"ಉತ್ತರ ಕೊರಿಯಾ ವಿರುದ್ಧ ಟ್ರಂಪ್ ಯುದ್ಧೋನ್ಮಾದ"

Update: 2017-08-02 04:07 GMT

ವಾಷಿಂಗ್ಟನ್, ಆ.2: ಉತ್ತರ ಕೊರಿಯಾ ಧೀರ್ಘದೂರ ಸಾಮರ್ಥ್ಯದ ಅಣ್ವಸ್ತ್ರ ಸಜ್ಜಿತ ಕ್ಷಿಪಣಿ ಅಭಿವೃದ್ಧಿಪಡಿಸಲು ಅವಕಾಶ ನೀಡುವ ಬದಲು ಯುದ್ಧದ ಮೂಲಕ ಆ ದೇಶವನ್ನು ಸರ್ವನಾಶ ಮಾಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾಗಿ ರಿಪಬ್ಲಿಕನ್ ಸೆನೆಟ್ ಸದಸ್ಯ ಲಿಂಡ್ಸೆ ಗ್ರಹಾಂ ಬಹಿರಂಗಪಡಿಸಿದ್ದಾರೆ.

ಎನ್‌ಬಿಸಿಯ ’ಟುಡೇ ಶೋ’ ಕಾರ್ಯಕ್ರಮದಲ್ಲಿ ಮಾತನಾಡಿದ ವಿದೇಶಿ ನೀತಿಯ ತಜ್ಞರೂ ಆಗಿರುವ ಅವರು, "ಇದೀಗ ಉತ್ತರ ಕೊರಿಯಾದ ಅಣ್ವಸ್ತ್ರ ಯೋಜನೆ ಮತ್ತು ಸ್ವತಃ ಉತ್ತರ ಕೊರಿಯಾವನ್ನು ನಾಶಪಡಿಸಲು ಇರುವ ಏಕೈಕ ಆಯ್ಕೆಯೆಂದರೆ ಮಿಲಿಟರಿ ಕಾರ್ಯಾಚರಣೆ" ಎಂದು ಗುಡುಗಿದ್ದಾರೆ.

ಉತ್ತರ ಕೊರಿಯಾ ಅಂತರಖಂಡ ಸಿಡಿತಲೆ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಬಳಿಕ ಮುಖಂಡ ಕಿಮ್ ಜಾಂಗ್ ಉನ್, "ಅಮೆರಿಕದ ಯಾವುದೇ ಭಾಗದ ಮೇಲೆ ದಾಳಿ ನಡೆಸಲು ನಮ್ಮ ದೇಶ ಇದೀಗ ಸಮರ್ಥವಾಗಿದೆ" ಎಂದು ಹೇಳಿದ್ದರು.

ವಿಶ್ವದ ಪ್ರಬಲ ರಾಷ್ಟ್ರಗಳು ಈಗಾಗಲೇ ಪ್ಯಾಂಗ್‌ಯಾಂಗ್‌ನ ಅಣ್ವಸ್ತ್ರ ಕಾರ್ಯಕ್ರಮವನ್ನು ವಿಶ್ವಸಂಸ್ಥೆ ಬೆಂಬಲಿತ ದಿಗ್ಬಂಧನಗಳನ್ನು ಹೇರುವ ಮೂಲಕ ನಿಯಂತ್ರಿಸಲು ಮಾಡಿರುವ ಪ್ರಯತ್ನ ವಿಫಲವಾಗಿದ್ದು, ಅಮೆರಿಕದ ಹತಾಶೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಹೇಳಿಕೆ ವಿಶೇಷ ಮಹತ್ವ ಪಡೆದಿದೆ.

ರಾಜತಾಂತ್ರಿಕತೆ, ಅದರಲ್ಲೂ ಮುಖ್ಯವಾಗಿ ಉತ್ತರ ಭಾಗದ ಚೀನಾದಿಂದ ವಿಶೇಷ ಒತ್ತಡ ಕೂಡಾ ಉತ್ತರ ಕೊರಿಯಾದ ಕ್ಷಿಪಣಿ ಕಾರ್ಯಕ್ರಮಕ್ಕೆ ತಡೆ ಹಾಕಲು ವಿಫಲವಾದಲ್ಲಿ, ವಿಧ್ವಂಸಕ ಸೇನಾ ಕಾರ್ಯಾಚರಣೆ ಕೈಗೊಳ್ಳದೇ ಅಮೆರಿಕಕ್ಕೆ ಬೇರೆ ಆಯ್ಕೆಗಳಿಲ್ಲ ಎಂದು ಅವರು ಹೇಳಿದ್ದಾರೆ. ಕಳೆದ 20 ವರ್ಷಗಳಿಂದ ಉತ್ತರ ಕೊರಿಯಾ ಈ ಕಾರ್ಯಕ್ರಮ ಹಮ್ಮಿಕೊಂಡು ಬಂದಿದೆ. ಅಮೆರಿಕ ಪ್ರದೇಶಗಳ ಮೇಲೆ ಐಸಿಬಿಎಂ ಮೂಲಕ ದಾಳಿ ಮಾಡಲು ಮುಂದಾದರೆ, ಆ ದೇಶದ ಜತೆಗೆ ಯುದ್ಧ ಸಾರುವುದು ಖಚಿತ. ಈ ಬಗ್ಗೆ ಟ್ರಂಪ್ ಜತೆ ಚರ್ಚಿಸಿದ್ದಾಗಿ ಗ್ರಹಾಂ ಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News