×
Ad

ನೀರಿಗೆ ಆಗ್ರಹಿಸಿ ಬೆಸಗರಹಳ್ಳಿ ಬಂದ್ ಯಶಸ್ವಿ

Update: 2017-07-31 19:51 IST

ಮದ್ದೂರು, ಜು.31: ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರುನಿಲ್ಲಿಸಿ, ನಾಲೆಗಳಿಗೆ ಹರಿಸುವಂತೆ ಒತ್ತಾಯಿಸಿ ಸೋಮವಾರ ಕರೆನೀಡಿದ್ದ ಬೆಸಗರಹಳ್ಳಿ ಬಂದ್ ಯಶಸ್ವಿಯಾಯಿತು.

ಕರವೇ, ಜಯಕರ್ನಾಟಕ, ರೈತಸಂಘ, ವರ್ತಕರ ಸಂಘ, ಜೆಡಿಎಸ್, ಇತರ ಸಂಘಟನೆಗಳು ಕರೆ ನೀಡಿದ್ದ ಬಂದ್‌ಗೆ ವರ್ತಕರು ಎಲ್ಲ ಬಗೆಯ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಬೆಂಬಲ ನೀಡಿದರು.

ಸಂಜೆವರೆಗೂ ವ್ಯಾಪಾರವಹಿವಾಟು ಸಂಪೂರ್ಣ ಸ್ಥಗಿತಗೊಂಡಿದ್ದರೆ, ಚಿತ್ರಮಂದಿರ, ಶಾಲಾ ಕಾಲೇಜು, ಬ್ಯಾಂಕ್, ಸರಕಾರಿ ಕಚೇರಿಗಳೂ ಮುಚ್ಚಲ್ಪಟ್ಟಿದ್ದವು. ಆಸ್ಪತ್ರೆ, ಔಷಧಿ ಮಳಿಗೆಗಳು ಎಂದಿನಂತೆ ತೆರೆದಿದ್ದವು.

ಪ್ರತಿಭಟನೆ: ಬಂದ್ ಹಿನ್ನೆಲೆಯಲ್ಲಿ ಸಂಘಟನೆಗಳ ಕಾರ್ಯಕರ್ತರು, ಎತ್ತಿನ ಗಾಡಿ, ಜಾನುವಾರುಗಳ ಸಮೇತ ಬಸ್‌ ನಿಲ್ದಾಣದಲ್ಲಿ ರಸ್ತೆತಡೆ ನಡೆಸಿ ರಾಜ್ಯ ಮತ್ತು ಕೇಂದ್ರ ಸರಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ಕೂಡಲೇ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಂಡು ಕೆರೆಕಟ್ಟೆಗಳನ್ನು ತುಂಬಿಸುವ ಮೂಲಕ ಜನ ಜಾನುವಾರುಗಳ ರಕ್ಷಣೆ ಮಾಡಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ವರ್ತಕರಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷ ಕೆರೆಮೇಗಲದೊಡ್ಡಿ ಶೇಖರ್, ಜಯಕರ್ನಾಟಕ ಸಂಘಟನೆಯ ಮುಹಮ್ಮದ್ ಇಲಿಯಾಜ್,ರೈತಸಂಘದ ಯಧುಶೈಲ ಸಂಪತ್, ನಾಗರಾಜು,ಹೇಮಂತ್, ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News