ಬೇಡಿಕೆ ಈಡೇರಿಕೆಗೆ ಪಡಿತರ ವಿತರಕರ ಧರಣಿ
ಮಂಡ್ಯ, ಜು.31: ಓಎಸ್‌ಯಂತ್ರ ಕಡ್ಡಾಯ ವಿರೋಧ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಂಡ್ಯ ನಗರ ಮತ್ತು ಗ್ರಾಮಾಂತರ ಪಡಿತರ ವಿತರಕರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಧರಣಿ ನಡೆಸಿದರು.
ಉಚ್ಛ ನ್ಯಾಯಾಲಯ ಪಿಓಎಸ್ ಅಳವಡಿಸುವುದು ಉತ್ತಮ ಎಂದಿದೆಯೇ ವಿನಃ ಕಡ್ಡಾಯ ಮಾಡಿಲ್ಲ. ಆದರೆ, ಸರಕಾರ ಅದನ್ನು ಕಡ್ಡಾಯವಾಗಿ ಬಳಕೆ ಮಾಡಬೇಕು ಎಂದಿರುವುದು ಸರಿಯಲ್ಲ ಎಂದು ಅವರು ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಮಸ್ಯೆ ಹಾಗೂ ನೆಟ್‌ವರ್ಕ್ ತೊಂದರೆ ಇರುವುದರಿಂದ ಯಂತ್ರ ಸಮಪ್ಕವಾಗಿ ಕೆಲಸ ಮಾಡುವುದಿಲ್ಲ. ಇದರಿಂದ ಪಡಿತರ ವಿತರಣೆಗೆ ತೊಂದರೆ ಆಗುತ್ತದೆ. ಆದ್ದರಿಂದ ಯಂತ್ರವನ್ನು ಕಡ್ಡಾಯಗೊಳಿಸುವ ಆದೇಶ ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದರು.
ಸರಕಾರ ಪ್ರತಿ ಕಾರ್ಡ್‌ಗೆ 13 ರೂ. ಕಮೀಷನ್ ನೀಡುತ್ತೇನೆ ಎಂದು ಹೇಳುತ್ತಿರುವುದು ಅವೈಜ್ಞಾನಿಕವಾಗಿದ್ದು, ಕೂಡಲೇ ಹಿಂದೆ ಚಾಲ್ತಿಯಲ್ಲಿದ್ದ ಕ್ವಿಂಟಲ್‌ಗೆ 70 ರೂ. ಕಮಿಷನ್ ನೀಡಬೇಕು ಎಂದು ಅವರು ಆಗ್ರಹಿಸಿದರು.
ಪಡಿತರ ವಿತರಕರಿಗೆ ಕಳೆದ ಜೂನ್ ಹಾಗೂ ಜುಲೈ ತಿಂಗಳ ಕಮಿಷನ್ ಹಣ ಬಿಡುಗಡೆ ಮಾಡಬೇಕು. ಡಿಡಿ ಖರೀದಿಸಲು ದುಬಾರಿ ಕಮಿಷನ್ ನೀಡಬೇಕಾಗಿರುವುದರಿಂದ ಈ ಹಿಂದಿನ ಆರ್‌ಟಿಜಿಎಸ್ ಮುಖಾಂತರ ಹಣ ಪಾವತಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಪಡಿತರ ಚೀಟಿ ಹಂಚಿಕೆಯಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ. ಈ ಬಗ್ಗೆ ಉಪನಿರ್ದೇಶಕರೊಂದಿಗೆ ಎಷ್ಟು ಬಾರೀ ಚರ್ಚೆ ನಡೆ ಸಿದರು ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ ಅವರು, ನ್ಯಾಯ ಬೆಲೆ ಅಂಗಡಿಯಲ್ಲಿಯೂ ಗ್ಯಾಸ್ ಸಿಲಿಂಡ್‌ಗಳನ್ನು ವಿತರಣೆ ಮಾಡಲು ಅನುವು ಮಾಡಿಕೊಡಬೇಕು ಎಂದರು.
ಸಂಘದ ಜಿಲ್ಲಾ ಕಾರ್ಯಧ್ಯಕ್ಷ ಎಚ್.ಜಿ.ತ್ಯಾಗರಾಜು, ನಗರ ಕಾರ್ಯಧ್ಯಕ್ಷ ರಾಜು, ಪ್ರಕಾಶ್, ಬೋರೇಗೌಡ, ಬಸವರಾಜು, ಸೌಭಾಗ್ಯ, ಸುಮಾ, ಸೋಮಾಚಾರಿ, ಇತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.