ಆಟೋ, ದ್ವಿಚಕ್ರ ವಾಹನದ ನಡುವೆ ಡಿಕ್ಕಿ: ಬಾಲಕ ಮೃತ್ಯು; ಮೂವರಿಗೆ ಗಾಯ
ಬಾಗೇಪಲ್ಲಿ, ಆ.1: ಆಟೋ ಮತ್ತು ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಆಟೋ ಪಲ್ಟಿ ಹೊಡೆದ ಪರಿಣಾಮ ತೀವ್ರ ಗಾಯಕೊಂಡಿದ್ದ ಯುವಕನೊಬ್ಬ ಮೃತಪಟ್ಟಿದ್ದು, ಉಳಿದ 3 ಮಂದಿ ಮಹಿಳೆಯರು ಗಾಯಕೊಂಡಿರುವ ಘಟನೆ ಬಾಗೇಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ಸಂಜೆ 6 ಗಂಟೆ ಸಮಯದಲ್ಲಿ ನಡೆದಿದೆ.
ಮೃತ ಯುವಕ ತಾಲ್ಲೂಕಿನ ಮೂಗಚಿನ್ನೇಪಲ್ಲಿ ಗ್ರಾಮದ ವಾಸಿ ಹಾಗೂ ನರೇಂದ್ರ(17) ಎಂದು ಗುರ್ತಿಸಲಾಗಿದೆ.
ಮೃತ ಯುವಕ ಸೇರಿದಂತೆ ಗಾಯಗೊಂಡಿರುವ ವ್ಯಕ್ತಿಗಳು ಬಾಗೇಪಲ್ಲಿ ಕಡೆಯಿಂದ ಆಟೋದಲ್ಲಿ ಚಿಂತಾಮಣಿ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಯಲ್ಲಂಪಲ್ಲಿ ಕಡೆಯಿಂದ ಅತೀ ವೇಗವಾಗಿ ಬಂದ ದ್ವಿಚಕ್ರ ವಾಹನ ಯಲ್ಲಂಪಲ್ಲಿ ಗ್ರಾಮದ ಬಳಿ ಇರುವ ಆಂಜನೇಯಸ್ವಾಮಿ ದೇವಾಲಯದ ಮುಂಭಾಗದಲ್ಲಿ ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಬ್ಲೂಮ್ಸ್ ಕಾಲೇಜಿನ ವಿದ್ಯಾರ್ಥಿ ನರೇಂದ್ರ ತೀವ್ರವಾಗಿ ಗಾಯಗೊಂಡಿದ್ದ. ತಕ್ಷಣ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಆಟೋದಲ್ಲಿ ಪ್ರಯಾಣಿಸುತ್ತಿದ್ದ ಕಂಬಾಲಪಲ್ಲಿ ಗ್ರಾಮದ ಮುನಿಯಮ್ಮ, ವರದಯ್ಯ ಗಾರಿಪಲ್ಲಿ ಗ್ರಾಮದ ಶಶಿಕಲಾ ಸೇರಿದಂತೆ 3 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದ ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಬಾಗೇಪಲ್ಲಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಅಪಘಾತಕ್ಕೆ ಕಾರಣವಾಗಿರುವ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆದರೆ ದ್ವಿಚಕ್ರ ಸವಾರ ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ.