ಚಿಕ್ಕಬಳ್ಳಾಪುರ: ಉಚಿತ ಹೃದಯ ರೋಗ ತಪಾಸಣೆ ಶಿಬಿರಕ್ಕೆ ಚಾಲನೆ
ಚಿಕ್ಕಬಳ್ಳಾಪುರ, ಜು.31: ಪ್ರಸ್ತುತ ದಿನಗಳಲ್ಲಿನ ಅನಾರೋಗ್ಯಕರ ಆಹಾರ ಮತ್ತು ಜೀವನ ಶೈಲಿಯಿಂದಾಗಿ ರಕ್ತದೊತ್ತಡ, ಹೃದಯ ರೋಗ ಮತ್ತು ಮಧುಮೇಹ ರೋಗಗಳಿಗೆ ಯುವಜನತೆ ಬಲಿಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಜಿಪಂ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಉರ್ದು ಶಾಲೆಯಲ್ಲಿ ಬೆಂಗಳೂರು ಸ್ಪೆಷಲಿಸ್ಟ್ ಆಸ್ಪತ್ರೆ ಮತ್ತು ಯೂನಿಟಿ ಸಿಲ್‌ಸಿಲಾ ಫೌಂಡೇಷನ್ ಸಹಯೋಗದಿಂದ ಉಚಿತ ಹೃದಯ ರೋಗ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೈಹಿಕ ಪರಿಶ್ರಮವಿಲ್ಲದ ವೃತ್ತಿ ಸೇರಿದಂತೆ ಐಷಾರಾಮಿ ಜೀವನದಿಂದಾಗಿ ಕಾಯಿಲೆಗಳನ್ನು ಆಹ್ವಾನ ನೀಡುತ್ತಿದ್ದು, ಇಂತಹ ಕಾಯಿಲೆಗಳು ಬಾರದಂತೆ ಸಾರ್ವಜನಿಕರು ಜಾಗರೂಕತೆ ವಹಿಸಿಕೊಳ್ಳಬೇಕುಎಂದು ತಿಳಿಸಿದರು.
ಕಾಯಿಲೆಗಳ ಕುರಿತುಜನರಲ್ಲಿ ಮಾಹಿತಿಯ ಕೊರತೆ, ಆರೋಗ್ಯದ ಬಗ್ಗೆ ನಿರ್ಲಕ್ಷ್ಯ,ಸಮಸ್ಯೆ ಗಂಭೀರ ಹಂತ ತಲುಪುವವರೆಗೂ ಚಿಕಿತ್ಸೆ ಪಡೆಯದಿರುವುದು, ಕಾಯಿಲೆಗಳ ಸಮ್ಯೆ ಉಲ್ಬಣಿಸಲು ಮುಖ್ಯ ಕಾರಣವಾಗಿದೆ ಎಂದ ಅವರು, ಬಡ ಜನರ ಆರೋಗ್ಯದ ದೃಷ್ಟಿಯಿಂದ ಸರ್ಕಾರ ನಾನಾ ರೀತಿಯ ಯೋಜನೆಗಳನ್ನು ಜಾರಿಗೆ ತಂದಿದ್ದು, ಯೋಜನೆಗಳ ಜೊತೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರದಂತಹ ಕಾರ್ಯಕ್ರಮಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಪೌಷ್ಟಿಕ ಆಹಾರ, ಶುದ್ಧ ನೀರು, ಹಣ್ಣು, ತರಕಾರಿ ಮತ್ತು ಮೀನಿನ ಮಾಂಸ ಸೇವನೆಯಿಂದ ಹೃದಯ ಆರೋಗ್ಯವಾಗಿರುತ್ತದೆ. ವ್ಯಾಯಾಮ, ಯೋಗ, ದೈಹಿಕ ಕಸರತ್ತು, ವೇಗದ ನಡಿಗೆ, ಸೈಕಲ್ ಸವಾರಿ, ರಕ್ತದ ಒತ್ತಡ ಮತ್ತು ಕೊಬ್ಬಿನಾಂಶ ನಿರ್ವಹಣೆ, ಸಕ್ಕರೆ ಕಾಯಿಲೆ ಹಾಗೂ ಬೊಜ್ಜು ರಹಿತ ದೇಹ ಕಾಪಾಡಿಕೊಳ್ಳುವ ಸರಳ ಸೂತ್ರಗಳ ಪಾಲನೆಯಿಂದ ಆರೋಗ್ಯದಾಯಕ ಜೀವನ ನಡೆಸಬಹುದು. ಧೂಮಪಾನ, ಮಧ್ಯಪಾನ ಮಾಡುವ ವ್ಯಕ್ತಿಗಳು ಕಡಿವಾಣ ಹಾಕಿದರೆ ದೆೀಹ ಚೈತನ್ಯದಾಯಕವಾಗಿರುತ್ತದೆ ಎಂದು ತಿಳಿಸಿದರು.
ಶಿಬಿರದಲ್ಲಿ 400 ಜನರು ಹೃದಯ ರೋಗ ತಪಾಸಣೆಯ ಪ್ರಯೋಜನ ಪಡೆದರು. ಕಾರ್ಯಕ್ರಮದಲ್ಲಿ ನಗರ ಸಭೆ ಸದಸ್ಯ ಮಂಜುನಾಥ್, ಯುವ ಕಾಂಗ್ರೆಸ್ ಮುಖಂಡ ಜಾಫರ್, ಬೆಂಗಳೂರು ಸ್ಪೆಷಲಿಸ್ಟ್ ಆಸ್ಪತ್ರೆ ವೈದ್ಯರಾದ ಡಾ.ಸ್ಟಾಲಿನ್, ಡಾ.ರೂಪ ಮತ್ತಿತರರು ಇದ್ದರು.