ತಿಂಗಳ ಅಂತ್ಯದೊಳಗೆ ಬಹುಗ್ರಾಮ ಕುಡಿಯುವ ನೀರು ಯೋಜನೆ ಲೋಕಾರ್ಪಣೆ: ಎಂ.ಸಿ. ಮೋಹನಕುಮಾರಿ
ಗುಂಡ್ಲುಪೇಟೆ, ಆ.1: ದಿವಂಗತ ಎಚ್.ಎಸ್.ಮಹದೇವಪ್ರಸಾದ್‌ರವರ ಕನಸಿನ ಕೂಸಾದ ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು ಈ ತಿಂಗಳ ಅಂತ್ಯದೊಳಗೆ ಲೋಕಾರ್ಪಣೆಗೊಳ್ಳಲಿದೆ ಎಂದು ಶಾಸಕರಾದ ಎಂ.ಸಿ. ಮೋಹನಕುಮಾರಿ ಅವರು ತಿಳಿಸಿದರು.
ನಂಜನಗೂಡು ತಾಲೂಕಿನ ಹುಲ್ಲಳ್ಳಿ ಬಳಿ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಶುದ್ಧೀಕರಣ ಘಟಕ, ಜಾಕ್ ವೆಲ್ ಸ್ಥಳ ಮತ್ತು ಗುಂಡ್ಲುಪೇಟೆ ತಾಲೂಕಿನ ಕುರುಬರ ಹುಂಡಿಯಲ್ಲಿ ಜಲಸಂಗ್ರಹಾಗಾರಗಳಿಗೆ ಇಂದು ಭೇಟಿ ನೀಡಿ ಪರಿಶೀಲಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
ಗುಂಡ್ಲುಪೇಟೆ ತಾಲೂಕಿನ 131 ಹಳ್ಳಿಗಳಿಗೆ ಕಬಿನಿ ನದಿಯಿಂದ ಶಾಶ್ವತವಾಗಿ ಶುದ್ದ ಕುಡಿಯುವ ನೀರು ಪೂರೈಸಲು 205 ಕೊೀಟಿ ರೂ. ವೆಚ್ಚದ ಯೋಜನೆ ಬಹಳ ಜವಾಬ್ದಾರಿಯುತ ಹಾಗೂ ಕಠಿಣ ಸವಾಲುಗಳನ್ನು ಎದುರಿಸಿ ಕೆಲಸ ಇದೀಗ ಶೇ. 98ರಷ್ಟು ಪೂರ್ಣಗೊಂಡಿದೆ. ಉಳಿದ ಕೆಲಸಗಳು ತ್ವರಿತವಾಗಿ ನಡೆಯುತ್ತಿದೆ. ಒಟ್ಟು 403 ಕಿ.ಮೀ.ನಷ್ಟು ಪೈಪ್ ಲೈನ್ ಕಾಮಗಾರಿ ಪೂರ್ಣಗೊಂಡಿದೆ. ಈಗಾಗಲೆ ಕಚ್ಚಾನೀರನ್ನು ಗ್ರಾಮಗಳಿಗೆ ಪೂರೈಸಲಾಗುತ್ತಿದೆ. ಇನ್ನು 15 ರಿಂದ 20 ದಿನಗಳಲ್ಲಿ ಶುದ್ಧ ಕುಡಿಯುವ ನೀರನ್ನು ಎಲ್ಲ ಗ್ರಾಮಗಳಿಗೆ ಪೂರೈಸಲಾಗುತ್ತದೆ ಎಂದರು.
ಮರಳಿನ ಅಭಾವ, ನೋಟು ಅಮಾನ್ಯ ಕಾರಣ ಸೇರಿದಂತೆ ಕೆಲವು ತಾಂತ್ರಿಕ ತೊಂದರೆಗಳಿಂದ ಯೋಜನೆ ವಿಳಂಬವಾಯಿತು. ಆದರೂ ಗುಣಮಟ್ಟದ ಕೆಲಸ ನಡೆದಿದ್ದು ಯೋಜನೆ ಸಾಕಾರವಾಗುವ ಹಂತಕ್ಕೆ ಬಂದಿರುವುದು ಸಂತಸ ತಂದಿದೆ. ಆಗಸ್ಟ್ ಕೊನೆಯ ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವ
ರಿಂದ ಕುಡಿಯುವ ನೀರಿನ ಯೋಜನೆಯನ್ನು ಜನತೆಯ ಸೇವೆಗೆ ಸಮರ್ಪಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲು ಚಿಂತನೆ ನಡೆಸಿದ್ದೇವೆ ಎಂದು ಶಾಸಕರು ತಿಳಿಸಿದರು.
ಕಾಡಾ ಅಧ್ಯಕ್ಷರಾದ ಎಚ್.ಎಸ್. ನಂಜಪ್ಪ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ಎನ್. ನಟೇಶ್, ಮುಖಂಡರಾದ ಗಣೇಶ್‌ಪ್ರಸಾದ್ ಬಿ.ಎಂ. ಮುನಿರಾಜು, ತಾ.ಪಂ.ಮಾಜಿ ಅಧ್ಯಕ್ಷ ಚಾಮುಲ್ ನಿರ್ದೇಶಕರಾದ ಡಿ. ಮಾದಪ್ಪ(ಸ್ವಾಮಿ) ಕೊಡಸೋಗೆ ಶಿವಬಸಪ್ಪ, ಮಂಚಳ್ಳಿ ಲೋಕೇಶ್, ನೀಲಕಂಠಪ್ಪ, ಬಿ.ಎಸ್. ಸಿದ್ದಪ್ಪ, ನಂಜನಾಯ್ಕ, ಉಮೇಶ್, ಶಿವಸ್ವಾಮಿ, ಇತರ ಮುಖಂಡರು, ಅಧಿಕಾರಿಗಳು ಹಾಜರಿದ್ದರು.