ದಾವಣಗೆರೆ: ವಿದ್ಯುತ್ ವಿತರಣಾ ಕೇಂದ್ರಗಳ ಸ್ಥಾಪನೆ ಕಾಮಗಾರಿಗೆ ಭೂಮಿ ಪೂಜೆ
ದಾವಣಗೆರೆ, ಆ.1: ನಗರಕ್ಕೆ ಕುಡಿಯಲು ನೀರು ಸರಬರಾಜು ಮಾಡುವ ಟಿವಿ ಸ್ಟೇಷನ್ ಕೆರೆಗೆ ಹೊಳೆ ನೀರು ತುಂಬಿಸಲು ಕುಂದುವಾಡ ಕೆರೆಯಿಂದ 9 ಕೋಟಿ ರು. ವೆಚ್ಚದಲ್ಲಿ ಪ್ರತ್ಯೇಕ ಪೈಪ್‌ಲೈನ್ ಅಳವಡಿಸಲು ಚಿಂತನೆ ನಡೆಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ತಿಳಿಸಿದರು.
ಸಮೀಪದ ದೊಡ್ಡಬಾತಿ ಬಳಿ ಪಾಲಿಕೆಯ ನೀರು ಶುದ್ಧೀಕರಣ ಘಟಕದಲ್ಲಿ ಮಂಗಳವಾರ ಮುಖ್ಯಮಂತ್ರಿಗಳ ನಗರೋತ್ಥಾನ ಅನುದಾನದಡಿ 17.80 ಕೋಟಿ ರು. ವೆಚ್ಚದಲ್ಲಿ ರಾಜನಹಳ್ಳಿ ಜಾಕ್‌ವೆಲ್ ಮತ್ತು ದೊಡ್ಡಬಾತಿಯ ನೀರು ಶುದ್ಧೀಕರಣ ಘಟಕಗಳಿಗೆ ನಿರಂತರ ವಿದ್ಯುತ್ ಸರಬರಾಜು ಮಾಡುವ 66/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರಗಳ ಸ್ಥಾಪನೆ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ನಗರದ ವಿವಿಧ ವಾರ್ಡ್‌ಗಳಿಗೆ ನೀರು ಸರಬರಾಜು ಮಾಡುವ ಟಿವಿ ಸ್ಟೇಷನ್ ಕೆರೆಯಲ್ಲಿ ನೀರಿಲ್ಲ. ಹೀಗಾಗಿ, ತುಂಗಭದ್ರಾ ನದಿಯಿಂದ ಕುಂದುವಾಡ ಕೆರೆಗೆ ನೀರು ಹರಿಸುವ ಸಂದರ್ಭ ಟಿವಿ ಸ್ಟೇಷನ್ ಕೆರೆಗೂ ನೀರು ತುಂಬಿಸಲು ಕುಂದುವಾಡ ಕೆರೆಯಿಂದ ಟಿವಿ ಸ್ಟೇಷನ್ ಕೆರೆಯವರೆಗೆ 9 ಕೋಟಿ ರು. ವೆಚ್ಚದಲ್ಲಿ ಪ್ರತ್ಯೇಕ ಪೈಪ್‌ಲೈನ್ ಅಳವಡಿಸಲು ಶೀಘ್ರದಲ್ಲಿಯೇ ಇದರ ಟೆಂಡರ್ ಕೆರೆದು ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದರು.
ಮೊದಲು ಪಾಲಿಕೆ ಜನತೆಗೆ ಎರಡರಿಂದ ಮೂರು ದಿನಗಳಿಗೊಮ್ಮೆ ನೀರು ಕೊಡುತ್ತಿತ್ತು. ನಂತರ ವಾರಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ, ಈಗ 15 ದಿನಗಳಿಗೊಮ್ಮೆ ಪಾಲಿಕೆ ನಾಗರೀಕರಿಗೆ ನೀರು ಪೂರೈಸುತ್ತಿದ್ದು, ಜನತೆ ನೀರಿಗಾಗಿ ಪರಿತಪ್ಪಿಸುವಂತಾಗಿದೆ. ಆದ್ದರಿಂದ ಪಾಲಿಕೆ ವಾರದಲ್ಲಿ ಕನಿಷ್ಠ ಮೂರು ದಿನ ನೀರು ಪೂರೈಸಬೇಕೆಂದು ತಾಕೀತು ಮಾಡಿದ ಅವರು, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 24*7 (ದಿನದ 24 ಗಂಟೆ) ನೀರು ಪೂರೈಸಲಿಕ್ಕಾಗಿ 365 ಕೋಟಿ ರು. ವೆಚ್ಚದಲ್ಲಿ ಜಲಸಿರಿ ಯೋಜನೆಯ ಕ್ರಿಯಾ ಯೋಜನೆ ತಯಾರಿಸಿದ್ದು, ಯೋಜನೆ ಟೆಂಡರ್ ಪ್ರಕ್ರಿಯೆಯಲ್ಲಿದ್ದು, ಇನ್ನೂ ಒಂದು, ಒಂದೂವರಿ ತಿಂಗಳ ಒಳಗೆ ಕಾಮಗಾರಿ ಆರಂಭಿಸಲಾಗುವುದು. 24*7 ನೀರು ಪೂರೈಸಲಿಕ್ಕಾಗಿ ತುಂಗಭದ್ರಾ ನದಿಯಲ್ಲಿ ಬ್ಯಾರೇಜ್ ನಿರ್ಮಿಸಿ, ನೀರು ಸಂಗ್ರಹಣ ಸಾಮರ್ಥ್ಯ ಹೆಚ್ಚಿಸಿ, ನಗರದ ಪಿಬಿ ರಸ್ತೆ ಮತ್ತು ರಿಂಗ್ ರಸ್ತೆಗಳಲ್ಲಿ ಇನ್ನೂ 19 ಓವರ್ ಹೆಡ್ ಟ್ಯಾಂಕ್ ನಿರ್ಮಿಸಿ, ನಾಗರೀಕರಿಗೆ ನೀರು ಹಂಚಿಕೆ ಮಾಡಲಾಗುವುದೆಂದರು.
ನದಿ ಪಾತ್ರದಲ್ಲಿ ಇನ್ನೊಂದು ಜಾಕ್‌ವೆಲ್ ನಿರ್ಮಿಸಿ, ಬಾತಿಯ ಪಾಲಿಕೆಯ ನೀರು ಶುದ್ಧೀಕರಣ ಘಟಕಕ್ಕೆ ನೀರು ಪೂರೈಸಲು ಪೈಪ್‌ಲೈನ್ ಕಾಮಗಾರಿಯನ್ನು 89 ಕೋಟಿ ರು. ವೆಚ್ಚದಲ್ಲಿ ಕೈಗೊಳ್ಳಲಾಗುವುದು ಎಂದ ಅವರು, ಬಾತಿಯ ನೀರು ಶುದ್ಧೀಕರಣ ಘಟಕದ ಭೂಮಿ ಪೂಜೆಯನ್ನು 1996ರಲ್ಲಿ ಅಂದಿನ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಹಾಗೂ ಅಂದಿನ ಸಚಿವ ಎಚ್. ಶಿವಪ್ಪ ಹಾಗೂ ನಮ್ಮ ತಂದೆ ಶಾಮನೂರು ಶಿವಶಂಕರಪ್ಪ ಮಾಡಿದ್ದರು. ಇಲ್ಲಿ ಈ ಘಟಕ ಸ್ಥಾಪಿಸಲು ಭದ್ರಾ ಸಹಕಾರ ಸಕ್ಕರೆ ಕಾರ್ಖಾನೆಯಿಂದ ಐದು ಎಕರೆ ಜಮೀನು ಕೊಡುವಂತೆ ಅಂದಿನ ದಾವಣಗೆರೆ ನಗರಸಭೆ ಮನವಿ ಮಾಡಿದ್ದರ ಹಿನ್ನೆಲೆಯಲ್ಲಿ ಶಿವಪ್ಪನವರು ಈ ಜಾಗ ಬಿಟ್ಟುಕೊಟ್ಟಿದ್ದರು ಎಂದರು.
ಕಾರ್ಯಕ್ರಮದಲ್ಲಿ ಉಪ ಮೇಯರ್ ಮಂಜಮ್ಮ ಹನುಮಂತಪ್ಪ, ದೂಡಾ ಅಧ್ಯಕ್ಷ ರಾಮಚಂದ್ರಪ್ಪ, ಎಪಿಎಂಸಿ ಅಧ್ಯಕ್ಷ ಮುದೇಗೌಡ್ರ ಗಿರೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ್, ಪಾಲಿಕೆ ಆಯುಕ್ತ ಬಿ.ಎಚ್.ನಾರಾಯಣಪ್ಪ, ಪಾಲಿಕೆ ಸದಸ್ಯರಾದ ಬಿ.ಕೆ.ಲಿಂಗರಾಜ್, ಗೋಣೆಪ್ಪ, ರೇಖಾ ನಾಗರಾಜ್, ರಹೀಂ, ಪಿ.ಕೆ. ಚಂದ್ರಶೇಖರ್, ಎಂ.ಹಾಲೇಶ್, ಆವರಗೆರೆ ಉಮೇಶ್, ಲಲಿತ ರಮೇಶ್, ರೇಣುಕಾಬಾಯಿ ವೆಂಕಟೇಶ ನಾಯ್ಕ, ಹಂಚಿನಮನೆ ತಿಪ್ಪಣ್ಣ, ರಾಜಶೇಖರ್‌ಗೌಡ್ರು, ಬಾತಿ ಗ್ರಾ.ಪಂ. ಉಪಾಧ್ಯಕ್ಷ ಕೆಂಚಪ್ಪ, ಬಾತಿ ಸಿದ್ಧಲಿಂಗಪ್ಪ, ಉಮೇಶ್ ಇದ್ದರು.
ದಿನೇಶ್ ಶೆಟ್ಟಿ ಸ್ವಾಗತ ಕೋರಿದರು. ಎ.ನಾಗರಾಜ್ ನಿರೂಪಿಸಿದರು. ಮಾಲಾ, ಆಯಿಷಾ ಭಾನು ಪ್ರಾರ್ಥಿಸಿದರು.