ಈಶ್ವರಪ್ಪ ಭೇಟಿ ನಂತರ ಉಪವಾಸ ಕೈಬಿಟ್ಟ ಸೊಗಡು ಶಿವಣ್ಣ
ತುಮಕೂರು,.ಆ.2: ತುಮಕೂರು ಜಿಲ್ಲೆಯ ಎಲ್ಲಾ ಕೆರೆಗಳಿಗೆ ಕುಡಿಯಲು ಹೇಮಾವತಿ ನೀರು ಹರಿಸಬೇಕೆಂದು ಒತ್ತಾಯಿಸಿ ಮಾಜಿ ಸಚಿವ ಎಸ್.ಶಿವಣ್ಣ ಹಮ್ಮಿಕೊಂಡಿರುವ ಉಪವಾಸ ಸತ್ಯಾಗ್ರಹ ಬುಧವಾರ ಸಂಜೆ ಕೊನೆಗೊಂಡಿದೆ.
ಸತತ ಬರದಿಂದ ತತ್ತರಿಸಿರುವ ಜಿಲ್ಲೆಯಲ್ಲಿ ಜನ ಜಾನುವಾರುಗಳಿಗೆ ಕುಡಿಯುವುದಕ್ಕೆ ಈಗಾಗಲೇ ಹೇಮಾವತಿ ಜಲಾಶಯದಲ್ಲಿ ಸಂಗ್ರಹವಾಗಿರುವ 17 ಟಿ.ಎಂ.ಸಿ ನೀರಿನಲ್ಲಿ ಜಿಲ್ಲೆಗೆ ಅಗತ್ಯವಿರುವ ನೀರನ್ನು ಹರಿಸಬೇಕೆಂದು ಒತ್ತಾಯಿಸಿ ಕಳೆದ ಸೋಮವಾರದಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹವನ್ನು ಎಸ್.ಶಿವಣ್ಣ, ಎಂ.ಬಿ.ನಂದೀಶ್ ನೇತೃತ್ವದಲ್ಲಿ ನೂರಾರು ಜನರು ಸತ್ಯಾಗ್ರಹ ಕುಳಿತಿದ್ದು, ಮೂರು ದಿನದಿಂದಲೂ ಕೆಲ ಮಠಾಧೀಶರು, ಹಿರಿಯ ಬಿಜೆಪಿ ಮುಖಂಡರು, ನಾಗರಿಕರು ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ನೈತಿಕ ಬೆಂಬಲ ನೀಡಿದ್ದರು.
ಬುಧವಾರ ಮಧ್ಯಾಹ್ನ 3.30ರ ಸಮಯಕ್ಕೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮಾಜಿ ಉಪಮುಖ್ಯಮಂತ್ರಿ ಹಾಗೂ ಬಿಜೆಪಿಯ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ಕಳೆದ ಮೂರು ದಿನಗಳಿಂದ ಜಿಲ್ಲೆಯ ಲಕ್ಫ್ಷೃಂತರ ಜನರ ದಾಹ ನೀಗಿಸಲು ಒತ್ತಾಯಿಸಿ ಶಿವಣ್ಣ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಸರಕಾರಕ್ಕೆ ನಿಜಕ್ಕೂ ಸ್ಪಂದನೆ ಎಂಬುದು ಇದ್ದರೆ ಕೂಡಲೇ ನೀರು ಹರಿಸಬೇಕು. ಉಪವಾಸ ನಿರತರಾಗಿರುವ ಎಸ್.ಶಿವಣ್ಣ ಮತ್ತು ನಂದೀಶ್ ಇಬ್ಬರು ಸಹ ಮಧುಮೇಹ ರೋಗಿಗಳಾಗಿದ್ದಾರೆ. ಅವರು ಉತ್ತಮ ಆರೋಗ್ಯದಿಂದ ಇರುವುದು ಅತಿ ಮುಖ್ಯ. ಅವರ ಅವಶ್ಯಕತೆ ಪಕ್ಷಕ್ಕಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದೊಂದಿಗೆ, ಸಂಬಂಧಪಟ್ಟ ಸಚಿವರೊಂದಿಗೆ ಚರ್ಚೆ ನಡೆಸಿ ಅವರ ಮೇಲೆ ಒತ್ತಡ ಹಾಕಲಾಗುವುದು. ಇದೊಂದು ಬಂಡ ಸರಕಾರ, ಈಗಾಗಲೇ ನಾಲ್ಕು ಜನರು ಉಪವಾಸ ಸತ್ಯಾಗ್ರಹದಿಂದ ಅಸ್ವಸ್ಥರಾಗಿದ್ದಾರೆ. ಬಿಜೆಪಿ ಪಕ್ಷದಲ್ಲಿ ಉಪವಾಸ ಸತ್ಯಾಗ್ರಹಕ್ಕೆ ಅವಕಾಶವಿಲ್ಲ. ಹೋರಾಟದ ವಿವಿಧ ಮಜಲುಗಳಿವೆ. ಜಯ ಸಿಗುವವರೆಗು ಪ್ರತಿಭಟನೆ ನಿಲ್ಲದು, ಇದನ್ನು ಸರಕಾರ ಮನಗಾಣಬೇಕು. ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳವುದಾಗಿ ತಿಳಿಸಿದರು.
ಬಿಜೆಪಿ ಮುಖಂಡ ಭಾನುಪ್ರಕಾಶ್ ಮಾತನಾಡಿ, ಸ್ವಾತಂತ್ರ ಬಂದ 70 ವರ್ಷ ಕಳೆದರೂ ಕುಡಿಯಲು ನೀರು ನೀಡಲು ಸಾಧ್ಯವಾಗದಿರುವುದು ನಾಚಿಕೇಗೇಡಿನ ಸಂಗತಿ. ಈಗಾಗಲೇ ಸರಕಾರ ತುಂಗಾ,ಭದ್ರಾ ಮತ್ತು ಕೆ.ಆರ್.ಎಸ್ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬೆಳೆ ಬೆಳೆಯದಂತೆ ಸೂಚನೆ ನೀಡಿದೆ. ಕುಡಿಯಲು ನೀರಿಲ್ಲದ ಸ್ಥಿತಿಯಿದೆ. ಕಳೆದ ಮೂರು ದಿನಗಳಿಂದಲೂ ಪ್ರತಿಭಟನೆ ನಡೆಸುತ್ತಿದ್ದರೂ ಸರಕಾರ ಗಮನಹರಿಸುತ್ತಿಲ್ಲ. ಬದಲಿಗೆ ಐಟಿ ದಾಳಿಗೆ ಒಳಗಾದ ಮಂತ್ರಿಯೊರ್ವರಿಗೆ ಮುಖ್ಯಮಂತ್ರಿಗಳು ಹೆದರಬೇಡಿ, ನಿಮ್ಮೊಂದಿಗೆ ನಾವಿದ್ದೇವೆ ಎಂಬ ಆಭಯ ನೀಡುತ್ತಿದ್ದಾರೆ. ಮುಖ್ಯಮಂತ್ರಿಗಳ ಲಕ್ಷ ಯಾರ ಕಡೆಗೆ ಇದೆ ಎಂಬುದನ್ನು ರಾಜ್ಯದ ಜನತೆ ಅರ್ಥ ಮಾಡಿಕೊಳ್ಳಬೇಕು ಎಂದರು.
ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ನಂತರ ಉಪವಾಸ ನಿರತ ಸ್ಥಳಕ್ಕೆ ಆಗಮಿಸಿ ಕೆ.ಎಸ್.ಈಶ್ವರಪ್ಪ, ಹಿರಿಯ ನಾಯಕರೊಂದಿಗೆ ಚರ್ಚೆಸಿ, ಆಗಸ್ಟ್ 11ರೊಳಗೆ ಜಿಲ್ಲೆಗೆ ನೀರು ಹರಿಸದಿದ್ದರೆ ಮುಂದಿನ ಹೋರಾಟ ರೂಪಿಸಲಾಗುವುದು. ಸದ್ಯಕ್ಕೆ ಉಪವಾಸ ಸತ್ಯಾಗ್ರಹವನ್ನು ಮೊಟಕುಗೊಳಿ ಸಲಾಗುವುದು ಎಂದು ತಿಳಿಸಿದ ಕೆ.ಎಸ್.ಈಶ್ವರಪ್ಪ, ಉಪವಾಸ ನಿರತ ಎಸ್.ಶಿವಣ್ಣ ಮತ್ತು ಎಂ.ಬಿ.ನಂದೀಶ್ ಅವರಿಗೆ ಎಳೆನೀರು ನೀಡುವ ಮೂಲಕ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಉಪವಾಸ ಸತ್ಯಾಗ್ರಹಕ್ಕೆ ತೆರೆ ಎಳೆದರು.
ಪ್ರತಿಭಟನೆಯಲ್ಲಿ ಶಿವಗಂಗೆಯ ಮಹಾಲಕ್ಷ್ಮಿ ಪೀಠಾಧ್ಯಕ್ಷ ಶ್ರೀಜ್ಞಾನಾನಂದಪುರಿ ಸ್ವಾಮೀಜಿ, ಕುಪ್ಪೂರು ಗದ್ದಿಗೆ ಮಠದ ಶ್ರೀಡಾ. ಯತೀಶ್ವರ ಶಿವಾಚಾರ್ಯಸ್ವಾಮೀಜಿ, ಬೆಳ್ಳಾವಿಯ ಕಾರದೇಶ್ವರ ವ್ಮಠದ ಶ್ರೀವೀರಬಸವಕಾರದ ಸ್ವಾಮೀಜಿ, ಜಿಲ್ಲಾ ಕಸಾಪ ಅಧ್ಯಕ್ಷ ಬಾ.ಹ.ರಮಾಕುಮಾರಿ ಸೇರಿದಂತೆ ನೂರಾರು ಮಹಿಳೆಯರು ಖಾಲಿ ಕೊಡಗಳೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.