ಜ್ಯೋತಿಷಿಗಳು ಸಮಾಜದ ದಿಕ್ಕು ತಪ್ಪಿಸುತ್ತಿದ್ದಾರೆ: ಡಾ.ಸಿದ್ದಲಿಂಗಯ್ಯ ಆಕ್ರೋಶ
ಮಂಡ್ಯ, ಜು.30: ಇತ್ತೀಚಿನ ದಿನಗಳಲ್ಲಿ ಎಲ್ಲ ಟಿವಿ ಮಾಧ್ಯಮಗಳಲ್ಲೂ ಜ್ಯೋತಿಷಿಗಳು ಸಮಾಜವನ್ನು ದಿಕ್ಕು ತಪ್ಪಿಸುತ್ತಿದ್ದು, ಇಂತಹ ಮೂಢ ನಂಬಿಕೆಗಳಿಗೆ ಯುವ ಪೀಳಿಗೆ ಕಿವಿಗೊಡಬಾರದು ಎಂದು ಸಾಹಿತಿ ಡಾ.ಸಿದ್ದಲಿಂಗಯ್ಯ ಕರೆ ನೀಡಿದ್ದಾರೆ.
ಮಳವಳ್ಳಿ ಶಾಂತಿ ಕಾಲೇಜಿನ ಶಾಂತಿಭವನದಲ್ಲಿ ಡಾ.ರಾಮಮನೋಹರ ಲೋಹಿಯಾ ವಿಚಾರ ವೇದಿಕೆ ವತಿಯಿಂದ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ರವಿವಾರ ಏರ್ಪಡಿಸಿದ್ದ ಉಚಿತ ಬಸ್‌ಪಾಸ್ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಮನುಷ್ಯನ ಮೇಲೆ ಯಾವುದೇ ದೇವರು ಬರುವುದಿಲ್ಲ. ಯಾರೋಬ್ಬರು ಇದನ್ನು ನಂಬಬೇಡಿ, ಜ್ಯೋತಿಷಿಗಳು ಜನರ ಭಾವನೆಯನ್ನು ಬಂಡವಾಳ ಮಾಡಿಕೊಂಡು ಮೋಸಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಜಾತಕದ ಮೌಢ್ಯತೆಯಿಂದ ಹೆಣ್ಣು ಮಕ್ಕಳ ಭವಿಷ್ಯವೇ ಹಾಳಾಗುತ್ತಿದೆ. ಸಾಮಾನ್ಯರು ಅನ್ಯಾಯ, ಮೋಸಕ್ಕೆ ಒಳಗಾಗುತ್ತಿದ್ದಾರೆ. ಜನರು ವೈಚಾರಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು, ಪ್ರಜ್ಞಾವಂತರು ಇಂತಹ ಮೌಢ್ಯಗಳ ವಿರುದ್ಧ ಹೋರಾಡಬೇಕು ಎಂದು ಅವರು ಸಲಹೆ ಮಾಡಿದರು. ದೇವರನ್ನು ವಿರೋಧಿಸುವುದು ಸರಿಯಲ್ಲ, ದೇವರ ಹೆಸರಿನಲ್ಲಿ ನಡೆಯುವ ಮೌಢ್ಯವನ್ನು ವಿರೋಧಿಸಬೇಕು. ದೇವರ ಹೆಸರಲ್ಲಿ ರಕ್ತಪಾತ ನಡೆಯುತ್ತದೆ. ಆದರೆ, ದೇವರು ಎಂದಿಗೂ ರಕ್ತಪಾತ, ದ್ವೇಷವನ್ನು ಬಯಸುವುದಿಲ್ಲ ಎಂದು ಅಭಿಪ್ರಾಯಪಟ್ಟರು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶಿಕ್ಷಣವಂತರಾಗಿ ದೊಡ್ಡಮಟ್ಟದ ಸಾಧನೆ ಮಾಡಿರುವಂತಹ ನಿದರ್ಶನಗಳಿದೆ. ಯಾಕೆಂದರೆ ಅವರಿಗೆ ಕಷ್ಟದ ಅರಿವು ಗೊತ್ತಿರುತ್ತದೆ. ಸಮಾಜದಲ್ಲಿ ಹೆಣ್ಣು ಮಕ್ಕಳ ಸಾಧನೆಯೇ ದೊಡ್ಡದು. ಬದುಕಿನುದ್ದಕೂ ಅವರ ಪಾತ್ರವನ್ನು ಯಾರು ಮರೆಯಬಾರದು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ಬಡತನ ಶಾಪವಲ್ಲ, ಅದೊಂದು ಸವಾಲು ಎಂದು ಸ್ವೀಕರಿಸಿದಾಗ ಸಾಧನೆ ಸುಲಭ ಸಾಧ್ಯ ಎಂದು ನುಡಿದರು. ಜ್ಞಾನಪೀಠ ಪ್ರಶಸ್ತಿ ಪಡೆದವರು ಬಡತನದಿಂದ ಬಂದು, ಕನ್ನಡ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸಿದರು. ಅವರಲ್ಲಿದ್ದ ಛಲದಿಂದ ಉನ್ನತ ಸ್ಥಾನಕ್ಕೇರಿದರು. ಸಮಾಜದ ಗೌರವಕ್ಕೆ ಪಾತ್ರರಾದರು. ವಿದ್ಯಾರ್ಥಿಗಳಲ್ಲಿ ಮಾತೃ ಭಾಷೆಯ ಬಗ್ಗೆ ಗೌರವ, ಪ್ರೀತಿ, ಅಭಿಮಾನ ಬೆಳೆಯಬೇಕು ಎಂದು ಅವರು ಹೇಳಿದರು.
ಡಾ.ರಾಮಮನೋಹರ ಲೋಹಿಯಾ ವಿಚಾರ ವೇದಿಕೆ ಅಧ್ಯಕ್ಷ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಶಿವಣ್ಣ ಮಾತನಾಡಿ, ಮಳವಳ್ಳಿ ತಾಲೂಕಿನಲ್ಲಿ ಒಂದು ಬೃಹತ್ ಉದ್ಯೋಗ ಮೇಳವನ್ನು ನಡೆಸಲು ನಿರ್ಧರಿಸಲಾಗಿದ್ದು, 10 ಸಾವಿರ ವಿದ್ಯಾರ್ಥಿಗಳಿಗೆ ಉದ್ಯೋಗ ಕೊಡಿಸುವ ಸಂಬಂಧ 200 ಕಂಪೆನಿಗಳೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದರು.
ಶಾಂತಿ ಕಾಲೇಜಿನಲ್ಲಿ 8 ಲಕ್ಷ ರೂ. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಶೀಘ್ರವೇ ಚಾಲನೆ ನೀಡಲಾಗುವುದು. ಈಗಾಗಲೇ ಶೇ.80ರಷ್ಟು ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ತಲಾ 5 ಸಾವಿರ ರೂ. ನೀಡಲಾಗಿದೆ. 2017-18ನೆ ಸಾಲಿನ ಶೈಕ್ಷಣಿಕ ವರ್ಷದ ಎಸೆಸೆಲ್ಸಿ, ಪಿಯುಸಿ ಹಾಗೂ ಪದವಿಯಲ್ಲಿ ಹೆಚ್ಚು ಅಂಕಗಳಿಸಿದ 4,350 ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಬೆಂಗಳೂರು ಕೇಂದ್ರ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಜಾಫೇಟ್, ಮೈಸೂರು ವಿವಿ ಪ್ರಾಧ್ಯಾಪಕ ಪ್ರೊ.ಮುಜಾಪರ್ ಅಸಾದಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಸಿದ್ದರಾಜು, ಇತರ ಗಣ್ಯರು ಉಪಸ್ಥಿತರಿದ್ದರು.