್ನು ತಡೆಗಟ್ಟಲು ಇಂತಹ ಸೌಹಾರ್ಧ ಸಭೆ ಮಾಡಬೇಕಾಗಿದೆ ಎಂದು ಕಿವಿಮಾತು ಹೇಳಿದರು.
ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರವಧಿಯಲ್ಲಿ ರಾಜ್ಯದ ಎಲ್ಲಾ ರೈತರ 50 ಸಾವಿರ ರೂ ಸಾಲಮನ್ನಾ, ಅನ್ನಭಾಗ್ಯ, ಕ್ಷಿರಭಾಗ್ಯ, ಸೇರಿದಂತೆ ನಾನಾ ಭಾಗ್ಯವನ್ನು ನೀಡಿ ಜನ ಮೆಚ್ಚಿಗೆ ಪಡೆದಿದ್ದಾರೆ. ಇಂತಹ ಯೋಜನೆಯನ್ನು ಇದುವರೆಗೂ ಯಾವ ಸರಕಾರ ಕೊಟ್ಟಿದೆ ಎಂದು ಪ್ರಶ್ನೆ ಮಾಡಿದರು. ಇತ್ತಿಚಿಗೆ ಸಾವನಪ್ಪಿದ ಮಾಜಿ ಸಿಎಂ ಧರ್ಮಸಿಂಗ್ ರಾಜಕೀಯದಲ್ಲಿ ಒಬ್ಬ ಅಜಾತ ಶತ್ರು. ಅವರ ಅಧಿಕಾರವಧಿಯಲ್ಲಿ ಯಾವ ಭ್ರಷ್ಟಚಾರದ ಬಗ್ಗೆ ಆರೋಪಗಳಿಲ್ಲ ಎಂದರು. ಪಕ್ಷದ ಕಾರ್ಯಕರ್ತರು ಹಿಂದಿನ ನೋವನ್ನೆ ಇಟ್ಟುಕೊಳ್ಳದೆ ಮುಂದಿನ ಚುನಾವಣೆಗೆ ಕೆಲಸ ಮಾಡಲು ಒಗ್ಗಟ್ಟಾಗಿ ಮುಂದೆ ಬರುವಂತೆ ಕರೆ ನೀಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಯು.ಆರ್. ಸಭಾಪತಿ ಮಾತನಾಡಿ, ಮೋಟಮ್ಮ ಅವರು ಸಚಿವರಾಗಿದ್ದಾಗ ಅವರ ಕಾಲದಲ್ಲಿ ಅನೇಕ ಸ್ತ್ರೀಶಕ್ತಿಗಳು ಉದ್ಭವಗೊಂಡವು. ಜನರಿಂದ ಆಯ್ಕೆಗೊಂಡ ಪ್ರತಿನಿಧಿಗಳು ಅಧಿಕಾರ ಸ್ವೀಕರಿಸಿದ ಮೇಲೆ ತಮ್ಮ ಜವಬ್ಧಾರಿಯುತ ಕೆಲಸ ಮಾಡಲು ಜನರ ಬಳಿ ಹೋಗಬೇಕು. ಇಡೀ ರಾಜ್ಯದಲ್ಲಿ ಜನಸಾಮಾನ್ಯರಿಗೆ ಹಿತಾವಾಗಿರುವ ಕೆಲಸ ಮಾಡುವಂತೆ ಸಿಎಂ ಕರೆ ನೀಡಿದ್ದಾರೆ ಎಂದು ಕಿವಿಮಾತು ಹೇಳಿದರು.
ಇಂದಿರಗಾಂಧಿ ಅಧಿಕಾರವಧಿಯಲ್ಲಿ ಇಡೀ ದೇಶದಲ್ಲಿಯೇ ಕ್ರಾಂತಿ ತಂದರು. ಬಲಿಷ್ಟ ಭಾರತ ಕಟ್ಟುವಲ್ಲಿ ಅವರ ಪಾತ್ರ ಪ್ರಮುಖವಾಗಿದೆ. ನಂತರ ರಾಜಿವ್ ಗಾಂಧಿ ಇತರರು ಬಂದರು. ನಮ್ಮಲ್ಲಿ ಇಂದು ಯುವಕರ ಕೊರತೆ ಹೆಚ್ಚು ಇದ್ದು, ಈ ಬಗ್ಗೆ ಮೊದಲು ನಮ್ಮನ್ನು ನಾವೇ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಯುವಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಗಟ್ಟಿಗೊಳಿಸುವ ಕೆಲಸ ಮಾಡುವಂತೆ ಸಲಹೆ ನೀಡಿದರು. ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಕೆಲಸ ನಾವು ಮಾಡುವುದಿಲ್ಲ. ಜಿಲ್ಲಾ ಮಂತ್ರಿ, ಅಧ್ಯಕ್ಷರು ನಿರ್ವಹಿಸುತ್ತಾರೆ. ರಾಜ್ಯದಲ್ಲಿ ಯಾವುದೇ ನೂತನ ಪ್ರಧಾನ ಕಾರ್ಯದರ್ಶಿ, ಉಪಧ್ಯಕ್ಷರ ಸಭೆ ನಡೆದಿದೆ ಎಂದರೆ ಅದು ಹಾಸನದಿಂದ ಎಂದರು. ಕಾಂಗ್ರೆಸ್ ಪಕ್ಷ ಎಂದರೆ ಒಂದು ಸಮುದ್ರ. ಅದರಲ್ಲಿ ಈಜ ಬಲ್ಲವನು ಸಮರ್ತರು ಆಗಿ ಮುಂದೆ ಹೋಗುತ್ತಿರುತ್ತಾರೆ. ಇದು ಎಲ್ಲಾ ಪಕ್ಷದಲ್ಲೂ ಇರುತ್ತದೆ. ಪಕ್ಷವನ್ನು ಸಂಘಟಿಸಲು ಬ್ಲಾಕ್ ಕಮಿಟಿಗೆ ಭೇಟಿ ನೀಡಿ ಸರಕಾರದ ಸಾಧನೆಯನ್ನು ಮುಟ್ಟಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಶಾರದಮ್ಮ, ಕಮಲಾಕ್ಷಿ ರಾಜಣ್ಣ, ಕೆ.ಎಂ. ನಾಗರಾಜು, ಪಕ್ಷದ ಜಿಲ್ಲಾ ಉಪಾಧ್ಯಕ್ಷ ನಾರಾಯಣಗೌಡ, ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ, ಮುಖಂಡರು ಎಸ್.ಎಂ. ಆನಂದ್, ತಾರಚಂದನ್, ಹೆಮ್ಮಿಗೆ ಮೋಹನ್, ಸಿ.ವಿ. ರಾಜಪ್ಪ, ಲಲಿತಮ್ಮ ಇತರರು ಪಾಲ್ಗೊಂಡಿದ್ದರು.