ವಿವಿಧ ಸೌಲಭ್ಯ ಕಲ್ಪಿಸಲು ಒತ್ತಾಯಿಸಿ ಕ.ರ.ವೇ.ಪ್ರತಿಭಟನೆ
ದಾವಣಗೆರೆ, ಜು.31: ವಿವಿಧ ಸೌಲಭ್ಯ ಕಲ್ಪಿಸಲು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರು ಸೋಮವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ನಿಟುವಳ್ಳಿಯ ಎಚ್‌ಕೆಆರ್ ವೃತ್ತದ ಬಳಿಯಿಂದ ಕರವೇ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಪ್ರತಿಭಟನಾನಿರತ ಕಟ್ಟಡ ಕಾರ್ಮಿಕರು ಎಸಿ ಕಚೇರಿಗೆ ತೆರಳಿ, ಮನವಿ ಅರ್ಪಿಸಿದರು.
ಈ ಸಂದರ್ಭ ಮಾತನಾಡಿದ ಕರವೇ ಮುಖಂಡರು, ಕಟ್ಟಡ ಅಸಂಘಟಿತ ಕಾರ್ಮಿಕರಿಗೆ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಈಗ ಬರುತ್ತಿರುವ ಸೌಲಭ್ಯದ ಹಣದ ಸಹಾಯ ಸರಿಯಾಗಿ ನೀಡುತ್ತಿಲ್ಲ. ಬೆಲೆ ಏರಿಕೆ, ಕೆಲಸಗಳೂ ಕೂಲಿ ಕೆಲಸಗಳು ಕಡಿಮೆ ಇರುವುದರಿಂದ ಜೀವನ ಸಾಗಿಸುವುದು ಬಡ ಕಾರ್ಮಿಕರಿಗೆ ದುಸ್ತರವಾಗುತ್ತಿದೆ ಎಂದ ಅವರು, ಎಂಜಿನಿಯರ್‌ಗಳು ಎಂ ಸ್ಯಾಂಡ್ ಕಟ್ಟಡ ಕಟ್ಟಲು ಯೋಗ್ಯವೆಂಬ ವರದಿ ನೀಡಿದ್ದಾರೆ. ಆದರೆ, ವೈದ್ಯರು ಎಂ ಸ್ಯಾಂಡ್‌ನಿಂದ ಕಾಯಿಲೆ, ದೈಹಿಕ ಸಮಸ್ಯೆ ಬರುತ್ತವೋ, ಇಲ್ಲವೋ ಎಂಬುದನ್ನೂ ದೃಢಪಡಿಸಿಲ್ಲ. ಪರಿಣಾಮ ಕಟ್ಟಡ ಕಾರ್ಮಿಕರು ಆಸ್ಪತ್ರೆಗೆ ಅಲೆಯುವುದೂ ತಪ್ಪಿಲ್ಲ. ತಕ್ಷಣವೇ ಕಟ್ಟಡ ಕಾರ್ಮಿಕರಿಗೂ ಇಎಸ್‌ಐ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದ ಅವರು, ಕಾರ್ಮಿಕರ ಸಹಜ ಸಾವಿಗೆ 54 ಸಾವಿರ ನೀಡುತ್ತಿದ್ದು, ಇದನ್ನು 3 ಲಕ್ಷ ರು.ಗೆ ಹೆಚ್ಚಿಸಬೇಕು. ಕಾರ್ಮಿಕರು ಅಪ ಾತದಲ್ಲಿ ಸಾವನ್ನಪ್ಪಿದರೆ, 3 ಲಕ್ಷ ಬದಲು, 5 ಲಕ್ಷ ರು. ಪರಿಹಾರ ನೀಡಬೇಕು. ಕಾರ್ಮಿಕರ ಮಕ್ಕಳಿಗೆ 5ರಿಂದ 6-7ನೇ ತರಗತಿವರೆಗೆ 6 ಸಾವಿರ ರು.ಗೆ ವಾರ್ಷಿಕ ಶುಲ್ಕ ಹೆಚ್ಚಿಸಬೇಕು. ಹೈಸ್ಕೂಲ್ ಮಕ್ಕಳಿಗೆ 10 ಸಾವಿರ ನೀಡಬೇಕು ಎಂದು ಅವರು ಆಗ್ರಹಿಸಿದರು.
ಪ್ರಥಮ, ದ್ವಿತೀಯ ಪಿಯುಸಿ ಓದಿದ ನಂತರ ನೀಡುವ ಹಣ ಓದುವಾಗಲೇ ನೀಡಬೇಕು. ಬಿಎ, ಬಿಕಾಂ, ಬಿಎಸ್ಸಿ ವ್ಯಾಸಂಗ ಮಾಡುವವರಿಗೆ 5 ಸಾವಿರ ಬದಲು 10 ಸಾವಿರ ರು. ನೀಡಬೇಕು. ನಿವೃತ್ತ ಕಟ್ಟಡ ಕಾರ್ಮಿಕರಿಗೆ ಪ್ರತಿ ತಿಂಗಳು 1 ಸಾವಿರದ ಬದಲಿಗೆ 5 ಸಾವಿರರು. ಪಿಂಚಣಿ ನೀಡಬೇಕು. ಕಟ್ಟಡ ಕಾರ್ಮಿಕರು, ಮತ್ತವರ ಮಕ್ಕಳ ಮದುವೆಗೆ 50 ಸಾವಿರ ರು. 2 ಲಕ್ಷ ರು.ಗೆ ಹೆಚ್ಚಿಸುವಂತೆ ಅವರು ಮನವಿ ಮಾಡಿದರು.
ಕಟ್ಡ ಕಾರ್ಮಿಕರ ಪೈಕಿ ನೂರಾರು ಕುಟುಂಬಗಳಿಗೆ ಸ್ವಂತ ಸೂರು ಇಲ್ಲ. ಅಂತಹವರಿಗೆ ಸರ್ಕಾರದ ವಸತಿ ಯೋಜನೆಯಡಿ ಮನೆ ಕಲ್ಪಿಸಬೇಕು. ಈ ಎಲ್ಲಾ ಬೇಡಿಕೆಗಳನ್ನು ಪ್ರಥಮಾದ್ಯತೆಯ ಮೇಲೆ ಈಡೇರಿಸುವಂತೆ ಒತ್ತಾಯಿಸಿ ಕರವೇ ಜಿಲ್ಲಾ ಘಟಕದ ನೇತೃತ್ವದಲ್ಲಿ ಉಪ ವಿಭಾಗಾಧಿ
ಕಾರಿ ಕಚೇರಿ ಮುಖಾಂತರ ಸರ್ಕಾರಕ್ಕೆ ಮನವಿ ಅರ್ಪಿಸಲಾಯಿತು.
ಪ್ರತಿಭಟನೆಯಲ್ಲಿ ವೇದಿಕೆ ಮುಖಂಡರಾದ ಶಿವಕುಮಾರ ಪಿ.ಸುಂಕಾಪುರ, ಮಹಿಳಾ ಘಟಕದ ಅಧ್ಯಕ್ಷೆ ಉಮಾ ತೋಟಪ್ಪ, ಕಾನೂನು ಘಟಕದ ಅಧ್ಯಕ್ಷೆ ಜೆ.ಸಿ. ವಸುಂಧರಾ, ನಾಗರಾಜ ಆದಾಪುರ, ತಂಗರಾಜ, ಮನ್ಸೂರ್, ಎ. ಮುತ್ತುರಾಜ, ನೂರುಲ್ಲಾ, ಪರಶುರಾಮ, ಕರಾಟೆ ರಾಮು, ಎನ್. ಪರಮೇಶ್ವರ, ಕೆ.ಕೆ. ಕರಿಬಸವರಾಜ, ಉದಯಕುಮಾರ, ಎಸ್.ಬಿ. ಅಮ್ಜದ್ ಇದ್ದರು.