ಆತ ಕೊಟ್ಟಿದ್ದ ಸೀರೆ ಉಟ್ಟ ನನ್ನ ಪತ್ನಿ ಬಿಳಿ ಕೂದಲು, ಬೊಚ್ಚುಬಾಯಿಯಿಂದ ಸುಂದರವಾಗಿ ಕಾಣುತ್ತಿದ್ದಳು: ಬೊಡೋರ್ ಉದ್ದೀನ್

Update: 2017-08-01 08:32 GMT

ಒಳ್ಳೆಯ ಮನುಷ್ಯರನ್ನು ಇಷ್ಟೊಂದು ಬೇಗೆ ಏಕೆ ಕರೆದುಕೊಂಡು ಹೋಗುತ್ತಿ ಎಂದು ನಾನು ಆಗಾಗ ದೇವರನ್ನು ಕೇಳುತ್ತೇನೆ. ನನಗೆ ನಿಜವಾಗಿಯೂ ಇದು ಗೊತ್ತಾಗಬೇಕು. ಆ ಯುವಕನ ವಯಸ್ಸು ಹೆಚ್ಚೆಂದರೆ 35 ಆಗಿತ್ತು. ಆತನಿಗೆ ತನ್ನದೇ ಆದ ಬಟ್ಟೆಯ ಮಳಿಗೆಯಿತ್ತು, ಇಬ್ಬರು ಸಹಾಯಕರಿದ್ದರು.

ನನಗೆ ಕಡಲೆ ಮಾರಾಟ ಮಾಡಲು ಇದ್ದಾಗಲೆಲ್ಲಾ ನಾನು ಆತನ ಅಂಗಡಿಯ ಪಕ್ಕದಿಂದ ಹಾದು ಹೋಗುತ್ತೇನೆ. ನನಗೆ ನಡೆದಾಡಲು ಕಷ್ಟವಾಗುತ್ತಿದ್ದುದರಿಂದ ನಾನು  ಆತನ ಅಂಗಡಿಯ ಎದುರು ನಿಂತು ಕಡಲೆ ಮಾರುತ್ತಿದ್ದೆ.

ಆತ ಒಂದು ದಿನ ಹಸಿರು ಬಣ್ಣದ ಕೆಂಪು ಅಂಚಿನ ಸೀರೆಯನ್ನು ಅಂಗಡಿಯಲ್ಲಿ ಪ್ರದರ್ಶಿಸಿದ್ದನ್ನು ನೋಡಿದ್ದೆ. ನನ್ನ ಪತ್ನಿಗೆ ನಮ್ಮ ಮದುವೆಗೆ ನೀಡಿದ ಸೀರೆಯಂತೆಯೇ ಅದಿತ್ತು. ಒಂದು ದಿನ ಅಂಗಡಿಗೆ ಹೋಗಿ ಸೀರೆಯ ಬಣ್ಣವನ್ನು ದೃಢೀಕರಿಸಿದೆ.  ಯಾರಾದರೂ ನೋಡುವ ಮುನ್ನವೇ ಹಿಂದಕ್ಕೆ ಬಂದೆ. ಒಂದು ವಾರದ ತನಕ ಹೀಗೆಯೇ ಮಾಡಿದೆ.

ಒಂದು ವಾರದ ನಂತರ ಅಂಗಡಿಗೆ ಹೋದಾಗ ಆ ಸೀರೆ ತೋರಿಸುವಂತೆ  ಹೇಳಿದೆ. ಅಂಗಡಿ ಮಾಲಕ ನನ್ನನ್ನು ನೋಡಿ ನಕ್ಕು ಬಿಟ್ಟ. ನನಗೆ ಮುಜುಗರವಾಯಿತು, ಅಷ್ಟಕ್ಕೂ ನಾನು ಕೇವಲ ಕಡಲೆ ಮಾರುವವನಾಗಿದ್ದೆ ಹಾಗೂ ಯಾವತ್ತೂ ಇಂತಹ ಒಂದು ಅಂಗಡಿಗೆ ಏನನ್ನೂ ಖರೀದಿಸಲು ಹೋಗಿರಲಿಲ್ಲ. ಆತ ನನಗೆ ಸೀರೆ ತೋರಿಸುವ ಮುನ್ನ ಅದರ ದರವೆಷ್ಟೆಂದು ಕೇಳಿದೆ. ಮಾಲಿಕನ ಸಹಾಯಕ ಅವರದ್ದು  ಫಿಕ್ಸೆಡ್ ದರವೆಂದ. ನಾನು ಮತ್ತೆ ದರವೆಷ್ಟೆಂದು ಕೇಳಿದಾಗ ಆತ ನನಗೇ ಅದರ ದರ ಹೇಳಲು ತಿಳಿಸಿದ.

ನಾನು ಸ್ವಲ್ಪ ಹಿಂಜರಿದು ನನ್ನ ಮುದುಕಿ ಮಹಿಳೆಗೆ ಕೊಳ್ಳಲು ಬಯಸಿದ್ದಾಗಿ ಹೇಳಿದೆ. ನಾನು 300 ಟಕಾ ಕೊಡಬಲ್ಲೆನೆಂದು ಹೇಳಿದೆ. ಆತ ನಕ್ಕು ನಮಗೆ ಮದುವೆಯಾಗಿ ಎಷ್ಟು ವರ್ಷ ಆಯಿತೆಂದು ಕೇಳಿದ. ನಾನು 50 ವರ್ಷಗಳು ಎಂದೆ.  ಆಗ ಆತ ನಾಚುತ್ತಾ ತಾನು  ನವವಿವಾಹಿತ ಎಂದ. ಆಗ ನನಗೆ ಅಷ್ಟೊಂದು ಮುಜುಗರವಾಗಲಿಲ್ಲ. ಅಂಗಡಿ ಚೆನ್ನಾಗಿದೆ ಎನಿಸಿತು. ಆತ ಸೀರೆಯನ್ನು ಪ್ಯಾಕ್ ಮಾಡಿ ಪೆಟ್ಟಿಗೆಯೊಳಗೆ ಹಾಕಿ ನನಗೆ ನೀಡಿದ.

ಆ ದಿನ ನಾನು ತವಕದಿಂದ ಮನೆಗೆ ಹೋದೆ. ನಮ್ಮ ಮಕ್ಕಳಲ್ಲಿ ಯಾರೂ  ನಮ್ಮ ಬಗ್ಗೆ ಕೇಳುವವರಿಲ್ಲ. ಒಳ್ಳೆಯ ವಸ್ತುಗಳನ್ನು ನನ್ನ ಪತ್ನಿಗೆ ನೀಡುವುದು ನನಗೆ ಅಸಾಧ್ಯವಾಗಿತ್ತು.  ಆ ಪ್ಯಾಕೆಟನ್ನು ನನ್ನ ಹಾಸಿಗೆಯ ಮೇಲಿಟ್ಟು ಮತ್ತೆ ಕೆಲಸಕ್ಕೆ ಹೋದೆ. ಸಂಜೆ ಮನೆಗೆ ಹಿಂದಿರುಗಿದಾಗ ನನ್ನ ಪತ್ನಿ ಬಹಳ ಖುಷಿಯಲ್ಲಿದ್ದಳು. ನಾನು ಆಕೆಗೆ ನೀಡಿದ ಸೀರೆಯನ್ನು  ಆಕೆ ಉಟ್ಟಿದ್ದಳು.

ಆಕೆ ಒಂದು ಕಾಲದಲ್ಲಿ ಇದ್ದಂತೆ ಚೆನ್ನಾಗಿ ಕಾಣುತ್ತಿದ್ದಳು. ಈಗ ಬಿಳಿ ಕೂದಲು ಮತ್ತು ಹಲ್ಲಿಲ್ಲದ ಬೊಚ್ಚು ಬಾಯಿಯ ಜತೆಗೆ ಆ ಸೀರೆಯಲ್ಲಿ ಇನ್ನೂ ಚೆನ್ನಾಗಿ  ಕಾಣಿಸುತ್ತಿದ್ದಳು. ಬಹಳ ಕಾಲದ ನಂತರ ಆಕೆ ನಕ್ಕಳು ಹಾಗೂ ನನಗೆ ಒಂದು ಸಣ್ಣ ಕಾಗದದ ತುಂಡು ತಂದು ಕೊಟ್ಟಲು. ಅದೇನೆಂದು ನಾನು ಕೇಳಿದೆ. ಅದರಲ್ಲಿ 3000 ಟಕಾ ಎಂದು ಬರೆದಿತ್ತು. ಆ ದರವನ್ನು ನೋಡಿ  ನಾನು ದಂಗಾದೆ. 

ಏನಾಯಿತೆಂದು ನನ್ನ ಪತ್ನಿ ಕೇಳಿದಳು. ನನ್ನ ಪತ್ನಿಯ ಸಂತಸದ ಮುಖ ನೋಡಿದೆ. ಆಕೆಗೆ ಇಷ್ಟೊಂದು ದುಬಾರಿ ಬೆಲೆಯ ಸೀರೆಯನ್ನು ನಾನು ಯಾವತ್ತೂ ನೀಡುವುದು ಸಾಧ್ಯವಿರಲಿಲ್ಲ. ನಾನು ಆಕೆಗೆ ಎಲ್ಲವನ್ನೂ ಹೇಳಿದೆ ಹಾಗೂ ನಾವಿಬ್ಬರು ಜತೆಯಾಗಿ ಅತ್ತು ಬಿಟ್ಟೆವು.   ನಾವು ಸ್ವಲ್ಪ ಹಣ ಉಳಿತಾಯ ಮಾಡಿದರೆ ಆ ಯುವಕನಿಗೆ ಅಡುಗೆ ಮಾಡಿ ಕಳಹಿಸಬಹುದೆಂದು ನನ್ನ ಪತ್ನಿ ಹೇಳಿದಳು.

ಆದರೆ ನಾವು ಆತನಿಗೆ ಏನೂ ಮಾಡಲು ಸಾಧ್ಯವಾಗಲಿಲ್ಲ. ಆತ  ಚಿಕ್ಕ ಪ್ರಾಯದಲ್ಲೇ ರಸ್ತೆ ಅಪಘಾತ ಒಂದರಲ್ಲಿ ಸಾವಿಗೀಡಾದ. ಆತನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದಾಗ ನಾನು  ದೇವರಲ್ಲಿ ಪ್ರಾರ್ಥಿಸಿದೆ. ನಾನು ಯಾವತ್ತಾದರೂ ಒಳ್ಳೆಯ ಕಾರ್ಯ ಮಾಡಿದ್ದೇನೆಂದಾದರೆ ಹಾಗೂ ದೇವರು ನನ್ನ ಇಚ್ಛೆ ನೆರವೇರಿಸುವುದೆಂದಾದರೆ  ಆ ಯುವಕನಿಗೆ ಸ್ವರ್ಗದಲ್ಲಿ ಅತ್ಯುನ್ನತ ಸ್ಥಾನ ನೀಡಲಿ ಎಂದು ಬೇಡಿದೆ. ಈ ಜಗತ್ತಿನಲ್ಲಿ ಶ್ರೀಮಂತರಿದ್ದಾರೆ, ಬಡವರಿದ್ದಾರೆ  ಆದರೆ  ಇಂತಹ ಮನುಷ್ಯರು ವಿರಳ.

- ಬೊಡೊರ್ ಉದ್ದೀನ್ (70)

Full View

Writer - ಜಿ ಎಂ ಬಿ ಆಕಾಶ್

contributor

Editor - ಜಿ ಎಂ ಬಿ ಆಕಾಶ್

contributor

Similar News