ಆಶ್ರಯ ನಿವೇಶನ ಹಂಚಿಕೆಯಲ್ಲಿ ನಡೆದಿರುವ ಅವ್ಯವಹಾರವನ್ನು ತನಿಖೆಗೆ ಒಳಪಡಿಸಲು ಒತ್ತಾಯ
ಸಾಗರ, ಆ.2: ಕಾಗೋಡು ತಿಮ್ಮಪ್ಪ ಅವರು ಭ್ರಷ್ಟಾಚಾರಕ್ಕೆ ಪೋಷಣೆ ನೀಡುತ್ತಿದ್ದಾರೆ. ನಗರವ್ಯಾಪ್ತಿಯಲ್ಲಿ ವಿತರಣೆ ಮಾಡಿರುವ ಆಶ್ರಯ ನಿವೇಶನ ಹಂಚಿಕೆಯಲ್ಲಿ ದೊಡ್ಡಮಟ್ಟದ ಗೋಲ್‌ಮಾಲ್ ನಡೆದಿದ್ದು, ಬಡಜನರಿಗೆ ಕಾಂಗ್ರೆಸ್ ಪಕ್ಷ ಹಾಗೂ ಕಾಗೋಡು ತಿಮ್ಮಪ್ಪ ಮೋಸ ಮಾಡಿದ್ದಾರೆ ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ದೂರಿದ್ದಾರೆ.
ಇಲ್ಲಿನ ನಗರಸಭೆಯಲ್ಲಿ ಬುಧವಾರ ಆಶ್ರಯ ನಿವೇಶನ ಹಂಚಿಕೆಯಲ್ಲಿ ನಡೆದಿರುವ ಅವ್ಯವಹಾರವನ್ನು ತನಿಖೆಗೆ ಒಳಪಡಿಸುವಂತೆ ಸಾರ್ವಜನಿಕರು ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಬೆಂಬಲ ಸೂಚಿಸಿ ಮಾತನಾಡಿದ ಅವರು, ಆಡಳಿತರೂಢ ಕಾಂಗ್ರೆಸ್ ಸದಸ್ಯರು ಒಂದೊಂದು ನಿವೇಶನಕ್ಕೆ ಸುಮಾರು 2 ಲಕ್ಷ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಿದರು. ಬಡವರಿಗೆ ನಿವೇಶನ ನೀಡುತ್ತೇವೆ ಎಂದು ದೇವರ ಮೇಲೆ ಪ್ರಮಾಣ ಮಾಡಿ ಎಂದು ತಮ್ಮ ಪಕ್ಷದ ನಗರಸಭಾ ಸದಸ್ಯರಿಗೆ ಕಿವಿಮಾತು ಹೇಳಿದ್ದ ಕಾಗೋಡು ತಿಮ್ಮಪ್ಪ ಅವರು ತಮ್ಮ ಮೂಗಿನ ನೇರದಲ್ಲಿಯೆ ನಿವೇಶನ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆದಿದ್ದರೂ ಮೌನವಾಗಿರುವುದು ಅವಮಾನಕರ ಸಂಗತಿಯಾಗಿದೆ. ಕಳೆದ ಇಪ್ಪತ್ತೈದು ಮುವತ್ತು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ಇದ್ದ ಬಡವರಿಗೆ ನಿವೇಶನ ನೀಡದೆ ಈಚೆಗೆ ಸಾಗರಕ್ಕೆ ವಲಸೆ ಬಂದವರಿಂದ 1 ಲಕ್ಷ ರೂ., ಹಾಲಿ ನಿವೇಶನ ಮನೆ ಇದ್ದವರಿಂದ 2 ಲಕ್ಷ ರೂಪಾಯಿ ಹಣ ಪಡೆದು ಕಾಂಗ್ರೆಸ್ ಸದಸ್ಯರು ಬಡವರಿಗೆ ಸಿಗಬೇಕಾಗಿದ್ದ ನಿವೇಶನವನ್ನು ಉಳ್ಳವರಿಗೆ ನೀಡಿದ್ದಾರೆ ಎಂದರು.
ಮುಂದಿನ ಒಂದೆರಡು ದಿನಗಳಲ್ಲಿ ನಿವೇಶನ ವಂಚಿತ ಬಡವರ ಬೃಹತ್ ಪ್ರತಿಭಟನೆಯನ್ನು ನಗರಸಭೆ ಎದುರಿನಲ್ಲಿ ನಡೆಸಲಾಗುತ್ತದೆ. ಹಾಲಿ ಪ್ರಕಟವಾಗಿರುವ ಆಶ್ರಯ ನಿವೇಶನ ಫಲಾನುಭವಿಗಳಲ್ಲಿ ಅರ್ಹರನ್ನು ಹೊರತು ಪಡಿಸಿ ಅನರ್ಹರನ್ನು ಪಟ್ಟಿಯಿಂದ ಕೈಬಿಡಬೇಕು. ಉಳ್ಳವರಿಗೆ ನೀಡಿದ ನಿವೇಶನವನ್ನು ಹಿಂದಕ್ಕೆ ಪಡೆದು, ಅದನ್ನು ಬಡವರಿಗೆ ನೀಡಬೇಕು. ಇಲ್ಲವಾದಲ್ಲಿ ಅಹೋರಾತ್ರಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಎಸ್.ಎಲ್.ಮಂಜುನಾಥ್, ಜನಜೀವನ್ ಜಾಗೃತ್ ವೇದಿಕೆಯ ಅಧ್ಯಕ್ಷ ಶಶಿಕುಮಾರ್ ಗಾಂಧಿನಗರ, ವಾಜಿ ಪುರಸಭಾ ಸದಸ್ಯ ಪ್ರಕಾಶ್, ಪ್ರಮುಖರಾದ ಗಣಪತಿ ಮಂಡಗಳಲೆ, ಕಲಸೆ ಚಂದ್ರಪ್ಪ ಇನ್ನಿತರರು ಹಾಜರಿದ್ದರು.