×
Ad

ಮದ್ದೂರು ತಾಪಂ ಸಾಮಾನ್ಯ ಸಭೆ: ಅಗತ್ಯವಿರುವೆಡೆ ವೈದ್ಯರ ನಿಯೋಜನೆಗೆ ಸೂಚನೆ

Update: 2017-07-31 20:22 IST

ಮದ್ದೂರು, ಜು.31: ತಾಲೂಕಿನ ಭಾರತಿನಗರ, ಬೆಸಗರಹಳ್ಳಿ, ಕೊಪ್ಪ ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಗತ್ಯವಿರುವ ವೈದ್ಯರ ನಿಯೋಜಿಸಲು ಸೋಮವಾರ ನಡೆದ ತಾಪಂ ಸಾಮಾನ್ಯಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಲಾಯಿತು.

ಅಧ್ಯಕ್ಷೆ ಜಯಲಕ್ಷ್ಮಮ್ಮ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸದಸ್ಯರು, ತಾಲೂಕಿನಲ್ಲಿ ಡೆಂಗ್, ಚಿಕುನ್ ಗುನ್ಯ, ಮಲೇರಿಯಾ ರೋಗಗಳು ಹರಡುತ್ತಿದ್ದು, ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲವೆಂದು ಕಳವಳ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಉಪಾಧ್ಯಕ್ಷ ಬಿ.ಎಂ.ರಘು, ಸರಕಾರದಿಂದ ಮಂಜೂರಾಗುವ ವೈದ್ಯ ಹುದ್ದೆಗಳ ಪೈಕಿ ಅಗತ್ಯವಿರುವೆಡೆಗೆ ನಿಯೋಜಿಸುವಂತೆ ತಾಲೂಕು ಆರೋಗ್ಯಾಧಿಕಾರಿ ಶಿವಾನಂದ ಅವರಿಗೆ ತಾಕೀತು ಮಾಡಿದರು.

ಜುಲೈ ತಿಂಗಳಲ್ಲಿ ತಾಲೂಕಿನ ವಿವಿಧೆಡೆ 70 ಡೆಂಗ್, 12 ಚಿಕುನ್‌ಗುನ್ಯ, 33 ಕ್ಷಯರೋಗ ಪ್ರಕರಣಗಳು ಪತ್ತೆಯಾಗಿದ್ದು, ಡೆಂಗ್ ಪೀಡಿತ 29 ಮತ್ತು 9 ಚಿಕುನ್‌ಗುನ್ಯ ಪೀಡಿತರು ಗುಣಮುಖರಾಗಿದ್ದಾರೆ ಎಂದು ಆರೋಗ್ಯಾಧಿಕಾರಿ ಶಿವಾನಂದ ಮಾಹಿತಿ ನೀಡಿದರು. ತಾಲೂಕಿನ ವಿವಿಧೆಡೆ ಮೇಲಿನ ವ್ಯಾದಿಗಳ ನಿಯಂತ್ರಣಕ್ಕೆ ಇಲಾಖೆ ಸ್ಥಳೀಯ ಪುರಸಭೆ, ಗ್ರಾಪಂ ಸಹಯೋಗದಲ್ಲಿ ಸಾರ್ವಜನಿಕ ಜಾಗೃತಿ ಹಾಗೂ ಅಗತ್ಯ ಔಷಧೋಪಚಾರಗಳ ಮೂಲಕ ಕ್ರಮವಹಿಸಿರುವುದಾಗಿ ಅವರು ಹೇಳಿದರು.

 ಬಿಇಓ ರೇಣುಕಮ್ಮ ಮಾತನಾಡಿ, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ತಾಲೂಕಿನಾದ್ಯಂತ ಒಟ್ಟು 15,869 ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್ ನೀಡುವ ಗುರಿ ಹೊಂದಲಾಗಿದ್ದು, ಈವರೆವಿಗೆ 14,731 ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ. 13,124 ವಿದ್ಯಾರ್ಥಿಗಳಿಗೆ ಈಗಾಗಲೇ ಸಮವಸ್ತ್ರ ನೀಡಲಾಗಿದೆ ಎಂದರು.
ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಕೆಲವು ರೋಗಿಗಳ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆಂಬ ದೂರುಗಳಿದ್ದು, ಸರಿಯಾಗಿ ಸೇವೆ ಮಾಡುವಂತೆ ಅಧ್ಯಕ್ಷೆ ಜಯಲಕ್ಷ್ಮಮ್ಮ ಸೂಚನೆ ನೀಡಿದರು.

ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಶಶಿಕಲಾ ಅವರನ್ನು ಸಭೆ ವೇಳೆ ಕೆಲ ಸದಸ್ಯರು ಅವ್ಯವಸ್ಥೆ ಕುರಿತಾಗಿ ಪಕ್ಷಾತೀತವಾಗಿ ತರಾಟೆಗೆ ತೆಗೆದುಕೊಂಡರು. ಲೋಪ ಸರಿಪಡಿಸಿಕೊಳ್ಳದಿದ್ದರೆ ಕ್ರಮಕ್ಕೆ ಶಿಫಾರಸ್ತು ಮಾಡುವುದಾಗಿ ಅಧ್ಯಕ್ಷರು ಎಚ್ಚರಿಸಿದರು.
ನಿವೃತ್ತರಾದ ಜಿಪಂ ಎಂಜಿನಿಯರಿಂಗ್ ವಿಭಾಗದ ಗ್ರಾಮೀಣ ನೀರು ಪೂರೈಕೆ ಎಇಇ ಕೆಂಪೇಗೌಡ ಮತ್ತು ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಚೌಡಯ್ಯ ಅವರನ್ನು ಸಭೆ ವೇಳೆ ಅಭಿನಂದಿಸಿ ಗೌರವಿಸಲಾಯಿತು.

ಸಭೆ ವೇಳೆ ಕೃಷಿ, ಪಶುಸಂಗೋಪನೆ, ತೋಟಗಾರಿಕೆ, ಮೀನುಗಾರಿಕೆ, ರೇಷ್ಮೆ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ತಾಲೂಕುಮಟ್ಟದ ಅಧಿಕಾರಿಗಳು ಇಲಾಖಾವಾರು ಪ್ರಗತಿ ವರದಿಯನ್ನು ಮಂಡಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷರಾದ ಆಶಾ ಗೋಪಿ, ತೊಯಜಾಕ್ಷ, ವೆಂಕಟೇಶ್, ಸತೀಶ್, ಶಾಂತ ಕುಚೇಲ, ಲೀಲಾವತಿ, ಮಹದೇವಮ್ಮ, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News