24ನೆ ದಿನಕ್ಕೆ ಕಾಲಿಟ್ಟ ಧರಣಿ: ಸಿಎಂ, ಸಚಿವರ ಪ್ರತಿಕೃತಿ ದಹನ
ಮದ್ದೂರು, ಜು.30: ಕಾವೇರಿ ಕೊಳ್ಳದ ನಾಲೆಗಳಿಗೆ ನೀರುಹರಿಸಲು ಒತ್ತಾಯಿಸಿ ಕಸ್ತೂರಿ ಕರ್ನಾಕಟ ಜನಪರ ವೇದಿಕೆ ನೇತೃತ್ವದಲ್ಲಿ ಸಮೀಪದ ದೇಶಹಳ್ಳಿ ಕೆರೆಯಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ 24ನೆ ದಿನಕ್ಕೆ ಕಾಲಿಟ್ಟಿದ್ದು, ರವಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನೀರಾವರಿ ಸಚಿವ ಎಂ.ಬಿ.ಪಾಟೀಲ್ ಪ್ರತಿಕೃತಿ ದಹನ ಮಾಡಲಾಯಿತು.
ಧರಣಿಗೆ ಬೆಂಬಲ ವ್ಯಕ್ತಪಡಿಸಿದ ವಳಗೆರೆಹಳ್ಳಿ, ದೇಶಹಳ್ಳಿ ಗ್ರಾಮಸ್ಥರು, ತಮಿಳುನಾಡಿಗೆ ನೀರು ನಿಲ್ಲಿಸಿ ನಾಲೆಗೆ ಹರಿಸಲು ಒತ್ತಾಯಿಸಿ ಧರಣಿ ನಡೆಸುತ್ತಿದ್ದರೂ ಸ್ಪಂದಿಸುತ್ತಿಲ್ಲವೆಂದು ಸಿಎಂ, ಮತ್ತು ನೀರಾವರಿ ಸಚಿವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ ಮಾತನಾಡಿ, ನಾಲೆಗಳಿಗೆ ನೀರುಹರಿಸುವ ವಿಚಾರದಲ್ಲಿ ಮುಖ್ಯಮಂತ್ರಿ ಲಘುವಾಗಿ ಮಾತನಾಡಿದ್ದು, ನಾಲೆಗಳಲ್ಲಿ ನೀರುಹರಿಸದಿದ್ದರೆ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಗ್ರಾಪಂ ಸದಸ್ಯರಾದ ದಯಾನಂದ್, ಯೋಗಾನಂದ, ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂರ್, ತಾಲೂಕು ಅಧ್ಯಕ್ಷ ತಿಪ್ಪೂರು ರಾಜೇಶ್, ಗುಂಡ ಮಹೇಶ್, ಸುಧೀರ್, ಹನುಮೇಗೌಡ, ವೀರಪ್ಪ, ಲೋಕೇಶ್, ಇಂದು, ಹರಳಕೆರೆ ಚಂದ್ರು, ಸ್ತ್ರೀಶಕ್ತಿ ಸಂಘದ ಲಕ್ಷ್ಮಮ್ಮ, ಪವಿತ್ರ, ಭವ್ಯ, ಅಂಬುಜಾ, ನಿರ್ಮಲ, ಸುಧಾ, ನಿಂಗಮ್ಮ, ಶಾಂತಮ್ಮ, ಜಯಮ್ಮ, ಇತರರು ಪಾಲ್ಗೊಂಡಿದ್ದರು.