×
Ad

ಕಡಂಗದ ಸಿಟಿ ಬ್ರದರ್ಸ್ ಬಿ ತಂಡಕ್ಕೆ ಪ್ರಶಸ್ತಿ

Update: 2017-07-31 18:16 IST

ಮಡಿಕೇರಿ, ಜು.31: ಜೆ.ಸಿ.ಐ ಪೊನ್ನಂಪೇಟೆ ನಿಸರ್ಗ ಘಟಕದ ಆಶ್ರಯದಲ್ಲಿ ವಿವಿಧ ಪ್ರಾಯೋಜಕರ ನೆರವಿನಲ್ಲಿ ಭಾನುವಾರದಂದು ಬಿಟ್ಟಂಗಾಲದ ನಿವೃತ ಮೇ.ಜ ಕೆ.ಪಿ. ನಂಜಪ್ಪ ಅವರ ಭತ್ತದ ಗದ್ದೆಯಲ್ಲಿ ನಡೆದ 5ನೇ ವರ್ಷದ ರಾಜ್ಯ ಮಟ್ಟದ ನಿಸರ್ಗ ಜೇಸಿ ಕೆಸರು ಗದ್ದೆ ಕ್ರೀಡೋತ್ಸವ -2017ರ ಪುಟ್ಬಾಲ್ ಪಂದ್ಯಾವಳಿಯ ವಿನ್ನರ್ಸ್ ಪ್ರಶಸ್ತಿಯನ್ನು ಕಡಂಗದ ಸಿಟಿ ಬ್ರದರ್ಸ್ ಬಿ ತಂಡ ತನ್ನ ಮುಡಿಗೇರಿಸಿಕೊಂಡು ಸಂಭ್ರಮಿಸಿತು. ಇದರಿಂದ ಪೈನಲ್ಸ್ ಪ್ರವೇಶಿಸಿದ ಕಂಡಂಗಾಲದ ಬಿ.ವೈ.ಸಿ. ತಂಡ ರನ್ನರ್ಸ್ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ದಿನವಿಡೀ ನಡೆದ ಪ್ರಬಲ ಹೋರಾಟದ ಪರಿಣಾಮ ಪೈನಲ್ಸ್ ತಲುಪಿದ ಕಡಂಗದ ಸಿಟಿ ಬ್ರದರ್ಸ್ ಬಿ ತಂಡ ಅಂತಿಮವಾಗಿ ಎದುರಾಳಿ ತಂಡವನ್ನು ಪೆನಾಲ್ಟಿ ಸ್ಟ್ರೋಕ್‌ನಲ್ಲಿ ಮಣಿಸಿ ವಿಜಯದ ಕಿರೀಟವನ್ನು ತನ್ನ ಮುಡಿಗೇರಸಿಕೊಂಡಿತ್ತು.

 ತೀವ್ರ ಸ್ಪರ್ಧೆಯೊಡ್ಡಿ ವಿನ್ನರ್ಸ್ ಪ್ರಶಸ್ತಿಯ ಕನಸಿನೊಂದಿಗೆ ಪೈನಲ್ಸ್‌ಗೆ ಬಂದ ಕಂಡಂಗಾಲದ ಬಿ.ವೈ.ಸಿ. ತಂಡ ವಿಜಯದ ಮಾಲೆಯನ್ನು ತನ್ನ ಕೊರಳಿಗೇರಿಸಲು ಎಷ್ಟೇ ಪ್ರಯತ್ನಿಸಿದರೂ ಫಲ ನೀಡಲಿಲ್ಲ. ಆರಂಭದಿಂದಲೆ ಸಮಬಲದ ಹೋರಾಟ ನಡೆದ ಪೈನಲ್ಸ್ ಪಂದ್ಯದಲ್ಲಿ ನೀರಿನಲ್ಲಿ ಒದ್ದ ಕಾಲ್ಚೆಂಡು ತಮ್ಮ ನಿಯಂತ್ರಣಕ್ಕೆ ತಕ್ಕಂತೆ ಗುರಿ ಮುಟ್ಟದಿದ್ದರೂ ಪ್ರಯತ್ನಗಳನ್ನು ಮಾತ್ರ ಉಭಯ ತಂಡಗಳು ಮುಂದುವರಿಸುತ್ತಲೇ ಇತ್ತು. ಕೊನೆಗೆ ಪೀಲ್ಡ್‌ಗೋಲು ದಾಖಲಾಗದ ಕಾರಣ ಪೆನಾಲ್ಟಿ ಸ್ಟ್ರೋಕ್‌ನಲ್ಲಿ ಪಂದ್ಯದ ವಿಜಯ ನಿರ್ಧರಿಸುವುದು ಅನಿವಾರ್ಯವಾಯಿತು. ಇದಕ್ಕೂ ಮೊದಲು ನಡೆದ ಮೊದಲ ಸೆಮಿಪೈನಲ್ಸ್‌ನಲ್ಲಿ ಕಡಂಗದ ಲಿಮ್ರಾ ಪ್ರೆಂಡ್ಸ್ ತಂಡವನ್ನು ಮಣಿಸಿದ ಕಂಡಂಗಾಲದ ಬಿ.ವೈ.ಸಿ.ತಂಡ ಹಾಗೂ 2ನೇ ಸೆಮಿಪೈನಲ್ಸ್‌ನಲ್ಲಿ ಎಫ್.ಸಿ. ಮಿರಾಕಲ್ ತಂಡವನ್ನು ಮಣಿಸಿದ ಕಡಂಗದ ಸಿಟಿ. ಬ್ರದರ್ಸ್ ಬಿ ತಂಡ ಪೈನಲ್ಸ್‌ಗೆ ಅರ್ಹತೆ ಪಡೆದಿತ್ತು.

ಕೆಸರು ಗದ್ದೆ ಪುಟ್ಬಾಲ್ ಪಂದ್ಯಾವಳಿಯಲ್ಲಿ ಕಡಂಗದ ಸಿಟಿ. ಬ್ರದರ್ಸ್ ಬಿ ತಂಡದ ಸುಹೈಬ್ ಅತ್ಯುತ್ತಮ ಆಟಗಾರನಾಗಿ ಮೂಡಿಬಂದರು. ಕೊಡಗು ಸೇರಿದಂತೆ ವಿವಿದೆಡೆಗಳಿಂದ ಒಟ್ಟು 48 ಪುಟ್ಬಾಲ್ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿತ್ತು.
        
ಕೆಸರು ಗದ್ದೆ ಕ್ರೀಡೋತ್ಸವದ ಆಕರ್ಷಣೆಯಾಗಿ ಮೂಡಿಬಂದ ಪುರುಷರ ಹಗ್ಗಜಗ್ಗಾಟ ಸ್ಪರ್ದೆ ಕೆಸರು ಗದ್ದೆ ಕ್ರೀಡೆಯಲ್ಲಿ ಹೊಸ ಇತಿಹಾಸವನ್ನೇ ಸೃಷ್ಠಿಸಿದಂತಿತ್ತು. ಹಲವಾರು ಸುತ್ತಿನ ತೀವ್ರ ಹೋರಾಟಗಳನ್ನು ನಡೆಸಿ ಪೈನಲ್ಸ್ ಪ್ರವೇಶಿಸಿದ್ದ ಹುಣಸೂರಿನ ಓಂ ಸಾಯಿ ಪ್ರೆಂಡ್ಸ್ ಎ ತಂಡ ಕಳೆದ ವರ್ಷದ ಚಾಂಪಿಯನ್ ಬಲಿಷ್ಠ ಮದೆನಾಡು ಕಾಫಿ ಲಿಂಕ್ಸ್ ತಂಡವನ್ನು ಮಣಿಸುವುದರ ಮೂಲಕ ವಿನ್ನರ್ಸ್ ಪ್ರಶಸ್ತಿ ಪಡೆದುಕೊಂಡು ಚಾಂಪಿಯನ್ ಆಗಿ ಮೂಡಿ ಬಂತು. ಸಾವಿರಾರು ಪ್ರೇಕ್ಷಕರ ಪ್ರೋತ್ಸಾಹದ ನಡುವೆ ಆರಂಭಗೊಂಡ ಹಗ್ಗಜಗ್ಗಾಟ ಪೈನಲ್ಸ್‌ನಲ್ಲಿ ಬಲಿಷ್ಠ ಮತ್ತು ಅನುಭವಿ ಸ್ಪರ್ಧಾಳುಗಳನ್ನು ಒಳಗೊಂಡ ಹುಣಸೂರಿನ ಓಂ ಸಾಯಿ ಪ್ರೆಂಡ್ಸ್ ಎ ತಂಡ ಸೋಲೊಪ್ಪಿಕೊಳ್ಳಲು ಸಿದ್ದವಿರಲಿಲ್ಲ. ಸತತವಾಗಿ 2 ಸುತ್ತಿನಲ್ಲೂ ಎದುರಾಳಿ ತಂಡದ ವಿರುದ್ದ ಪ್ರಾಬಲ್ಯ ಮೆರೆದು ಮೇಲುಗೈ ಸಾಧಿಸಿತ್ತು. ಈ ಪರಿಣಾಮ ಉತ್ತಮ ಪ್ರದರ್ಶನ ನೀಡಿದ ಮದೆನಾಡಿನ ಕಾಫಿ ಲಿಂಕ್ಸ್ ತಂಡ ಹುಣಸೂರಿನ ಓಂ ಸಾಯಿ ಪ್ರೆಂಡ್ಸ್ ಎ ತಂಡದೆದುರು ಶರಣಾಗಬೇಕಾಯಿತು.

ಸಂಜೆ ನಡೆದ ಕ್ರೀಡೋತ್ಸವದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಕ್ಕೆ ಆಕರ್ಷಕ ಟ್ರೋಫಿ ಮತ್ತು ನಗದು ಬಹುಮಾನವನ್ನು ಪ್ರಶಸ್ತಿ ಪತ್ರದೊಂದಿಗೆ ನೀಡಿ ಗೌರವಿಸಲಾಯಿತು. ಜೆ.ಸಿ.ಐ ಪೊನ್ನಂಪೇಟೆ ನಿಸರ್ಗ ಘಟಕದ ಅಧ್ಯಕ್ಷರಾದ ಎ.ಎಸ್. ಟಾಟು ಮೊಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ಜೇಸಿಸ್‌ನ ವಲಯ 14ರ ಅಧ್ಯಕ್ಷರಾದ ಎಸ್. ಸಿದ್ದಲಿಂಗಪ್ಪ ಮತ್ತು ಉಪಾಧ್ಯಕ್ಷರಾದ ಮೈಸೂರಿನ ವಿಕಾಸ್ ಗೂಗ್ಲಿಯಾ ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು.

ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಕೊಡಗು ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಕದ್ದಣಿಯಂಡ ಹರೀಶ್ ಬೋಪಣ್ಣ ವಿಜೇತ ತಂಡಕ್ಕೆ ಬಹುಮಾನ ವಿತರಿಸಿದ ಬಳಿಕ ಮಾತನಾಡಿ, ಸಮಾಜದಲ್ಲಿ ವಿವಿದತೆಯಲ್ಲಿ ಏಕತೆಯನ್ನು ಮೂಡಿಸಲು ಕ್ರೀಡಾಕೂಟಗಳು ಮಹತ್ತರ ಪಾತ್ರ ವಹಿಸುತ್ತದೆ. ಅದರಲ್ಲೂ ವಿಶೇಷವಾಗಿ ಗ್ರಾಮೀಣ ಕ್ರೀಡಾಕೂಟ ಆಧುನಿಕ ತಂತ್ರಜ್ಞಾನಾಧರಿತ ಸಮಾಜದಲ್ಲಿ ಬಿಡುವಿಲ್ಲದೆ ಕಾರ್ಯನಿರ್ವಹಿಸುವ ನಾಕರಿಕರಿಗೆ ಹೊಸ ಅನುಭವವನ್ನು ನೀಡುತ್ತದೆ. ಆದ್ದರಿಂದ ಕ್ರೀಡಾಕೂಟಗಳು ನಿರಂತವಾಗಿ ನಡೆಯುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ತಾ.ಪಂ. ಅಧ್ಯಕ್ಷೆ ಸ್ಮಿತಾ ಪ್ರಕಶ್, ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮದ ಉಪಧ್ಯಕ್ಷರಾದ ಮಾಂಗೇರ ಪದ್ಮಿನಿ ಪೊನ್ನಪ್ಪ, ರುದ್ರಗುಪ್ಪೆ ವಿ.ಎಸ್.ಎಸ್.ಎನ್.ನ ಅಧ್ಯಕ್ಷರಾದ ಕೊಂಗಂಡ ವಾಸು ಮುದ್ದಯ್ಯ, ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷರಾದ ಬಿ.ಎನ್. ಪ್ರಕಾಶ್, ಕೊಡಗು ಪ್ರೆಸ್ ಕ್ಲಬ್‌ನ ಮಾಜಿ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್, ಬಾಡಗದ ಕಾಫಿ ಬೆಳೆಗಾರರಾದ ಕಂಜಿತಂಡ ಗಿಣಿ ಮೊಣ್ಣಪ್ಪ, ಗೋಣಿಕೊಪ್ಪಲು ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷರಾದ ಕೆ.ಟಿ. ಟಿಪ್ಪು ಬಿದ್ದಪ್ಪ, ಉಧ್ಯಮಿ ಕರ್ತಮಾಡ ದಿಲೀಪ್ ಪೂಣಚ್ಚ, ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಎಸ್.ಎಸ್. ಸುರೇಶ್, ಪ್ರಾಯೋಜಕರಾದ ಚೊಟ್ಟೆಮಂಡ ಗಾಜು ದೇವಯ್ಯ ಮೊದಲಾದವರು ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು.
 
  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News