ವಿವಾಹಿತೆ ಆತ್ಮಹತ್ಯೆ
ಚಿಕ್ಕಮಗಳೂರು, ಆ.2: ವರದಕ್ಷಿಣೆ ಕಿರುಕುಳಕ್ಕೆ ವಿವಾಹಿತೆಯೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತರೀಕೆರೆ ತಾಲೂಕಿನ ಅಜ್ಜಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಜೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವಿವಾಹಿತೆಯನ್ನು ಕೆಂಚಾಪುರ ಗ್ರಾಮದ ನೀಲಾಬಾಯಿ(24) ಎಂದು ಗುರುತಿಸಲಾಗಿದೆ. ಈಕೆಯನ್ನು ಮಂಜಾನಾಯ್ಕ ಎಂಬಾತನಿಗೆ ಎರಡು ವರ್ಷಗಳ ಹಿಂದೆ ವಿವಾಹ ಮಾಡಿಕೊಡಲಾಗಿತ್ತು. ಮದುವೆ ಸಮಯದಲ್ಲಿ 25 ಸಾವಿರ ರೂ.ಗಳ ನಗದು ಹಣವನ್ನು ವರದಕ್ಷಿಣೆ ರೂಪದಲ್ಲಿ ನೀಡಲಾಗಿತ್ತು.
ಆದರೆ ಮದುವೆಯಾಗಿ 6 ತಿಂಗಳ ನಂತರ ಮರಳಿ 1 ಲಕ್ಷ ರೂ.ಗಳನ್ನು ತರುವಂತೆ ಪತಿ ಸಹಿತ ಅತ್ತೆ ಮತ್ತು ಮಾವ ಪೀಡಿಸತೊಡಗಿದ್ದರು. ಇದರಿಂದ ಬೇಸತ್ತ ನೀಲಾಬಾಯಿ ಮನನೊಂದು ಮನೆಯಲ್ಲಿ ಅಟ್ಟದ ಕಂಟಿಗೆ ವೇಲಿನಿಂದ ಕಟ್ಟಿ ಕೊರಳಿಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತಳ ತಂದೆ ರುದ್ರಾನಾಯ್ಕ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಘಟನೆ ಕುರಿತು ಪರಿಶೀಲನೆ ನಡೆಸಿರುವ ಅಜ್ಜಂಪುರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.