ಸೊರಬ: ಬೀಳ್ಕೊಡುಗೆ ಸಮಾರಂಭ
ಸೊರಬ, ಆ.1: ಸಮಯ ಪಾಲನೆ, ಹೊಂದಾಣಿಕೆ ಹಾಗೂ ಧೈರ್ಯದೊಂದಿಗೆ ಅಗ್ನಿ ಶಾಮಕ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಲ್ಲಿ ದಕ್ಷ ಅಧಿಕಾರಿಯಾಗಿ ಹೊರಹೊಮ್ಮಲು ಸಾಧ್ಯ ಎಂದು ಜಿಲ್ಲಾ ಅಗ್ನಿಶಾಮಕ ಠಾಣಾಧಿಕಾರಿ ಪುಟ್ಟಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಅಗ್ನಿಶಾಮಕ ಠಾಣೆಯಲ್ಲಿ ನಿವೃತ್ತಿ ಹೊಂದಿದ ಎಂ.ಮಂಜುನಾಥ್‌ರಾವ್ ಅವರಿಗೆ ಸಿಬ್ಬಂದಿಗಳು ಹಮ್ಮಿಕೊಂಡ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಗ್ನಿ ಶಾಮಕ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವುದು ಸವಾಲಿನ ಕೆಲಸವಾಗಿದ್ದು, ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂಧಿಗಳು ಸದಾ ಜಾಗೃತರಾಗಿ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕಿದೆ. ನಿವೃತ್ತಿ ಹೊಂದುತ್ತಿರುವ ಎಂ.ಮಂಜುನನಾಥ್ ತಮ್ಮ 36 ವರ್ಷಗಳ ಸೇವೆಯಲ್ಲಿ ಎಲ್ಲಿಯೂ ಕರ್ತವ್ಯ ಲೋಪ ಎಸಗದೆ ಕ್ರೀಯಾಶೀಲರಾಗಿ ಅತ್ಯಂತ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿ ಸಿಬ್ಬಂಧಿಗಳ ವಿಶ್ವಾಸ ಪಡೆದು ಉತ್ತಮ ಕರ್ತವ್ಯ ನಿರ್ವಹಿಸಿದ್ದಾರೆ. ಇವರ ಕರ್ತವ್ಯದ ದಕ್ಷತೆಯನ್ನು ಮನಗಂಡ ಸರ್ಕಾರ 2007 ಮತ್ತು 2014ರಲ್ಲಿ ಮುಖ್ಯಮಂತ್ರಿ ಪದಕ ಪ್ರಶಸ್ತಿ ನೀಡಿ ಗೌರವಿಸಿದೆ. ಇಂತಹ ಅಧಿಕಾರಿಗಳನ್ನು ಸಿಬ್ಬಂಧಿಗಳು ಆದರ್ಶವಾಗಿಟ್ಟುಕೊಂಡು ಕರ್ತವ್ಯ ನಿರ್ವಹಿಸಿದ್ದಲ್ಲಿ ಉತ್ತಮ ಅಧಿಕಾರಿಯಾಗಿ ಹೊರ ಹೊಮ್ಮುವುದರ ಜೊತೆಗೆ ಜನರು ಇಲಾಖೆಯ ವಿಶ್ವಾಸವನ್ನು ಉಳಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದರು.
ನಿವೃತ್ತಿ ಹೊಂದಿದ ಎಂ. ಮಂಜುನಾಥ್ ರಾವ್ ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿ, ಅಗ್ನಿ ಶಾಮಕ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತಮ್ಮ ಕರ್ತವ್ಯವನ್ನು ಪ್ರೀತಿಸಬೇಕು. ಸದಾ ಜಾಗೃತರಾಗಿ ಸಮಯ ಪ್ರಜ್ಞೆಯಿಂದ ಕೆಲಸ ನಿರ್ವಹಿಸಿದ್ದಲ್ಲಿ ದೊಡ್ಡ ಅನಾಹುತಗಳನ್ನು ತಪ್ಪಿಸುವುದರ ಜೊತೆಗೆ ಸಮಾಜಕ್ಕೆ ಕೊಡುಗೆ ನೀಡಿದ ತೃಪ್ತಿಯನ್ನು ಪಡೆಯಬಹುದು. ನನ್ನ ವೃತ್ತಿ ಜೀವನದಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸಿದ್ದರ ತೃಪ್ತಿ ಇದೆ ಎಂದರು.
ಕಾರ್ಯಕ್ರಮದಲ್ಲಿ ಸಾಗರ ಠಾಣಾ ಸಹಾಯಕ ಅಧಿಕಾರಿ ಪರಮೇಶ್ವರ, ಸೊರಬ ಠಾಣಾಧಿಕಾರಿ ಎ.ಸುಬ್ರಮಣಿ, ಪ್ರಮುಖರಾದ ವತ್ಸಲಾ ಮಂಜುನಾಥ್, ಮಹೇಶ್ವರ್, ಜಿನ್ನಪ್ಪ, ಅಂಥೋನಿವಾಸ್, ಚೌಡಪ್ಪ, ಈಶ್ವರಪ್ಪ, ಶಿವನಗೌಡ, ಚಂದ್ರಶೇಖರ್ ಸ್ವಾಮಿ, ಎಲ್.ಬಿ.ವೀರಭದ್ರ, ಬಹದ್ದೂರ್ ಅಲಿಖಾನ್, ಆನಂದ್ ಎಸ್.ಗೌಡ, ರಾಜೇಂದ್ರ, ಎಂ.ಆರ್.ಮುಂಜುನಾಥ್, ಮಂಜುನಾಥ್, ಕೆಪಿಸಿ ನಿವೃತ್ತ ಅಧಿಕಾರಿ ವಶಿಷ್ಠ, ಪುಷ್ಪಲತಾ ವಶಿಷ್ಠ ಮತ್ತಿತರರಿದ್ದರು.