×
Ad

ಆ.4: ಕ್ರೈಸ್ಥ ಸೌಹಾರ್ಧ, ಪಾಸ್ಟರ್ಸ್‌ ಚಾರಿಟೆಬಲ್ ಟ್ರಸ್ಟ್ ಉದ್ಘಾಟಣೆ

Update: 2017-08-02 21:37 IST

ಶಿಕಾರಿಪುರ, ಆ.2: ತಾಲೂಕಿನಾದ್ಯಂತ ಕ್ರೈಸ್ಥರು ಸಮಾಜಮುಖಿ ಕಾರ್ಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಪ್ರತ್ಯೇಕವಾಗಿ ಗುರುತಿಸಿಕೊಂಡಿದ್ದು, ಸರ್ವರನ್ನು ಒಗ್ಗೂಡಿಸಿ ಸದೃಢಪಡಿಸುವ ದಿಸೆಯಲ್ಲಿ ಕ್ರೈಸ್ಥ ಸೌಹಾರ್ಧ ಹಾಗೂ ಪಾಸ್ಟರ್ಸ್‌ ಚಾರಿಟೆಬಲ್ ಟ್ರಸ್ಟ್ ಇದೇ 4 ರ ಶುಕ್ರವಾರ ವಿದ್ಯುಕ್ತವಾಗಿ ಉದ್ಘಾಟನೆಗೊಳ್ಳಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಸುರೇಶ್ ವೈ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನಾದ್ಯಂತ 8 ಸಾವಿರಕ್ಕಿಂತ ಅಧಿಕವಾಗಿರುವ ಕ್ರೈಸ್ಥರು 15 ಚರ್ಚ್ ಗಳಲ್ಲಿ ಪ್ರತ್ಯೇಕವಾಗಿ ಆರಾಧಿಸಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಪರಸ್ಪರ ಬೆರೆಯುವ ಜತೆಗೆ ಸಹಬಾಳ್ವೆಯ ಬದುಕಿಗಾಗಿ ಹಾಗೂ ಸಮಾಜದ ಸರ್ವರ ಜತೆಗೂಡಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಹೊಂದಿರುವ ಅಂಜಿಕೆಯನ್ನು ಹೋಗಲಾಡಿಸಲು ತಾಲೂಕು ಕ್ರೈಸ್ಥ ಒಕ್ಕೂಟ ಹಾಗೂ ಪಾಸ್ಟರ್ಸ್‌ ಅಸೋಸಿಯೇಶನ್ ವತಿಯಿಂದ ಕ್ರೈಸ್ಥ ಸೌಹಾರ್ಧ ಹಾಗೂ ಪಾಸ್ಟರ್ಸ್‌ ಚಾರಿಟೆಬಲ್ ಟ್ರಸ್ಟ್ ಅಸ್ಥಿತ್ವವನ್ನು ಪಡೆದಿದೆ ಎಂದ ಅವರು, ಇದೇ 4 ರ ಶುಕ್ರವಾರ ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಸಂಸದ ಯಡಿಯೂರಪ್ಪ ಹಾಗೂ ಶಾಸಕ ರಾಘವೇಂದ್ರ ಜಂಟಿಯಾಗಿ ಟ್ರಸ್ಟ್ ಉದ್ಘಾಟಿಸಲಿದ್ದು, ಸ್ಥಳೀಯ ಪುಷ್ಪಾಶ್ರಮದ ಫಾಧರ್ ಸಂತೋಷ ಆಲ್ಮೆಡಾ ಸಾನಿದ್ಯ ವಹಿಸಲಿದ್ದಾರೆ ಎಂದು ತಿಳಿಸಿದರು.

ಬೆಂಗಳೂರು ಯಲಹಂಕ ಉಪನಗರದ ಸಹೋದರ ಎನ್.ಎ ಪಾಲ್ ಏಸುವಿನ ಪವಿತ್ರ ಸಂದೇಶವನ್ನು ನೀಡಲಿದ್ದು, ಕಾರ್ಯಕ್ರಮದಲ್ಲಿ ತಾ.ಕ್ರೈಸ್ಥ ಒಕ್ಕೂಟದ ಅಧ್ಯಕ್ಷ ಎಂ.ವಿ ಪ್ರಸಾದ್, ತಹಸೀಲ್ದಾರ್ ಶಿವಕುಮಾರ್ ,ಡಿವೈಎಸ್ಪಿ ಸುಧಾಕರನಾಯ್ಕ, ಕಾಡಾ ಮಾಜಿ ಅಧ್ಯಕ್ಷ ನಗರದ ಮಹಾದೇವಪ್ಪ, ರಾಜ್ಯ ಉರ್ದು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ವೌಲಾನಾ ಅಮ್ಜದ್ ಹುಸೇನ್ ಹಾಫೀಜ್ ಸಹಿತ ಸರ್ವ ಸಮುದಾಯದ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಯೋವೃದ್ದ ಕ್ರೈಸ್ಥ ಮುಖಂಡರ ಸಹಿತ ಗಣ್ಯರಿಗೆ ಸನ್ಮಾನ ಹಾಗೂ ಸರ್ವರಿಗೂ ಕ್ರೈಸ್ಥನ ಸುವಾರ್ತೆಯ ಪುಸ್ತಕ, ಮಿನಿ ಬೈಬಲ್ ಉಚಿತವಾಗಿ ನೀಡಲಾಗುತ್ತದೆ ಎಂದ ಅವರು, ಶೈಕ್ಷಣಿಕ ಕ್ಷೇತ್ರ ನರ್ಸಿಂಗ್ ಸೇವೆಯಲ್ಲಿ ಕ್ರೈಸ್ಥರು ದೇಶಕ್ಕೆ ಬಹು ದೊಡ್ಡ ಕೊಡುಗೆಯನ್ನು ನೀಡುತ್ತಿದ್ದು ರಾಷ್ಟ್ರಾಭಿಮಾನದಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ತಿಳಿಸಿದರು. ಶೀಘ್ರದಲ್ಲಿ ಸಂಘಟನೆ ವತಿಯಿಂದ ರಕ್ತದಾನ, ನೇತ್ರದಾನ, ಸಸಿ ನೆಡುವ ಕಾರ್ಯಕ್ರಮ, ವಿದ್ಯಾರ್ಥಿ ವೇತನ ವಿತರಣೆ, ಉಚಿತ ಪುಸ್ತಕ ವಿತರಣೆ ಮತ್ತಿತರ ಸಮಾಜಮುಖಿ ಕಾರ್ಯಗಳ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಟ್ರಸ್ಟ್ ಉಪಾಧ್ಯಕ್ಷ ಫಾಧರ್ ವೈ.ಜಿ ಪೌಲರಾಜ್, ಅಂತೋಣಿದಾಸ್, ಕ್ರೈಸ್ಥ ಒಕ್ಕೂಟದ ಅಧ್ಯಕ್ಷ ಎಂ.ವಿ ಪ್ರಸಾದ್(ಪೆಂಚಾಲಯ್ಯ), ದೇವರಾಜ್ ಮತ್ತಿತರರು ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News