ಅಧ್ಯಯನ, ಸಂಶೋಧನೆಗೆ ಹೊಸ ಚರಿತ್ರೆಯನ್ನು ತೆರೆದುಕೊಳ್ಳಲಿದೆ: ಶ್ರೀಪಾದ ಬಿಚ್ಚುಗತ್ತಿ

Update: 2017-08-02 14:51 GMT

ಶಿಕಾರಿಪುರ, ಆ.2: ಇತಿಹಾಸ ಎಂದಿಗೂ ನಿಂತ ನೀರಲ್ಲ. ಅಧ್ಯಯನ ಸಂಶೋಧನೆಗೆ ಹೊಸ ಹೊಸ ಚರಿತ್ರೆಯನ್ನು ತೆರೆದುಕೊಳ್ಳಲಿದೆ ಎಂದು ಇತಿಹಾಸಕಾರ, ಸಂಶೋಧಕ ಶ್ರೀಪಾದ ಬಿಚ್ಚುಗತ್ತಿ ಅಭಿಪ್ರಾಯಪಟ್ಟರು.

ಬುಧವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಲ್ಲಮ ಸಭಾಂಗಣದಲ್ಲಿ ಕದಂಬ ವೇದಿಕೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ ಶಿಕಾರಿಪುರ ತಾಲೂಕು ಇತಿಹಾಸದ ಪುಟದಲ್ಲಿ ಬಹು ಮಹತ್ವದ ಸ್ಥಾನವನ್ನು ಹೊಂದಿದ್ದು, ತಾಲೂಕಿನ ಪ್ರತಿ ಹಳ್ಳಿ ಹಳ್ಳಿ ತನ್ನದೇ ಆದ ಮಹತ್ವ ಹೊಂದಿದೆ ಎಂದ ಅವರು, ಹಲ್ಮಿಡಿ ಶಾಸನ ಕನ್ನಡದ ಪ್ರಥಮ ಶಾಸನ ಎಂದು ಬಾವಿಸಲಾಗಿದ್ದು, ಇದೀಗ ತಾಲೂಕಿನ ತಾಳಗುಂದದಲ್ಲಿ ಖ್ಯಾತ ಇತಿಹಾಸಕಾರರು ನಡೆಸಿದ ಉತ್ಖನನದ ವೇಳೆ ದೊರೆತ ಶಾಸನದ ಲಿಪಿಗಳು ಹಲ್ಮಿಡಿಗಿಂತ ಪುರಾತನ ಎಂದು ಸಾಬೀತಾಗಿದ್ದು, ಈ ದಿಸೆಯಲ್ಲಿ ತಾಳಗುಂದದ ಶಾಸನವನ್ನು ಕನ್ನಡದ ಅತ್ಯಂತ ಪುರಾತನ ಶಾಸನವಾಗಿ ಘೋಷಿಸಲು ಪುರಾತತ್ವ ಇಲಾಖೆಗೆ ಶಿಫಾರಸು ಕಳುಹಿಸಲಾಗಿದೆ ಎಂದು ತಿಳಿಸಿದರು.

ನಾಡಿನ ಇತಿಹಾಸದಲ್ಲಿ ನಿತ್ಯ ಅಧ್ಯಯನ ಸಂಶೋಧನೆಯಿಂದ ಕ್ರಾಂತಿಕಾರಕ ಬದಲಾವಣೆ ಗೋಚರವಾಗುತ್ತಿದ್ದು, ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮನೋಭಾವ ಕುತೂಹಲದಿಂದ ಹೊಸ ತರ್ಕಕ್ಕೆ ನಾಂದಿಯಾಗಲಿದೆ. ತಪ್ಪಿದಲ್ಲಿ ವಿದ್ಯಾರ್ಥಿಗಳು ಜೀವಂತ ಶವಕ್ಕೆ ಸಮ ಎಂದು ಅಭಿಪ್ರಾಯಪಟ್ಟ ಅವರು, ತಾರ್ಕಿಕ ಚಿಂತನೆ ವಿಚಾರಗಳಿಂದ ಇತಿಹಾಸದ ಪುಟಗಳು ತೆರೆದುಕೊಳ್ಳಲಿದ್ದು, ತಾಲೂಕಿನ ಬನ್ನೂರು, ಈಸೂರಿನಲ್ಲಿ ಗಜಪೃಷ್ಠಾಕೃತಿಯ ಶಿಲೆಗಳು ದೊರೆತಿದೆ. ಈ ದಿಸೆಯಲ್ಲಿ ಭೌದ್ದಾರಾಧನೆಯ ಪ್ರಾದೇಶಿಕ ಇತಿಹಾಸದ ಬಗ್ಗೆ ಬೆಳಕು ಕಂಡುಬಂದಿದ್ದು ಭೌದ್ದಧರ್ಮ ಆಚರಣೆಯಲ್ಲಿರುವ ಬಗ್ಗೆ ದೃಡಪಟ್ಟಿದೆ ಎಂದು ತಿಳಿಸಿದರು.

ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ, ಉಪನ್ಯಾಸಕ ಡಾ.ಉಮೇಶ್ ಕುಂಸಿ ಮಾತನಾಡಿ, ಶಿಕಾರಿಪುರ ಅತ್ಯಂತ ವೈಭವಯುತ ಸಾಂಸ್ಕೃತಿಕ, ಐತಿಹಾಸಿಕ ತಾಲೂಕು ಎಂದು ಪ್ರಸಿದ್ದವಾಗಿದ್ದು, ತಕ್ಷಶಿಲೆ ನಂತರದಲ್ಲಿ ದೇಶದ 2 ನೇ ವಿಶ್ವವಿದ್ಯಾಲಯ ತಾಳಗುಂದ ಶೈಕ್ಷಣಿಕ ಕೇಂದ್ರವಾಗಿ ಇತಿಹಾಸದಲ್ಲಿ ಗುರುತಿಸಿಕೊಂಡಿದೆ ಎಂದ ಅವರು, ತಾಲೂಕಿನ ಪ್ರತಿ ಕೆರೆ, ದೇವಾಲಯಗಳು, ಇತಿಹಾಸ ಚರಿತ್ರೆಗೆ ಸಾಕ್ಷಿಯಾಗಿದೆ. ಏಷ್ಯಾ ಖಂಡದಲ್ಲಿ ಅತಿ ಹೆಚ್ಚು ಕೆರೆ ಹೊಂದಿದ ತಾಲೂಕಿನ ಹಲವು ಕೆರೆಗಳು ಒತ್ತವರಿಯಾಗಿ ವಿಕೋಪ ಉಂಟಾಗಿ ಮನುಷ್ಯನ ಜತೆಗೆ ಚರಿತ್ರೆ ನಾಶಕ್ಕೆ ಕಾರಣವಾಗುತ್ತಿದೆ. ಇದರೊಂದಿಗೆ ಸರ್ಕಾರದ ಕೆರೆ ಡಿನೋಟಿಫೈ ನಿರ್ಧಾರ ಇತಿಹಾಸದ ನಾಶದ ಆತಂಕವನ್ನು ಒಡ್ಡಿದೆ ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ.ಜಿ ಆರ್ ಹೆಗಡೆ ವಹಿಸಿ ಮಾತನಾಡಿದರು. ಪ್ರೊ. ಡಿ ಕೆ ಮಂಜಪ್ಪ ಪ್ರಾಸ್ಥಾವಿಕವಾಗಿ ಮಾತನಾಡಿದರು. ನ್ಯಾಕ್ ಸಂಚಾಲಕರಾದ ಡಾ.ಶೈಲಜಾ ಹೊಸಳ್ಳೇರ್, ಯಶೋಧಾ,ಈಶ್ವರ ಮತ್ತಿತರರು ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News