×
Ad

ಶೇ.33ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ಜಾರಿಗೊಳಿಸಲು ಆಗ್ರಹಿಸಿ ರಾಜ್ಯಪಾಲರಿಗೆ ಮನವಿ

Update: 2017-08-01 21:25 IST

ಚಿಕ್ಕಬಳ್ಳಾಪುರ, ಆ.1: ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ಜಾರಿಗೊಳಿಸಲು ಆಗ್ರಹಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿ ದೀಪ್ತಿ ಕಾನಡೆ ಅವರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಘಟಕದ ಅಧ್ಯಕ್ಷೆ ಬಿ.ಸಾವಿತ್ರಮ್ಮ, ಕೇಂದ್ರ ಸರ್ಕಾರ ಲೋಕಸಭೆಯ ಮುಂಗಾರು ಅಧಿವೇಶನದಲ್ಲಿ ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ಮಂಡಿಸುವ ಜೊತೆಗೆ ಅಂಗೀಕಾರ ಪಡೆದು ಕಾಯ್ದೆ ಜಾರಿಗೆ ತರುವ ಮೂಲಕ ಮಹಿಳೆಯರಿಗೆ ವಿಶೇಷ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸಿದರು.

ಎಚ್.ಡಿ.ದೇವೇಗೌಡ ಅವರ ನೇತೃತ್ವದ ಸಂಯುಕ್ತ ರಂಗ ಸರ್ಕಾರ 1996ರಲ್ಲಿ ಮೊದಲ ಬಾರಿಗೆ ಮಹಿಳಾ ಮೀಸಲಾತಿ ಮಸೂದೆ ಪ್ರಸ್ತಾವ ರೂಪಿಸಿತು. ಆದರೆ ಬಳಿಕ ಅಧಿಕಾರಕ್ಕೆ ಬಂದ ಸರ್ಕಾರಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಮಸೂದೆ ದಶಕಗಳೇ ಕಳೆದರೂ ಜಾರಿಗೆ ಬಂದಿಲ್ಲ ಎಂದ ಅವರು, ಹಿಂದಿನ ಕಾಂಗೆ್ರಸ್ ನೇತೃತ್ವದ ಯುಪಿಎ ಸರ್ಕಾರ, ಪ್ರಸ್ತುತದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಚುನಾವಣೆ ಸಮಯದಲ್ಲಿ ಮೀಸಲಾತಿ ಜಾರಿಯ ಆಶ್ವಾಸನೆ ಈಡೇರಿಸಿಲ್ಲವೆಂದು ಆರೋಪಿಸಿದರು.

2013ರ ಜಾಗತಿಕ ಮಾನವ ಅಭಿವೃದ್ಧಿ ಸಮೀಕ್ಷೆಯ ವರದಿ ಪ್ರಕಾರ ಲಿಂಗ ಸಮಾನತೆಯ ಸೂಚ್ಯಂಕದ 148 ದೇಶಗಳ ಪಟ್ಟಿಯಲ್ಲಿ ಭಾರತ 132ನೇ ಸ್ಥಾನದಲ್ಲಿದೆ. ಶೇ80.7 ರಷ್ಟು ಪುರುಷರು ಆದಾಯ ತರುವ ಉದ್ಯೋಗಗಳಲ್ಲಿದ್ದರೆ, ಶೇ29 ರಷ್ಟು ಮಹಿಳೆಯರು ಮಾತ್ರ ಆದಾಯ ಬರುವ ಕೆಲಸ ಮಾಡುತ್ತಿದ್ದಾರೆ. ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಶೇ73 ರಷ್ಟು ಮಹಿಳೆಯರ ಕೊಡುಗೆ ಇದೆ. ಆದರೆ ಕೇವಲ ಶೇ4 ರಷ್ಟು ಮಹಿಳೆಯರ ಹೆಸರಿನಲ್ಲಿ ಭೂಮಿಯ ಮಾಲಿಕತ್ವವಿದೆ ಎಂದು ಹೇಳಿದರು.

ಕಾರ್ಯದರ್ಶಿ ಮಂಜುಳಾ ಮಾತನಾಡಿ, ದೇಶದಲ್ಲಿ ಶೇ50ಕ್ಕೂ ಅಧಿಕ ಮಹಿಳೆಯರು ಅಪೌಷ್ಟಿಕತೆ ಮತ್ತು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಇದು ಮಹಿಳೆಯರು ಸಾಮಾಜಿಕ ಮತ್ತು ಆರ್ಥಿಕವಾಗಿ ಎದುರಿಸುತ್ತಿರುವ ಅಸಮಾನತೆಯ ದೋತ್ಯಕವಾಗಿದೆ. ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದರೂ ಈವರೆಗೆ ಮಹಿಳೆಗೆ ಸಂವಿಧಾನ ಪ್ರತಿಪಾದಿಸುವ ಸಮಾನ ಅವಕಾಶಗಳು ಲಭಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹೆಣ್ಣು ಮಗುವನ್ನು ಉಳಿಸಿ, ಹೆಣ್ಣು ಮಗುವನ್ನು ಓದಿಸಿ ಎಂದು ಆಕರ್ಷಕ ಘೋಷಣೆ ನೀಡುವ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಸಂದರ್ಭದಲ್ಲಿ ನೀಡಿದ ಭರವಸೆಯನ್ನು ಈಡೇರಿಸುವುದು ಅವರ ಕರ್ತವ್ಯ. ಆದ್ದರಿಂದ ಅವರು ಮುಂಗಾರು ಅಧಿವೇಶದಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿ, ಜಿಲ್ಲಾ ಘಟಕದ ಪದಾಧಿಕಾರಿಗಳಾದ ಶೋಭಾ, ವೆಂಕಟಲಕ್ಷ್ಮೀ, ಎನ್.ಬೃಂದಾ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News