×
Ad

ಬಿಜೆಪಿ ಮುಖಂಡರನ್ನು ಬಂಧಿಸಿ, ಬಿಡುಗಡೆ ಮಾಡಿದ ಪೊಲೀಸರು

Update: 2017-07-31 19:58 IST

ತುಮಕೂರು, ಜು.31: ಹೇಮಾವತಿ ನಾಲೆಯಿಂದ ಕೂಡಲೇ ಕುಡಿಯಲು ಕೆರೆಗಳಿಗೆ ನೀರು ಬಿಡಬೇಕು ಎಂದು ಒತ್ತಾಯಿಸಿ ಸಾವಿರಾರು ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ವೇಳೆ ಪ್ರತಿಭಟನಾಕಾರರನ್ನು ಬಂಧಿಸಿ, ನಂತರ ಬಿಡುಗಡೆ ಮಾಡಿದರು.

ಪೊಲೀಸರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನಿರ್ಮಿಸಿದ್ದ ಮೂರು ಸುತ್ತಿನ ಬ್ಯಾರಾಕೇಟ್ ದಾಟಿ ಜಿಲ್ಲಾಧಿಕಾರಿಗಳ ಕಚೇರಿಗೆ ನುಗ್ಗಲು ಯತ್ನ ನಡೆಸಿದಾಗ ಶಾಸಕ ಬಿ.ಸುರೇಶ್‌ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಜಿ.ಬಿ.ಜ್ಯೋತಿಗಣೇಶ್,ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಎಸ್.ಶಿವಪ್ರಸಾದ್,ಬ್ಯಾಟರಂಗೇಗೌಡ ಸೇರಿದಂತೆ ನೂರಾರು ಕಾರ್ಯಕರ್ತರನ್ನು ಬಂಧಿಸಿ, ಕೆಲ ಕಾಲ ಚಿಲುಮೆ ಸಮುದಾಯಭವನದಲ್ಲಿರಿಸಿ, ನಂತರ ಬಿಡುಗಡೆ ಮಾಡಿದರು.

ಜಿಲ್ಲೆಗೆ ಕುಡಿಯುವ ನೀರು ಹರಿಸಬೇಕು ಎಂದು ಒತ್ತಾಯಿಸಿ ಭಾನುವಾರ ಜಿಲ್ಲೆಯ ಕುಣಿಗಲ್ ಮತ್ತು ಕಿಬ್ಬನಹಳ್ಳಿ ಭಾಗದಿಂದ ಹೊರಟಿದ್ದ ಪಾದಯಾತ್ರೆ ಸೋಮವಾರ ಮಧ್ಯಾಹ್ನ 12 ಗಂಟೆಗೆ ತುಮಕೂರು ನಗರಕ್ಕೆ ಆಗಮಿಸಿ, ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ನೂರಾರು ಸಂಖ್ಯೆಯಲ್ಲಿದ್ದ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದರು. 

ಜಿಲ್ಲಾ ಬಿಜೆಪಿ ಅಧ್ಯಕ್ಷ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಜಿಲ್ಲೆಯಲ್ಲಿ ಬರದ ವಾತಾವರಣವಿದೆ. ಈ ವರ್ಷವೂ ಮುಂಗಾರು ಕೈಕೊಟ್ಟ ಪರಿಣಾಮ ಕುಡಿಯುವ ನೀರಿಗೂ ಜನತೆ ಪರದಾಡುವಂತಹ ಸ್ಥಿತಿ ಇದೆ. ಸರಕಾರ ಡ್ಯಾಂಗಳಲ್ಲಿ ಸಾಕಷ್ಟು ನೀರಿದ್ದರೂ ಕುಡಿಯಲು ನೀರು ಕೈಕೊಟ್ಟಿಲ್ಲ. ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದೆ. ಈ ಕೂಡಲೇ ನೀರು ಬಿಡಬೇಕು. ಇಲ್ಲದಿದ್ದರೆ ಮುಂದಿನ ದಿನದಲ್ಲಿ ತೀವ್ರ ಸ್ವರೂಪದ ಹೋರಾಟ ಮಾಡಬೇಕಾಗುತ್ತದೆ ಎಂದಿ ಎಚ್ಚರಿಸಿದರು.

ಶಾಸಕ ಬಿ.ಸುರೇಶ್‌ಗೌಡ ಮಾತನಾಡಿ, ರಾಜ್ಯದಲ್ಲಿ ಸತ್ತ ಸರಕಾರ  ಅಧಿಕಾರದಲ್ಲಿದೆ.ಕುಡಿಯಲು ನೀರು ಕೊಡಿ ಎಂದು ನಾವು ಹೋರಾಟ ಮಾಡುತ್ತಿದ್ದರೆ ಪೊಲೀಸರನ್ನು ಬಿಟ್ಟು ನಮ್ಮನ್ನು ಹೆದರಿಸುವ ಕೆಲಸವನ್ನು ಈ ಕಾಂಗ್ರೆಸ್ ಸರಕಾರ ಮಾಡುತ್ತಿದೆ. ನಾವು ರೈತರು ನಿಮ್ಮ ಗೊಡ್ಡು ಬೆದರಿಕೆಗಳಿಗೆ ಹೆದರುವುದಿಲ್ಲ ಎಂದು ಗುಡುಗಿದರು.

ಈ ಸಂಬಂಧ ಮನವಿಯನ್ನು ಅಪರ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರುಗಳಾದ ಬ್ಯಾಟ ರಂಗೇಗೌಡ, ಹೆಬ್ಬಾಕ ರವಿಶಂಕರ್, ರುದ್ರೇಶ್, ಮಸಾಲೆ ಜಯರಾಂ ಲಕ್ಷ್ಮೀಕಾಂತ್, ಸೇರಿದಂತೆ ಸಾವಿರಾರು ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.

ಬಿಗಿ ಭದ್ರತೆ :ಬಿಜೆಪಿ ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಮುತ್ತಿಗೆ ಹಾಕುತ್ತಾರೆ ಎನ್ನುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಬಿಗಿ ಭದ್ರತೆ ಒದಗಿಸಲಾಗಿತ್ತು. ಅಲ್ಲದೆ ಜಿಲ್ಲೆಯ ವಿವಿದ ಕಡೆ ಪೊಲೀಸ್ ಭದ್ರತೆ ಇತ್ತು. ಎಲ್ಲಿಯೂ ಯಾವುದೇ ತೊಂದರೆಯಾಗದಂತೆ ಪೊಲೀಸರು ನಿಗಾವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News