ಕೊಂಡಂಗೇರಿ ಶಾಲಾ ಶಿಕ್ಷಕರಿಗೆ ದಸಂಸದಿಂದ ಸನ್ಮಾನ
ಮಡಿಕೇರಿ, ಆ.2: 2016-17 ನೇ ಸಾಲಿನ ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇ.98 ರಷ್ಟು ಸಾಧನೆ ಮಾಡಿದ ಮಡಿಕೇರಿ ತಾಲ್ಲೂಕಿನ ಕೊಂಡಂಗೇರಿ ಸರಕಾರಿ ಪ್ರೌಢಶಾಲೆಯ ಶಿಕ್ಷಕರನ್ನು ದಲಿತ ಸಂಘರ್ಷ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದಾನಿಗಳು ಹಾಗೂ ಸಮಾಜ ಸೇವಕರಾದ ಟಿ.ಆರ್.ವಾಸುದೇವ್, ವಿದ್ಯಾರ್ಥಿಗಳನ್ನು ರೂಪಿಸುವ ಶಿಕ್ಷಕರನ್ನು ಸನ್ಮಾನಿಸುವುದು ಪುಣ್ಯದ ಕಾರ್ಯವೆಂದರು. ದೇವರ ಗುಡಿಗಳಿಗೆ ಹೋಗಿ ಕಲ್ಲಿನ ವಿಗ್ರಹಕ್ಕೆ ಪೂಜೆ ಮಾಡುವ ನಾವು ಜೀವನದಲ್ಲಿ ಪ್ರತ್ಯಕ್ಷ ದೇವರನ್ನು ಶಿಕ್ಷಕರಲ್ಲಿ ಕಾಣಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.
ಸರಕಾರಿ ಶಾಲೆಗಳಲ್ಲಿ ವ್ಯಾಸಾಂಗ ಮಾಡುವ ವಿದ್ಯಾರ್ಥಿಗಳ ಪೋಷಕರು ಸಂಕಷ್ಟದ ಜೀವನದ ನಡುವೆಯೂ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ಶ್ರಮಿಸುತ್ತಾರೆ. ಈ ಶ್ರಮಕ್ಕೆ ಫಲ ದೊರೆಯಬೇಕಾದರೆ ಮಕ್ಕಳು ಶೈಕ್ಷಣಿಕ ಸಾಧನೆ ಮಾಡಬೇಕೆಂದು ವಾಸುದೇವ್ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಹೆಚ್.ಎಲ್.ದಿವಾಕರ್ ಮಾತನಾಡಿ, ಕಡುಬಡವರು, ಗ್ರಾಮೀಣ ಭಾಗದ ಮಕ್ಕಳು, ತುಳಿತಕ್ಕೊಳಗಾದವರು ವಿದ್ಯಾವಂತರಾಗಬೇಕೆನ್ನುವುದೇ ಸಮಿತಿಯ ಉದ್ದೇಶವಾಗಿದೆ. ಇದೇ ಕಾರಣಕ್ಕೆ ಕಳೆದ ಐದು ವರ್ಷಗಳಿಂದ ಸಮಿತಿ ಶಿಕ್ಷಕರುಗಳನ್ನು ಸನ್ಮಾನಿಸುತ್ತಾ ಬಂದಿದೆ ಎಂದರು. ಡಾ.ಬಿ.ಆರ್.ಅಂಬೇಡ್ಕರ್ ಅವರು ವಿದ್ಯಾವಂತರಾದ ಕಾರಣದಿಂದಲೇ ಸಂವಿಧಾನವನ್ನು ರಚಿಸಲು ಸಾಧ್ಯವಾಗಿದೆ. ಯಾವುದೇ ಸಾಧನೆಗೆ ಶಿಕ್ಷಣ ಮುಖ್ಯವಾಗಿದೆ ಎಂದು ದಿವಾಕರ್ ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಶಾಲೆಯ ಮುಖ್ಯೋಪಧ್ಯಾಯರಾದ ಮಹಾಲಿಂಗಯ್ಯ, ದಲಿತ ಸಂಘರ್ಷ ಸಮಿತಿ ಶಿಕ್ಷಕರ ಶ್ರಮವನ್ನು ಗುರುತಿಸಿರುವುದು ಇತರರಿಗೆ ಮಾದರಿಯಾಗಿದೆ ಮತ್ತು ಶಿಕ್ಷಕರಿಗೆ ಸ್ಫೂರ್ತಿದಾಯಕವಾಗಿದೆ ಎಂದರು.